ADVERTISEMENT

ಬ್ರಿಸ್ಬೇನ್‌ ಇಂಟರ್‌ನ್ಯಾಷನಲ್‌ ಟೂರ್ನಿ: ಶರಪೋವಾಗೆ ‘ವೈಲ್ಡ್‌ ಕಾರ್ಡ್’

ಟೆನಿಸ್ ಟೂರ್ನಿ

ಏಜೆನ್ಸೀಸ್
Published 31 ಡಿಸೆಂಬರ್ 2019, 14:18 IST
Last Updated 31 ಡಿಸೆಂಬರ್ 2019, 14:18 IST
ಮರಿಯಾ ಶರಪೋವಾ
ಮರಿಯಾ ಶರಪೋವಾ   

ಬ್ರಿಸ್ಬೇನ್‌: ರಷ್ಯಾದ ಟೆನಿಸ್‌ ತಾರೆ ಮರಿಯಾ ಶರಪೋವಾ ಅವರು ಮುಂದಿನ ವಾರದಿಂದ ಆರಂಭವಾಗುವ ಬ್ರಿಸ್ಬೇನ್‌ ಇಂಟರ್‌ನ್ಯಾಷನಲ್‌ ಟೂರ್ನಿಗೆ ‘ವೈಲ್ಡ್‌ ಕಾರ್ಡ್‌’ ಅರ್ಹತೆ ಗಳಿಸಿದ್ದಾರೆ.

ಆಸ್ಟ್ರೇಲಿಯಾ ಓಪನ್‌ಗೆ ಪೂರ್ವಭಾವಿ ಸಿದ್ಧತೆ ಕೈಗೊಳ್ಳಲು ವೇದಿಕೆ ಎನಿಸಿರುವ ಬ್ರಿಸ್ಬೇನ್‌ ಟೂರ್ನಿ ಜನವರಿ 6ರಿಂದ 12ರವರೆಗೆ ಕ್ವೀನ್ಸ್‌ಲ್ಯಾಂಡ್‌ ಟೆನಿಸ್‌ ಸೆಂಟರ್‌ನಲ್ಲಿ ನಡೆಯಲಿದೆ.

ಶರಪೋವಾ ಅವರು 2019ರಲ್ಲಿ ಭುಜದ ನೋವಿನಿಂದ ಬಳಲಿದ್ದರು. 15 ಪಂದ್ಯಗಳನ್ನಷ್ಟೇ ಆಡಿದ್ದ ಅವರು ಮಹಿಳಾ ಸಿಂಗಲ್ಸ್‌ ವಿಭಾಗದ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 133ನೇ ಸ್ಥಾನಕ್ಕೆ ಕುಸಿದಿದ್ದರು.

ADVERTISEMENT

‘ಹಲವು ಏಳು ಬೀಳುಗಳ ನಂತರ ಹೋದ ವರ್ಷ ಟೆನಿಸ್‌ ಅಂಗಳಕ್ಕೆ ಮರಳಿದ್ದೆ. ಗಾಯದ ಕಾರಣ ಹಿಂದಿನ ಋತುವಿನಲ್ಲಿ ಹೆಚ್ಚು ಪಂದ್ಯಗಳನ್ನು ಆಡಲು ಆಗಿರಲಿಲ್ಲ. ಈ ಬಾರಿ ಹೊಸ ಹುಮ್ಮಸ್ಸಿನೊಂದಿಗೆ ಸೆಣಸಿ ಪ್ರಶಸ್ತಿಗಳನ್ನು ಗೆಲ್ಲಲು ಪ್ರಯತ್ನಿಸುತ್ತೇನೆ. ಈಗ ನನಗೆ 32 ವರ್ಷ ವಯಸ್ಸು. ಹೀಗಿದ್ದರೂ ಟೆನಿಸ್‌ ಬಗೆಗಿನ ಒಲವು ಒಂದಿಷ್ಟೂ ಕಡಿಮೆಯಾಗಿಲ್ಲ’ಎಂದು ಶರಪೋವಾ ಹೇಳಿದ್ದಾರೆ.

ರಷ್ಯಾದ ಈ ಆಟಗಾರ್ತಿ 2015ರಲ್ಲಿ ಬ್ರಿಸ್ಬೇನ್‌ ಟೂರ್ನಿಯಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದರು. ಈ ಬಾರಿ ಅವರಿಗೆ ಆಸ್ಟ್ರೇಲಿಯಾದ ಆಟಗಾರ್ತಿ, ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಆ್ಯಷ್ಲೆ ಬಾರ್ಟಿ ಮತ್ತು ಜಪಾನ್‌ನ ನವೊಮಿ ಒಸಾಕ ಅವರಿಂದ ಪ್ರಬಲ ಪೈಪೋಟಿ ಎದುರಾಗುವ ನಿರೀಕ್ಷೆ ಇದೆ.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿರುವ ಕ್ಯಾರೋಲಿನಾ ಪ್ಲಿಸ್ಕೋವಾ, ಎಲಿನಾ ಸ್ವಿಟೋಲಿನಾ, ಪೆಟ್ರಾ ಕ್ವಿಟೋವಾ ಮತ್ತು ಕಿಕಿ ಬರ್ಟೆನ್ಸ್‌ ಅವರೂ ಕಣದಲ್ಲಿದ್ದಾರೆ.

ಶರಪೋವಾ ಅವರು ಐದು ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳನ್ನು ಗೆದ್ದ ಹಿರಿಮೆ ಹೊಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.