ADVERTISEMENT

ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿ: ಮೆಡ್ವೆಡೆವ್‌, ಮುಗುರುಜಾ ಮುನ್ನಡೆ

ಯುವ ಆಟಗಾರ್ತಿ ಲೇಲಾಗೆ ಸೋಲು

ಏಜೆನ್ಸೀಸ್
Published 18 ಜನವರಿ 2022, 13:24 IST
Last Updated 18 ಜನವರಿ 2022, 13:24 IST
ಡ್ಯಾನಿಲ್ ಮೆಡ್ವೆಡೆವ್ ಆಟದ ವೈಖರಿ– ರಾಯಿಟರ್ಸ್ ಚಿತ್ರ
ಡ್ಯಾನಿಲ್ ಮೆಡ್ವೆಡೆವ್ ಆಟದ ವೈಖರಿ– ರಾಯಿಟರ್ಸ್ ಚಿತ್ರ   

ಮೆಲ್ಬರ್ನ್‌: ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರರಲ್ಲಿ ಒಬ್ಬರಾದ ರಷ್ಯಾದ ಡ್ಯಾನಿಲ್ ಮೆಡ್ವೆಡೆವ್ ಹಾಗೂ ಸ್ಪೇನ್‌ನ ಗಾರ್ಬೈನ್‌ ಮುಗುರುಜಾ ಅವರು ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ.

ರಾಡ್‌ ಲೇವರ್ ಅರೆನಾದಲ್ಲಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಹಣಾಹಣಿಯಲ್ಲಿ ಮೆಡ್ವೆಡೆವ್‌6-1, 6-4, 7-6 (3)ರಿಂದ ಸ್ವಿಟ್ಜರ್ಲೆಂಡ್‌ನ ಹೆನ್ರಿ ಲಾಕ್ಸೊನೆನ್‌ ಅವರನ್ನು ಮಣಿಸಿದರು.

ಲಸಿಕೆ ಹಾಗೂ ವೀಸಾ ಪ್ರಕರಣದಲ್ಲಿ ಹಿನ್ನಡೆ ಅನುಭವಿಸಿದ್ದ ಸರ್ಬಿಯಾದ ನೋವಾಕ್‌ ಜೊಕೊವಿಚ್‌ ಟೂರ್ನಿಯಲ್ಲಿ ಆಡಲು ಅವಕಾಶ ಸಿಗದೆ ಈಗಾಗಲೇ ತವರಿಗೆ ಮರಳಿದ್ದಾರೆ. ಮೆಲ್ಬರ್ನ್ ಪಾರ್ಕ್‌ನಲ್ಲಿ ನೊವಾಕ್ ಸಾಧಿಸಿದಷ್ಟು ಯಶಸ್ಸು ಯಾರೂ ಸಾಧಿಸಿಲ್ಲ. ಒಂಬತ್ತು ಬಾರಿ ಫೈನಲ್‌ ತಲುಪಿದ್ದ ಅವರು ಒಂದು ಬಾರಿಯೂ ಸೋತಿರಲಿಲ್ಲ. ಅವರ ವಿರುದ್ಧ ಪ್ರಶಸ್ತಿ ಸುತ್ತಿನಲ್ಲಿ ನಿರಾಸೆ ಅನುಭವಿಸಿದವರಲ್ಲಿ ಮೆಡ್ವೆಡೆವ್ ಕೂಡ ಒಬ್ಬರು. ಕಳೆದ ವರ್ಷದ ಚಾಂಪಿಯನ್‌ಷಿಪ್‌ನಲ್ಲಿ ರಷ್ಯಾ ಆಟಗಾರ ಸೋಲನುಭವಿಸಿದ್ದರು.

ADVERTISEMENT

ಆದರೆ ಅಮೆರಿಕ ಓಪನ್ ಟೂರ್ನಿಯಲ್ಲಿ ಮುಯ್ಯಿ ತೀರಿಸಿದ್ದರು ಮೆಡ್ವೆಡೆವ್‌.

ಮಹಿಳಾ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನಲ್ಲಿ ಮೂರನೇ ಶ್ರೇಯಾಂಕದ ಮುಗುರುಜಾ ಅವರು6-3, 6-4ರಿಂದ ಫ್ರಾನ್ಸ್‌ನ ಕ್ಲಾರಾ ಬ್ಲುರೆಲ್ ಎದುರು ಗೆದ್ದರು. 2020ರ ಆವೃತ್ತಿಯಲ್ಲಿ ಸ್ಪೇನ್ ಆಟಗಾರ್ತಿ, ಅಮೆರಿಕದ ಸೋಫಿಯಾ ಕೆನಿನ್‌ ಎದುರು ಮಣಿದು ರನ್ನರ್ ಅಪ್‌ ಆಗಿದ್ದರು.

