ADVERTISEMENT

ಆಸ್ಟ್ರೇಲಿಯನ್ ಓಪನ್‌ ಗೆಲುವು; 21ನೇ ಗ್ರ್ಯಾನ್ ಸ್ಲಾಂ ಗೆದ್ದ ನಡಾಲ್ ವಿಶ್ವ ದಾಖಲೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2022, 14:42 IST
Last Updated 30 ಜನವರಿ 2022, 14:42 IST
ರಫೆಲ್ ನಡಾಲ್
ರಫೆಲ್ ನಡಾಲ್   

ಮೆಲ್ಬರ್ನ್: ಪ್ರತಿಷ್ಠಿತ ಆಸ್ಟ್ರೇಲಿಯನ್ ಓಪನ್ 2022 ಟೆನಿಸ್ ಟೂರ್ನಿ ಗೆದ್ದಿರುವ ಸ್ಪೇನ್‌ನ ರಫೆಲ್ ನಡಾಲ್, ದಾಖಲೆಯ 21ನೇ ಗ್ರ್ಯಾನ್ ಸ್ಲಾಂ ಗೆದ್ದ ಹಿರಿಮೆಗೆ ಪಾತ್ರರಾಗಿದ್ದಾರೆ.

ಭಾನುವಾರ ಪುರುಷ ಸಿಂಗಲ್ಸ್ ವಿಭಾಗದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಆರನೇ ಶ್ರೇಯಾಂಕಿತ ನಡಾಲ್, ಎರಡನೇ ಶ್ರೇಯಾಂಕಿತ ರಷ್ಯಾದ ಡ್ಯಾನಿಲ್ ಮೆಡ್ವೆಡೆವ್ ವಿರುದ್ಧ 2-6, 6-7(5/7), 6-4, 6-4, 7-5ರ ಕಠಿಣ ಅಂತರದಲ್ಲಿ ಗೆಲುವು ದಾಖಲಿಸಿ ಪ್ರಶಸ್ತಿಗೆ ಮುತ್ತಿಕ್ಕಿದರು.

ಈ ಮೂಲಕ ಸಮಕಾಲೀನ ದಿಗ್ಗಜರಾದ ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್ ಮತ್ತು ಸರ್ಬಿಯಾದ ನೊವಾಕ್ ಜೊಕೊವಿಚ್‌ ದಾಖಲೆಯನ್ನು ಮುರಿದು ಟೆನಿಸ್ ಅಂಗಣದ ನೂತನ ರಾಜ ಎನಿಸಿದ್ದಾರೆ.

ADVERTISEMENT

ಪುರುಷ ಸಿಂಗಲ್ಸ್ ವಿಭಾಗದಲ್ಲಿ ಫೆಡರರ್ ಹಾಗೂ ಜೆಕೊವಿಚ್ ತಲಾ 20 ಗ್ರ್ಯಾನ್ ಸ್ಲಾಂ ಪ್ರಶಸ್ತಿಗಳನ್ನು ಜಯಿಸಿದ್ದಾರೆ. ಈ ದಾಖಲೆಯನ್ನೀಗ ಮುರಿದಿರುವ ನಡಾಲ್, ಪುರುಷ ಸಿಂಗಲ್ಸ್ಇತಿಹಾಸದಲ್ಲೇ 21 ಗ್ರ್ಯಾನ್ ಸ್ಲಾಂ ಗೆದ್ದ ವಿಶ್ವದ ಮೊದಲ ಟೆನಿಸ್ ಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಅಲ್ಲದೆ ಎಲ್ಲ ಗ್ರ್ಯಾನ್ ಸ್ಲಾಂ ಪ್ರಶಸ್ತಿಗಳನ್ನು ಕನಿಷ್ಠ ಎರಡು ಬಾರಿ ಗೆದ್ದ ಬಿರುದಿಗೆ ಪಾತ್ರರಾಗಿದ್ದಾರೆ.

ಈ ಗೆಲುವು ನಡಾಲ್‌ ಪಾಲಿಗೆ ಅಷ್ಟು ಸುಲಭವಾಗಿರಲಿಲ್ಲ. ಅದಕ್ಕಾಗಿ ಸಾಕಷ್ಟು ಬೆವರಿಳಿಸಬೇಕಾಯಿತು. ಐದು ತಾಸು 24 ನಿಮಿಷಗಳ ವರೆಗೆ ಸಾಗಿದ ಮ್ಯಾರಾಥನ್ ಹೋರಾಟದ ಅಂತ್ಯದಲ್ಲಿ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾದರು.

ನಡಾಲ್ ಗ್ರ್ಯಾನ್‌ ಸ್ಲಾಂ ಪ್ರಶಸ್ತಿಗಳು 21:
(ಫ್ರೆಂಚ್ ಓಪನ್: 2005, 2006, 2007, 2008, 2010, 2011, 2012, 2013, 2014, 2017, 2018, 2019, 2020);
ವಿಂಬಲ್ಡನ್‌ (2008, 2010)
ಅಮೆರಿಕ ಓಪನ್ (2010, 2013, 2017, 2019)
ಆಸ್ಟ್ರೇಲಿಯನ್ ಓಪನ್ (2009, 2022)

ಗೆಲುವಿನ ಹಾದಿ:

ಮೊದಲ ಸುತ್ತು: ಅಮೆರಿಕದ ಮಾರ್ಕೋಸ್ ಗಿರಾನ್‌ ಎದುರು 6-1, 6-4, 6-2ರಲ್ಲಿ ಜಯ

ಎರಡನೇ ಸುತ್ತು: ಜರ್ಮನಿಯ ಯಾನಿಕ್ ಹಂಫ್‌ಮ್ಯಾನ್‌ ವಿರುದ್ಧ 6-2, 6-3, 6-4ರಲ್ಲಿ ಜಯ

ಮೂರನೇ ಸುತ್ತು: ರಷ್ಯಾದ ಕರೇನ್ ಖಚನೊವ್‌ ಎದುರು 6-3, 6-2, 3-6, 6-1ರಲ್ಲಿ ಗೆಲುವು

ನಾಲ್ಕನೇ ಸುತ್ತು: ಫ್ರಾನ್ಸ್‌ನ ಅಡ್ರಿಯನ್ ಮನಾರಿನೊ ವಿರುದ್ಧ 7-6 (16/14) 6-2, 6-2ರಲ್ಲಿ ಜಯ

ಕ್ವಾರ್ಟರ್ ಫೈನಲ್‌: ಕೆನಡಾದ ಡೆನಿಸ್ ಶಪೊವಲೊವ್‌ ವಿರುದ್ಧ 6-3, 6-4, 4-6, 3-6, 6-3ರಲ್ಲಿ ಜಯ

ಸೆಮಿಫೈನಲ್: ಇಟಲಿಯ ಮಟಿಯೊ ಬೆರೆಟಿನಿ ಎದುರು 6-3, 6-2, 3-6, 6-3ರಲ್ಲಿ ಗೆಲುವು

ಫೈನಲ್: ರಷ್ಯಾದ ಡ್ಯಾನಿಲ್ ಮೆಡ್ವೆಡೆವ್ ವಿರುದ್ಧ 2-6, 6-7(5/7), 6-4, 6-4, 7-5ರಲ್ಲಿ ಗೆಲುವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.