ಲಂಡನ್: ಜೆಕ್ ರಿಪಬ್ಲಿಕ್‌ನ ಮಾರ್ಕೆತ ವೊಂದ್ರೊಸೋವಾ 6–4, 6–4 ನೇರ ಸೆಟ್‌ಗಳಿಂದ ಒನ್ಸ್ ಜಬೇರ್ ಅವರ ಮೇಲೆ ಅನಿರೀಕ್ಷಿತ ಜಯಗಳಿಸುವ ಮೂಲಕ ವಿಂಬಲ್ಡನ್ ಮಹಿಳಾ ಸಿಂಗಲ್ಸ್ ಪ್ರಶಸ್ತಿ ಗೆದ್ದ ಮೊದಲ ಶ್ರೇಯಾಂಕರಹಿತ ಆಟಗಾರ್ತಿ ಎಂಬ ಶ್ರೇಯಕ್ಕೆ ಶನಿವಾರ ಭಾಜನರಾದರು.
ಪ್ರಶಸ್ತಿಗೆ ನೆಚ್ಚಿನ ಆಟಗಾರ್ತಿಯಾಗಿದ್ದ ಟ್ಯುನೀಷಿಯಾದ ಜಬೇರ್ ಸತತ ಎರಡನೇ ವರ್ಷವೂ ಫೈನಲ್‌ನಲ್ಲಿ ಎದುರಾದ ಸೋಲಿನಿಂದ ಕಣ್ಣೀರಾದರು. ಕಳೆದ ವರ್ಷ ಅವರು ಎಲಿನಾ ರಿಬಾಕಿನಾ ಅವರಿಗೆ ಮಣಿದಿದ್ದರು. ನಂತರ ಅಮೆರಿಕ ಓಪನ್ ಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ಇಗಾ ಶ್ವಾಂಟೆಕ್ ಅವರಿಗೆ ಸೋತಿದ್ದರು.
ವೊಂದ್ರೊಸೋವಾ ಸ್ಥಿರ ಆಟದ ಪ್ರದರ್ಶನ ನೀಡಿದರೆ, ಜಬೇರ್ ಎಂದಿನ ಗುಣಮಟ್ಟದ ಆಟ ಆಡಲಿಲ್ಲ. 31 ಬಾರಿ ತಪ್ಪುಗಳನ್ನು ಎಸಗಿದ್ದು ದುಬಾರಿಯಾಯಿತು. ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆದ್ದ ಮೊದಲ ಅರಬ್ ಹಾಗೂ ಆಫ್ರಿಕದ ಆಟಗಾರ್ತಿ ಎನಿಸುವ ಹಿರಿಮೆ ಮತ್ತೆ ತಪ್ಪಿಹೋಯಿತು.
‘ಇದು ನನ್ನ ಬದುಕಿನಲ್ಲಿ ಅತ್ಯಂತ ನೋವಿನ ಕ್ಷಣ’ ಎಂದು ಪ್ರೇಕ್ಷಕರ ನೆಚ್ಚಿನ ಆಟಗಾರ್ತಿ ಒತ್ತರಿಸಿ ಬರುತ್ತಿದ್ದ ಕಣ್ಣೀರನ್ನು ತಡೆದು ಹೇಳಿದರು. ‘ಆದರೆ ನಾನು ಇಲ್ಲಿಗೇ ಬಿಟ್ಟುಕೊಡುವುದಿಲ್ಲ. ಮುಂದಿನ ವರ್ಷ ಪ್ರಬಲ ಆಟಗಾರ್ತಿಯಾಗಿ ಮರಳುವೆ. ಮುಂದೊಂದು ದಿನ ಟೂರ್ನಿಯನ್ನು ಗೆದ್ದೇ ತೀರುವೆ’ ಎಂದು ಹೇಳಿದರು.
ವೊಂದ್ರೊಸೋವಾ ಈ ಹಿಂದೆ ನಾಲ್ಕು ಸಲ ವಿಂಬಲ್ಡನ್‌ನಲ್ಲಿ ಆಡಿದ್ದರೂ ಜಯಗಳಿಸಿದ್ದು ಒಂದೇ ಒಂದು ಪಂದ್ಯವನ್ನು. ಕಳೆದ ವರ್ಷ ಮಣಿಕಟ್ಟಿಗೆ ಬ್ಯಾಂಡೇಜ್ ಕಟ್ಟಿ ಆಡಿದ್ದರು.
ಆದರೆ ಕಳೆದ ಎರಡು ವಾರದ ಅವಧಿಯಲ್ಲಿ ನಾಲ್ಕು ಶ್ರೇಯಾಂಕ ಆಟಗಾರ್ತಿಯರನ್ನು ಬಗ್ಗುಬಡಿದಿದ್ದು ಕಡಿಮೆ ಸಾಹಸವಲ್ಲ. ಎಂಟರ ಘಟ್ಟದಲ್ಲಿ ನಾಲ್ಕನೇ ಶ್ರೇಯಾಂಕದ ಜೆಸ್ಸಿಕಾ ಪೆಗುಲಾ ವಿರುದ್ಧ, ಸೆಮಿಫೈನಲ್‌ನಲ್ಲಿ ಉಕ್ರೇನ್‌ನ ಎಲಿನಾ ಸ್ವಿಟೋಲಿನಾ ವಿರುದ್ಧ ಜಯಗಳಿಸಿದ್ದರು.
‘ಈಗೇನಾಗುತ್ತಿದೆ ಎಂಬುದೇ ನನಗೆ ತಿಳಿಯುತ್ತಿಲ್ಲ’ ಎಂದು ವೇಲ್ಸ್ ರಾಜಕುವರಿಯಿಂದ ಪ್ರಶಸ್ತಿ ಸ್ವೀಕರಿಸಿದ ನಂತರ ವೊಂದ್ರೊಸೋವಾ ಪ್ರತಿಕ್ರಿಯಿಸಿದರು. ಕಳೆದ ಎರಡು ವಾರ, ತವರು ಪ್ರೇಗ್‌ನಲ್ಲಿ ಮನೆಯ ಮುದ್ದಿನ ಬೆಕ್ಕು ‘ಫ್ರಾಂಕಿ’ಯ ಕಾಳಜಿ ವಹಿಸಿದ್ದ ಪತಿ ಸ್ಟೀಪನ್ ಸಿಮೆಕ್ ಫೈನಲ್‌ಗೆ ಹಾಜರಿದ್ದು ಪತ್ನಿಗೆ ಹುರಿದುಂಬಿಸಿದರು.
ಕಳೆದ ಆರು ವರ್ಷಗಳಲ್ಲಿ ಬೇರೆ ಬೇರೆ ಆಟಗಾರ್ತಿಯರು ಇಲ್ಲಿ ಸಿಂಗಲ್ಸ್ ಕಿರೀಟ ಧರಿಸಿರುವುದು ವಿಶೇಷ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.