ಬೆಂಗಳೂರು: ಮೈದಾನದಲ್ಲಿ ಪ್ರತಿಸ್ಪರ್ಧಿಯಾಗಿದ್ದರೂ ತಮ್ಮ ಆಪ್ತ ಸ್ನೇಹಿತ ರೋಜರ್ ಫೆಡರರ್ ಟೆನಿಸ್ ಕ್ರೀಡೆಗೆ ನಿವೃತ್ತಿ ಸಲ್ಲಿಸುತ್ತಿರುವುದನ್ನು ರಫೆಲ್ ನಡಾಲ್ ಅವರಿಗೆ ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಅಲ್ಲದೆ ಲೇವರ್ ಕಪ್‌ನಲ್ಲಿ ಫೆಡರರ್ ಜೊತೆಗೆ ಕಣಕ್ಕಿಳಿದಿದ್ದ ನಡಾಲ್, ನೋವು ತಾಳಲಾಗದೇ ಕಣ್ಣೀರಿಟ್ಟರು. ಇದನ್ನೇ ಹಂಚಿರುವ ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ, ಇಂದು ನಾನು ನೋಡಿರುವ ಪೈಕಿ ಅತ್ಯಂತ ಸುಂದರವಾದ ಕ್ರೀಡಾ ಚಿತ್ರ (ಕ್ಷಣ) ಎಂದು ಬಣ್ಣಿಸಿದ್ದಾರೆ.
ಪ್ರತಿಸ್ಪರ್ಧಿಗಳು ಒಬ್ಬರನ್ನೊಬ್ಬರಿಗಾಗಿ ಈ ರೀತಿ ಭಾವನಾತ್ಮಕ ಕ್ಷಣವನ್ನು ಹಂಚುತ್ತಾರೆಂದು ಯಾರಾದರೂ ಯೋಚಿಸಿದ್ದೀರಾ? ಇದುವೇ ಕ್ರೀಡೆಯ ಸೌಂದರ್ಯ. ಇಂದು ನನ್ನ ಪಾಲಿಗೆ ಅತ್ಯಂತ ಸುಂದರ ಕ್ರೀಡಾ ಚಿತ್ರವಾಗಿದೆ. ನಿಮ್ಮ ಜೊತೆಗಾರ ನಿಮಗಾಗಿ ಅತ್ತಾಗ, ದೇವರು ಕರುಣಿಸಿದ ಪ್ರತಿಭೆಯಿಂದ ನಿಮಗೇನು ಮಾಡಲು ಸಾಧ್ಯವಾಯಿತು ಎಂಬುದು ಮನದಟ್ಟಾಗುತ್ತದೆ. ಅವರಿಬ್ಬರ ಬಗ್ಗೆ ನನಗೆ ಅಪಾರ ಗೌರವವಿದೆ ಎಂದು ಹೇಳಿದ್ದಾರೆ.
ಲೇವರ್ ಕಪ್‌ನಲ್ಲಿ ಸೋಲಿನೊಂದಿಗೆ ರೋಜರ್ ಫೆಡರರ್ ವಿದಾಯ ಸಲ್ಲಿಸಿದರು. ಸ್ವಿಸ್ ದಿಗ್ಗಜನ ಕೊನೆಯ ಬಾರಿ ನೋಡಲು ಪ್ರೇಕ್ಷಕರು ಕಿಕ್ಕಿರಿದು ಸೇರಿದ್ದರು.
ವಿದಾಯದ ಕ್ಷಣದಲ್ಲಿ ಫೆಡರರ್ ಹಾಗೂ ನಡಾಲ್ ಬಿಕ್ಕಿ ಬಿಕ್ಕಿ ಅಳುತ್ತಿರುವ ದೃಶ್ಯವು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಅತಿ ಹೆಚ್ಚು ಪ್ರತಿಕ್ರಿಯೆ ಗಿಟ್ಟಿಸಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.