ಮೆಲ್ಬರ್ನ್: ನೊವಾಕ್ ಜೊಕೊವಿಚ್ ಅವರ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರರಲ್ಲಿ ಒಬ್ಬರೆಂದು ಬಿಂಬಿತವಾಗಿದ್ದಾರೆ, ರಷ್ಯಾದ ಡ್ಯಾನಿಲ್ ಮೆಡ್ವೆಡೆವ್. ಇದಕ್ಕೆ ತಕ್ಕಂತೆ ಆಡುತ್ತಿರುವ ಅವರು ಶನಿವಾರವೂ ಭರ್ಜರಿ ಪ್ರದರ್ಶನ ನೀಡಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ನೆದರ್ಲೆಂಡ್ಸ್‌ನ ಬಾಟಿಕ್ ವ್ಯಾನ್ ಡಿ ಜ್ಯಾಂಡ್‌ಶುಲ್ಪ್ ಎದುರು ಮಾರ್ಗರೆಟ್ ಕೋರ್ಟ್ ಅರೆನಾದಲ್ಲಿ ನಡೆದ ಮೂರನೇ ಸುತ್ತಿನ ಪಂದ್ಯದಲ್ಲಿ ಮೆಡ್ವೆಡೆವ್ 6-4, 6-4, 6-2ರಲ್ಲಿ ಜಯ ಗಳಿಸಿದರು. ಎರಡು ದಿನಗಳ ಹಿಂದೆ ರಾಡ್ ಲಾವೆರ್ ಅಂಗಣದಲ್ಲಿ ನಡೆದ ಪಂದ್ಯದಲ್ಲಿ ಸ್ಥಳೀಯ ಆಟಗಾರ ನಿಕ್ ಕಿರ್ಗಿಯೋಸ್ ವಿರುದ್ಧ ಭರ್ಜರಿ ಆಟವಾಡಿ ಪ್ರೇಕ್ಷಕರ ಮನಗೆದ್ದಿರುವ ಮೆಡ್ವೆಡೆವ್ ಶನಿವಾರ ಮತ್ತೊಮ್ಮೆ ಮಿಂಚಿನ ಸಂಚಾರ ಮೂಡಿಸಿದರು.
ನಾಲ್ಕನೇ ಸುತ್ತಿನಲ್ಲೂ ಮೆಡ್ವೆಡೆವ್, ಆಸ್ಟ್ರೇಲಿಯಾದ ಮತ್ತೊಬ್ಬ ಆಟಗಾರ, ವೈಲ್ಡ್ ಕಾರ್ಡ್ ಮೂಲಕ ಪ್ರವೇಶಿಸಿದ್ದ ಕ್ರಿಸ್ ಒಕಾನೆಲ್ ಎದುರು ಸೆಣಸುವ ಸಾಧ್ಯತೆ ಇತ್ತು. ಆದರೆ ಅಮೆರಿಕದ ಮ್ಯಾಕ್ಸಿಮ್ ಕ್ರಿಸಿಗೆ ಮಣಿದು ಒಕಾನೆಲ್ ಹೊರಬಿದ್ದರು. ಮೂರನೇ ಅಂಗಣದಲ್ಲಿ ನಡೆದ ಹಣಾಹಣಿಯಲ್ಲಿ ಮ್ಯಾಕ್ಸಿಮ್ 6-2, 6-7 (6), 6-3, 6-2ರಲ್ಲಿ ಗೆಲುವು ದಾಖಲಿಸಿದರು. ಈ ಮೂಲಕ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಇದೇ ಮೊದಲ ಬಾರಿ ನಾಲ್ವರು ಅಮೆರಿಕದ ಆಟಗಾರರು ನಾಲ್ಕನೇ ಸುತ್ತು ಪ್ರವೇಶಿಸಿದಂತಾಯಿತು. ವಿಶ್ವ ಕ್ರಮಾಂಕದಲ್ಲಿ 70ನೇ ಸ್ಥಾನದಲ್ಲಿರುವ ಕ್ರಿಸಿಗೆ ಇದು ನಾಲ್ಕನೇ ಗ್ರ್ಯಾನ್‌ಸ್ಲಾಂ ಟೂರ್ನಿ.
20ನೇ ಕ್ರಮಾಂಕದ ಅಮೆರಿಕ ಆಟಗಾರ ಟೇಲರ್ ಫ್ರಿಟ್ಜ್ 6-0, 3-6, 3-6, 6-4, 6-3ರಲ್ಲಿ ಗೆದ್ದು ಸ್ಪೇನ್‌ನ ರಾಬರ್ಟೊ ಬೌಟಿಸ್ಟ್ ಅಗೂಟ್ ಅವರನ್ನು ಹೊರದಬ್ಬಿದರು. ಮುಂದಿನ ಸುತ್ತಿನಲ್ಲಿ ಅವರು ಗ್ರೀಸ್‌ನ ಸ್ಟೆಫನೋಸ್ ಸಿಟ್ಸಿಪಾಸ್ ಅವರನ್ನು ಎದುರಿಸುವರು. ಸಿಟ್ಸಿಪಾಸ್ 6-3, 7-5, 6-7 (2), 6-4ರಲ್ಲಿ ಫ್ರಾನ್ಸ್‌ನ ಬೆನಾಯ್ಟ್ ಪೇರ್ ವಿರುದ್ಧ ಗೆದ್ದರು. ಕೆನಡಾದ ಫೆಲಿಕ್ಸ್ ಆಗರ್ ಅಲಿಯಾಸಿಮ್6-4, 6-1, 6-1ರಲ್ಲಿ ಅಮೆರಿಕದ ಡ್ಯಾನ್ ಇವಾನ್ಸ್ ಅವರನ್ನು ಮಣಿಸಿದರು.
