ADVERTISEMENT

ನಾಲ್ಕನೇ ಸುತ್ತಿಗೆ ನೊವಾಕ್‌

ಮಿಯಾಮಿ ಓಪನ್‌ ಟೆನಿಸ್‌: ಸ್ಲೋನ್‌ ಸ್ಟೀಫನ್ಸ್‌ಗೆ ಆಘಾತ

ಏಜೆನ್ಸೀಸ್
Published 25 ಮಾರ್ಚ್ 2019, 20:15 IST
Last Updated 25 ಮಾರ್ಚ್ 2019, 20:15 IST
ಅಮೆರಿಕದ ಸ್ಲೋನ್‌ ಸ್ಟೀಫನ್ಸ್‌ ಎದುರಿನ ಪಂದ್ಯದಲ್ಲಿ ಜರ್ಮನಿಯ ತತ್‌ಜಾನ ಮರಿಯಾ ಚೆಂಡನ್ನು ಹಿಂತಿರುಗಿಸಲು ಪ್ರಯತ್ನಿಸಿದರು –ಎಎಫ್‌ಪಿ ಚಿತ್ರ
ಅಮೆರಿಕದ ಸ್ಲೋನ್‌ ಸ್ಟೀಫನ್ಸ್‌ ಎದುರಿನ ಪಂದ್ಯದಲ್ಲಿ ಜರ್ಮನಿಯ ತತ್‌ಜಾನ ಮರಿಯಾ ಚೆಂಡನ್ನು ಹಿಂತಿರುಗಿಸಲು ಪ್ರಯತ್ನಿಸಿದರು –ಎಎಫ್‌ಪಿ ಚಿತ್ರ   

ಮಿಯಾಮಿ: ಮಿಯಾಮಿ ಓಪನ್‌ನಲ್ಲಿ ದಾಖಲೆಯ ಏಳನೇ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಸರ್ಬಿಯಾದ ನೊವಾಕ್‌ ಜೊಕೊವಿಚ್‌ ಈ ಹಾದಿಯಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.

ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ನೊವಾಕ್‌, ನಾಲ್ಕನೇ ಸುತ್ತು ಪ್ರವೇಶಿಸಿದ್ದಾರೆ.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಜೊಕೊವಿಚ್‌ ಮೂರನೇ ಸುತ್ತಿನಲ್ಲಿ 7–5, 4–6, 6–1ರಲ್ಲಿ ಅರ್ಜೆಂಟೀನಾದ ಫೆಡೆರಿಕೊ ಡೆಲ್‌ಬೊನಿಸ್‌ ಅವರನ್ನು ಸೋಲಿಸಿದರು.

ADVERTISEMENT

ಹಾರ್ಡ್‌ ರಾಕ್‌ ಮೈದಾನದಲ್ಲಿ ನಡೆದ ಪಂದ್ಯದ ಮೊದಲ ಸೆಟ್‌ನಲ್ಲಿ ಮಿಂಚಿದ ನೊವಾಕ್‌, ಎರಡನೇ ಸೆಟ್‌ನಲ್ಲಿ ನಿರಾಸೆ ಕಂಡರು. ಇದರಿಂದ ಎದೆಗುಂದದ ಅವರು ಮೂರನೇ ಸೆಟ್‌ನಲ್ಲಿ ಅಬ್ಬರಿಸಿ ಗೆಲುವಿನ ತೋರಣ ಕಟ್ಟಿದರು.

ಈ ವಿಭಾಗದ ಇತರ ಪಂದ್ಯಗಳಲ್ಲಿ ರಾಬರ್ಟೊ ಬಟಿಸ್ಟಾ ಅಗತ್‌ 6–4, 6–4ರಲ್ಲಿ ಫಾಬಿಯೊ ಫಾಗ್ನಿನಿ ಎದುರೂ, ಕೈಲ್‌ ಎಡ್ಮಂಡ್‌ 6–4, 6–4ರಲ್ಲಿ ಮಿಲೊಸ್‌ ರಾನಿಕ್‌ ಮೇಲೂ, ಜಾನ್‌ ಇಸ್ನರ್‌ 7–5, 7–6ರಲ್ಲಿ ಅಲ್ಬರ್ಟ್‌ ರಾಮೊಸ್‌ ವಿರುದ್ಧವೂ, ನಿಕ್‌ ಕಿರ್ಗಿಯೊಸ್‌ 6–3, 6–1ರಲ್ಲಿ ದುಸಾನ್‌ ಲಾಜೊವಿಚ್‌ ಮೇಲೂ ಗೆದ್ದು ಪ್ರೀ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು.

ಸ್ಟೀಫನ್ಸ್‌ಗೆ ಆಘಾತ: ಮಹಿಳಾ ಸಿಂಗಲ್ಸ್‌ ವಿಭಾಗದಲ್ಲಿ ಕಣದಲ್ಲಿದ್ದ ಅಮೆರಿಕದ ಸ್ಲೋನ್‌ ಸ್ಟೀಫನ್ಸ್‌ ಮೂರನೇ ಸುತ್ತಿನಲ್ಲಿ ಆಘಾತ ಕಂಡರು.

ಜರ್ಮನಿಯ ತತ್‌ಜಾನ ಮರಿಯಾ 6–3, 6–2ರಲ್ಲಿ ನಾಲ್ಕನೇ ಶ್ರೇಯಾಂಕದ ಆಟಗಾರ್ತಿ ಸ್ಟೀಫನ್ಸ್‌ ಎದುರು ಗೆದ್ದರು.

ಅಮೆರಿಕದ ವೀನಸ್‌ ವಿಲಿಯಮ್ಸ್‌ 6–3, 6–1ರಲ್ಲಿ ಡೇರಿಯಾ ಕಸತ್ಕಿನಾ ಅವರನ್ನು ಮಣಿಸಿದರೆ, ರುಮೇನಿಯಾದ ಸಿಮೊನಾ ಹಲೆಪ್‌ 5–7, 7–6, 6–2ರಲ್ಲಿ ಪೋಲೊನಾ ಹರ್ಕೊಗ್‌ ವಿರುದ್ಧ ವಿಜಯಿಯಾದರು.

ಇತರ ಪಂದ್ಯಗಳಲ್ಲಿ ಕ್ಯಾರೊಲಿನಾ ಪ್ಲಿಸ್ಕೋವಾ 6–7, 6–1, 6–4ರಲ್ಲಿ ಅಲೈಜ್ ಕಾರ್ನೆಟ್‌ ಮೇಲೂ, ಯೂಲಿಯಾ ಪುಟಿನ್‌ತ್ಸೆವಾ 1–6, 6–2, 6–3ರಲ್ಲಿ ಅನಸ್ತೇಸಿಜಾ ಸೆವಸ್ಟೋವಾ ವಿರುದ್ಧವೂ, ವಾಂಗ್‌ ಯಿಫಾನ್‌ 7–5, 6–1ರಲ್ಲಿ ಡೇನಿಯೆಲ್‌ ಕಾಲಿನ್ಸ್‌ ಮೇಲೂ ಗೆದ್ದು ಹದಿನಾರರ ಘಟ್ಟಕ್ಕೆ ಲಗ್ಗೆ ಇಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.