ADVERTISEMENT

ನ್ಯಾಷನಲ್‌ ಬ್ಯಾಂಕ್‌ ಓಪನ್‌ ಟೆನಿಸ್ ಟೂರ್ನಿ: ಮೆಡ್ವೆಡೆವ್‌ಗೆ ಪ್ರಶಸ್ತಿ ಗರಿ

ಸೋತ ಒಪೆಲ್ಕಾ

ಏಜೆನ್ಸೀಸ್
Published 16 ಆಗಸ್ಟ್ 2021, 14:34 IST
Last Updated 16 ಆಗಸ್ಟ್ 2021, 14:34 IST
ನೊವಾಕ್‌ ಜೊಕೊವಿಚ್‌– ರಾಯಿಟರ್ಸ್ ಚಿತ್ರ
ನೊವಾಕ್‌ ಜೊಕೊವಿಚ್‌– ರಾಯಿಟರ್ಸ್ ಚಿತ್ರ   

ಟೊರಂಟೊ, ಕೆನಡಾ: ಅಮೆರಿಕದ ರೇಲಿ ಒಪೆಲ್ಕಾ ಸವಾಲು ಮೀರಿದ ರಷ್ಯಾದ ಡೇನಿಯಲ್ ಮೆಡ್ವೆಡೆವ್‌ ನ್ಯಾಷನಲ್ ಬ್ಯಾಂಕ್ ಓಪನ್ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದಾರೆ.

ಭಾನುವಾರ ತಡರಾತ್ರಿ ನಡೆದ ಫೈನಲ್ ಹಣಾಹಣಿಯಲ್ಲಿ ಮೆಡ್ವೆಡೆವ್‌ ಅವರಿಗೆ 6-4, 6-3ರಿಂದ ಗೆಲುವು ಒಲಿಯಿತು.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿರುವ ಮೆಡ್ವೆಡೆವ್‌ 87 ನಿಮಿಷಗಳ ಪಂದ್ಯದಲ್ಲಿ ಮೂರು ಬಾರಿ ಎದುರಾಳಿಯ ಸರ್ವ್ ಮುರಿದರು. ನಾಲ್ಕು ಬ್ರೇಕ್ ಪಾಯಿಂಟ್ಸ್ ಗಳಿಸಿದರು. ಇಲ್ಲಿ ಜಯ ಸಾಧಿಸುವುದರೊಂದಿಗೆ 21 ವರ್ಷಗಳ ಬಳಿಕ ಕೆನಡಾದಲ್ಲಿ ಟ್ರೋಫಿ ಗೆದ್ದ ರಷ್ಯಾದ ಆಟಗಾರ ಎನಿಸಿಕೊಂಡರು. 2000ರಲ್ಲಿ ಮರಾತ್ ಸಫಿನ್ ಈ ಸಾಧನೆ ಮಾಡಿದ್ದರು.

ADVERTISEMENT

ಮಾಸ್ಟರ್‌ 1000 ವಿಭಾಗದಲ್ಲಿ ಮೆಡ್ವೆಡೆವ್ ಅವರಿಗೆ ಇದು ಐದನೇ ಫೈನಲ್‌ ಆಗಿತ್ತು.

ಮುಂದಿನ ವಾರ ನಡೆಯಲಿರುವ ಸಿನ್ಸಿನಾಟಿ ಮಾಸ್ಟರ್ಸ್‌ನಲ್ಲಿ ಮೆಡ್ವೆಡೆವ್ ಅವರಿಗೆ ಅಗ್ರಶ್ರೇಯಾಂಕ ಲಭಿಸಿದೆ. ಆಗಸ್ಟ್‌ 30ರಿಂದ ನಡೆಯಲಿರುವ ಈ ಟೂರ್ನಿಯು ಅಮೆರಿಕ ಓಪನ್ ಟೂರ್ನಿಗೆ ಕೊನೆಯ ಅಭ್ಯಾಸವಾಗಲಿದೆ.

ರ‍್ಯಾಂಕಿಂಗ್‌: 334ನೇ ವಾರ ಅಗ್ರಸ್ಥಾನದಲ್ಲಿ ಜೊಕೊವಿಚ್‌

ಎಟಿಪಿ ರ‍್ಯಾಂಕಿಂಗ್‌ನಲ್ಲಿ ಸರ್ಬಿಯಾದ ನೊವಾಕ್ ಜೊಕೊವಿಚ್‌ ಅವರ ಅಗ್ರಸ್ಥಾನ ಅಬಾಧಿತವಾಗಿದೆ. 334ನೇ ವಾರ ಅವರು ಈ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಅಮೆರಿಕ ಓಪನ್ ಮೇಲೆ ಕಣ್ಣಿಟ್ಟಿರುವ ಅವರು ಮೊದಲ ಸ್ಥಾನ ಉಳಿಸಿಕೊಳ್ಳುವತ್ತ ಚಿತ್ತ ನೆಟ್ಟಿದ್ದಾರೆ.

ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್‌ 310 ವಾರಗಳ ಅಗ್ರಸ್ಥಾನದಲ್ಲಿದ್ದರು. ಹಲವು ಟೂರ್ನಿಗಳಿಂದ ದೂರ ಉಳಿದಿರುವ ಅವರು ಸದ್ಯ ಒಂಬತ್ತನೇ ಸ್ಥಾನದಲ್ಲಿದ್ದಾರೆ.

‘ಇನ್ನೂ ಕೆಲವು ತಿಂಗಳು ನಾನು ಟೆನಿಸ್‌ ಆಡುವುದಿಲ್ಲ‘ ಎಂದು ಫೆಡರರ್‌ ಇನ್‌ಸ್ಟಾಗ್ರಾಮ್‌ನಲ್ಲಿ ಹೇಳಿಕೊಂಡಿದ್ದಾರೆ. ಇದರಿಂದಾಗಿ 40ನೇ ವರ್ಷದ ಆಟಗಾರ ಟೆನಿಸ್‌ಗೆ ಮರಳುವ ಕುರಿತು ಸಂದೇಹ ಮೂಡಿದೆ.

ಗ್ರೀಸ್‌ನ ಸ್ಟೆಫನೋಸ್ ಸಿಟ್ಸಿಪಾಸ್‌ ರ‍್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.