ಲಂಡನ್: ಯುವತಾರೆ ಕಾರ್ಲೋಸ್ ಅಲ್ಕರಾಜ್ ಅವರು ಭಾನುವಾರ ನಡೆದ ಫೈನಲ್‌ನಲ್ಲಿ ನೇರ ಸೆಟ್‌ಗಳಿಂದ ಏಳು ಬಾರಿಯ ಚಾಂಪಿಯನ್ ನೊವಾಕ್ ಜೊಕೊವಿಚ್ ಅವರನ್ನು ಸದೆಬಡಿದು ವಿಂಬಲ್ಡನ್ ಟೆನಿಸ್ ಸಿಂಗಲ್ಸ್ ಪ್ರಶಸ್ತಿ ಉಳಿಸಿಕೊಂಡರು. ಪುರುಷರ ಟೆನಿಸ್‌ನಲ್ಲಿ ಹೊಸಬರ ಯುಗ ಆರಂಭವಾಗಿದೆ ಎಂಬುದನ್ನು ತಮ್ಮ ನಿರ್ದಯ ಆಟದ ಮೂಲಕ ಒತ್ತಿ ಹೇಳಿದರು.
ಶಕ್ತಿಶಾಲಿ ಹೊಡೆತಗಳ ಜೊತೆಗೆ ನವಿರಾದ ‘ಡ್ರಾಪ್’ಗಳ ಮಿಶ್ರಣ ಮಾಡಿ ಆಡಿದ ಮೂರನೇ ಶ್ರೇಯಾಂಕದ ಅಲ್ಕರಾಜ್ 6–2, 6–2, 7–6 (7–4)ರಿಂದ ಜಯಗಳಿಸಿದರು. ಇದು ಸ್ಪೇನ್ ಆಟಗಾರನಿಗೆ ವೃತ್ತಿ ಜೀವನದ ನಾಲ್ಕನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ.
1968ರಲ್ಲಿ ಟೆನಿಸ್‌ನಲ್ಲಿ ಓಪನ್ ಯುಗ ಆರಂಭವಾದ ಮೇಲೆ 21 ವರ್ಷ ವಯಸ್ಸಿನೊಳಗೇ ಅತಿ ಹೆಚ್ಚು (ತಲಾ ನಾಲ್ಕು) ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದು ದಾಖಲೆ ಸ್ಥಾಪಿಸಿದ ಮೂವರು ಮಹಾನ್ ಆಟಗಾರರ ಸಾಲಿಗೆ ಈಗ ಅಲ್ಕರಾಜ್ ಸೇರ್ಪಡೆಯಾದರು. ಜರ್ಮನಿಯ ಬೋರಿಸ್ ಬೆಕರ್, ಸ್ವೀಡನ್‌ನ ಬ್ಯೋನ್ ಬೋರ್ಗ್ ಮತ್ತು ಮ್ಯಾಟ್ಸ್ ವಿಲಾಂಡರ್ ಇತರ ಮೂವರು.
ಕೆಲವೇ ವಾರಗಳ ಹಿಂದೆ ಮೊಣಗಂಟಿನ
ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ 37 ವರ್ಷದ ಜೊಕೊವಿಚ್ ಅವರು 25ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆಲುವಿನ ಯತ್ನದಲ್ಲಿದ್ದರು. ಸರ್ಬಿಯಾದ ಆಟಗಾರ ಅದನ್ನು ಸಾಧಿಸಿದಲ್ಲಿ ಪುರುಷರ ಅಥವಾ ಮಹಿಳೆಯರ ಟೆನಿಸ್‌ನಲ್ಲಿ
ದಾಖಲೆಯಾಗುತಿತ್ತು.
ನಿರುತ್ತರರಾದ ಜೋಕೊವಿಚ್: ಆದರೆ ಹದವಾದ ಬಿಸಿಲಿನ ಮಧ್ಯೆ ಸೆಂಟರ್‌ಕೋರ್ಟ್‌ನಲ್ಲಿ ನಡೆದ ಪಂದ್ಯದಲ್ಲಿ ಅಲ್ಕರಾಜ್ ಅವರ ಮಿಂಚಿನ ಆಟದೆದುರು ಜೊಕೊ ನಿರುತ್ತರರಾದರು. ಬ್ಯಾಕ್ ಕೋರ್ಟ್‌ನಿಂದ ಒಂದರ ಮೇಲೊಂದು ಪ್ರಬಲ ಹೊಡೆತಗಳನ್ನು ಅಟ್ಟುತ್ತಿದ್ದ ಅಲ್ಕರಾಜ್, ತಮ್ಮ ಟ್ರೇಡ್‌ಮಾರ್ಕ್ ‘ಡ್ರಾಪ್’ ಶಾಟ್‌ಗಳನ್ನೂ ಆಗಾಗ ಆಡಿ ಪ್ರೇಕ್ಷಕರಿಗೆ ರಸದೌತಣ ಬಡಿಸಿದರು.
ಮೊದಲ ಗೇಮ್‌ನಿಂದಲೇ ಸ್ಪೇನ ಆಟಗಾರ ಹಿಡಿತ ಪಡೆದರು. ಐದನೇ ಗೇಮ್‌ಅನ್ನು ಜೊಕೊವಿಚ್ ಡಬಲ್‌ಫಾಲ್ಟ್ ಮೂಲಕ ಕಳೆದುಕೊಂಡಾಗ ಅಲ್ಕರಾಜ್ 4–1 ಮುನ್ನಡೆ ಪಡೆದರು. ಹತ್ತನೇ ಬಾರಿ ಇಲ್ಲಿ ಫೈನಲ್ ಆಡುತ್ತಿರುವ ಜೊಕೊವಿಚ್ ತಮ್ಮ ಮುಂದಿನ ಸರ್ವ್ ವೇಳೆ ಒಂದೂ ಪಾಯಿಂಟ್ ಬಿಟ್ಟುಕೊಡದೇ ಹಿನ್ನಡೆಯನ್ನು 5–2ಕ್ಕೆ ಇಳಿಸಿದರು. ಆದರೆ ಅಲ್ಕರಾಜ್ ತಮ್ಮ ಗೇಮ್ ಉಳಿಸಿ ಸೆಟ್ ಗೆದ್ದರು.
ಎರಡನೇ ಸೆಟ್‌ನಲ್ಲೂ ಅಲ್ಕರಾಜ್ ಹಿಡಿತ ಮುಂದುವರಿಯಿತು. ಮೂರನೇ ಸೆಟ್‌ನಲ್ಲಿ ಜೊಕೊವಿಚ್ ಹೋರಾಟ ತೋರಿ ಟೈಬ್ರೇಕರ್‌ವರೆಗೆ ಬೆಳೆಸುವಲ್ಲಿ ಯಶಸ್ವಿ ಆದರು.
ಒಳ್ಳೆಯ ಹಣಾಹಣಿಯ ನಿರೀಕ್ಷೆಯೊಡನೆ ಬಂದಿದ್ದ ಪ್ರೇಕ್ಷಕರಲ್ಲಿ ವೇಲ್ಸ್‌ನ ರಾಜಕುಮಾರಿ ಕ್ಯಾಥರಿನ್ ಅವರೂ ಒಳಗೊಂಡಿದ್ದರು. ಆದರೆ ಅವರಿಗೆ ಏಕಪಕ್ಷೀಯ ಪಂದ್ಯ ನಡೆದಿದ್ದು ನಂಬಲಾಗಲಿಲ್ಲ.
ಜೊಕೊವಿಚ್ ಈ ವರ್ಷ ಒಂದೂ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆಲ್ಲಲು ಆಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.