ಸಿಮೋನಾ, ಸಬಲೆಂಕಾ ಜಯಭೇರಿ
ಮಹಿಳೆಯರ ವಿಭಾಗದಲ್ಲಿ ಎರಡು ಬಾರಿಯ ಗ್ರ್ಯಾಂ ಸ್ಲಾಂ ವಿಜೇತೆ ರೊಮೇನಿಯಾದ ಸಿಮೋನಾ ಹಲೆಪ್ ಮತ್ತು ಎರಡನೇ ಶ್ರೇಯಾಂಕಿತೆ ಬೆಲಾರಸ್‌ನ ಅರಿನಾ ಸಬಲೆಂಕಾ ನಾಲ್ಕನೇ ಸುತ್ತು ಪ್ರವೇಶಿಸಿದರು.6-2, 6-1ರಲ್ಲಿ ಮಾಂಟೆನೆಗ್ರೊದ ಡಂಕಾ ಕೊವಿನಿಚ್ ಅವರನ್ನು ಮಣಿಸಿ ಸಿಮೋನಾ ಸತತ ಐದನೇ ಬಾರಿ ಆಸ್ಟ್ರೇಲಿಯನ್ ಓಪನ್‌ನ ಎರಡನೇ ವಾರದ ಹಣಾಹಣಿಗೆ ಸಜ್ಜಾದರು. ಸಬಲೆಂಕಾ4-6, 6-3, 6-1ರಲ್ಲಿ ಜೇಕಿಯಾದ ಮರ್ಕೆಟಾ ವಂಡ್ರೋಸ್ವಾ ಎದುರು ಗೆದ್ದರು. 2020ರ ಫ್ರೆಂಚ್ ಓಪನ್ ಚಾಂಪಿಯನ್ ಇಗಾ ಸ್ವಾಟೆಕ್ 6-2, 6-3ರಲ್ಲಿ ದಾರಿಯಾ ಕಸಾತ್ಕಿನಾ ಎದುರು ಜಯ ಗಳಿಸಿದರು.
ಜನ್ಮದಿನದ ಸಂಭ್ರಮಕ್ಕೆ ಗೆಲುವಿನ ಉಡುಗೊರೆ
ಮಾರ್ಗರೆಟ್ ಕೋರ್ಟ್ ಅರೆನಾದ ಮಧ್ಯದಲ್ಲಿ ನಿಂತು ಗೆಲುವಿನ ಸಂಭ್ರಮವನ್ನು ಅನುಭವಿಸಿದ ಫ್ರಾನ್ಸ್‌ನ ಅಲಿಜ್ ಕಾರ್ನೆಟ್ ಪ್ರೇಕ್ಷಕರತ್ತ ಕೈ ಬೀಸಿ ಜನ್ಮದಿನದ ಶುಭಕಾಮನೆಗಳಿಗೆ ಕೃತಜ್ಞತೆ ಸಲ್ಲಿಸಿದರು. 32ನೇ ಜನ್ಮದಿನವಾದ ಶನಿವಾರ ನಡೆದ ಮೂರನೇ ಸುತ್ತಿನ ಪಂದ್ಯದಲ್ಲಿ ಅಲಿಜ್ 4-6, 6-4, 6-2ರಲ್ಲಿ 29ನೇ ಶ್ರೇಯಾಂಕಿತೆ ತಮಾರ ಜಿಡಾನ್ಜೆಕ್ ಅವರನ್ನು ಮಣಿಸಿದರು. ಸ್ಲೊವೇನಿಯಾ ಆಟಗಾರ್ತಿ ಎರಡು ತಾಸು 43 ನಿಮಿಷಗಳ ಹೋರಾಟದ ನಂತರ ಮಣಿದರು.
13 ವರ್ಷಗಳ ನಂತರ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಅಲಿಜ್ ನಾಲ್ಕನೇ ಸುತ್ತು ಪ್ರವೇಶಿಸಿದ್ದಾರೆ. 2009ರಲ್ಲಿ ರಷ್ಯಾದ ದಿನಾರ ಸಫಿನಾ ಎದುರು ಅವರು ಸೋತಿದ್ದರು. ವಿಶ್ವ ಕ್ರಮಾಂಕದಲ್ಲಿ 61ನೇ ಸ್ಥಾನದಲ್ಲಿರುವ ಅಲಿಜ್‌ಗೆ ಮುಂದಿನ ಸುತ್ತಿನಲ್ಲಿ ಸಿಮೋನಾ ಹಲೆಪ್ ಎದುರಾಳಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.