ಲೇಲಾಗೆ ನಿರಾಸೆ: ಕೆನಡಾದ 19 ವರ್ಷದ ಪ್ರತಿಭೆ ಲೇಲಾ ಫರ್ನಾಂಡೀಸ್‌ ಅವರು ಮೊದಲ ಸುತ್ತಿನ ಹಣಾಹಣಿಯಲ್ಲೇ ನಿರಾಸೆ ಅನುಭವಿಸಿದರು. ವೈಲ್ಡ್‌ಕಾರ್ಡ್‌ ಪ್ರವೇಶ ಪಡೆದಿದ್ದ ಆಸ್ಟ್ರೇಲಿಯಾ ಆಟಗಾರ್ತಿ ಮ್ಯಾಡಿಸನ್‌ ಇಂಗ್ಲಿಸ್‌6-2, 6-4ರಿಂದ ಲೇಲಾ ಮೇಲೆ ಗೆದ್ದರು. ಅಮೆರಿಕ ಓಪನ್ ಓಪನ್‌ ಟೂರ್ನಿಯಲ್ಲಿ ರನ್ನರ್ ಅಪ್ ಆಗಿದ್ದ ಲೇಲಾ, ಆ ಬಳಿಕ ಮೊದಲ ಬಾರಿ ಗ್ರ್ಯಾನ್‌ಸ್ಲಾಮ್ ಟೂರ್ನಿಯಲ್ಲಿ ಕಣಕ್ಕಿಳಿದಿದ್ದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ 133ನೇ ಸ್ಥಾನದಲ್ಲಿರುವ ಮ್ಯಾಡಿಸನ್‌ ಎದುರು ಲೇಲಾ 30 ಸ್ವಯಂಕೃತ ತಪ್ಪುಗಳನ್ನು ಎಸಗಿದರು. ಮ್ಯಾಡಿಸನ್‌ ಗ್ರ್ಯಾನ್‌ಸ್ಲಾಮ್‌ ಟೂರ್ನಿಯಲ್ಲಿ ಮೊದಲ ಜಯದ ಸಂಭ್ರಮ ಆಚರಿಸಿದರು.

ಮಹಿಳಾ ಸಿಂಗಲ್ಸ್ ವಿಭಾಗದ ಇನ್ನುಳಿದ ಪಂದ್ಯಗಳಲ್ಲಿ ಆರನೇ ಶ್ರೇಯಾಂಕದ ಅನೆಟ್‌ ಕೊಂಟಾವೀಟ್‌ 6-2, 6-3ರಿಂದ ಕ್ಯಾತರಿನಾ ಸಿನಿಯಾಕೊವಾ ಎದುರು, 2020ರ ಫ್ರೆಂಚ್‌ ಓಪನ್ ಚಾಂಪಿಯನ್‌ ಇಗಾ ಸ್ವೆಟೆಕ್‌6-3 6-0ರಿಂದ ಹ್ಯಾರಿಯಟ್‌ ಡಾರ್ಟ್‌ ಎದುರು ಗೆದ್ದರು. ಅನಸ್ತಾಸಿಯಾ ಪಾವ್ಲಿಚೆಂಕೊವಾ 6–2, 6–1ರಿಂದ ಅನ್ನಾ ಬೊಂದಾರ್, ಸಿಮೊನಾ ಹಲೆಪ್‌ 6–4, 6–3ರಿಂದ ಮ್ಯಾಗ್ಡಾಲಿನಾ ಫ್ರೇಕ್ ವಿರುದ್ಧ ಎರಡನೇ ಸುತ್ತಿಗೆ ಮುನ್ನಡೆದರು.

ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಆ್ಯಂಡ್ರೆ ರುಬ್ಲೆವ್‌6-3, 6-2, 6-2ರಿಂದ ಗಿಯಾನ್ಲುಕಾ ಮ್ಯಾಜರ್ ಎದುರು, ಜಾನಿಕ್ ಸಿನ್ನರ್‌6-4, 7-5, 6-1ರಿಂದ ಜೋವಾ ಸೌಸಾ ವಿರುದ್ಧ, ಡಿಗೊ ಸ್ವಾರ್ಟ್ಜ್‌ಮನ್‌6-3, 6-4, 7-5ರಿಂದ ಫಿಲಿಪ್‌ ಕ್ರಾಜಿನೊವಿಕ್ ಎದುರು ಗೆದ್ದು ಎರಡನೇ ಸುತ್ತು ಪ್ರವೇಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.