ADVERTISEMENT

ಫ್ರೆಂಚ್‌ ಓಪನ್: ಗಾಯದಿಂದ ಹಿಂದೆ ಸರಿದ ಜ್ವೆರೆವ್‌, 14ನೇ ಬಾರಿ ಫೈನಲ್‌ಗೆ ನಡಾಲ್‌

ಏಜೆನ್ಸೀಸ್
Published 4 ಜೂನ್ 2022, 2:02 IST
Last Updated 4 ಜೂನ್ 2022, 2:02 IST
ನಡಾಲ್‌
ನಡಾಲ್‌   

ಪ್ಯಾರಿಸ್‌: ಸ್ಪೇನ್‌ನ ತಾರಾ ಆಟಗಾರ ರಫೆಲ್ ನಡಾಲ್ 14ನೇ ಬಾರಿ ಫ್ರೆಂಚ್‌ ಓಪನ್ ಟೆನಿಸ್ ಟೂರ್ನಿಯ ಫೈನಲ್ ತಲುಪಿದ್ದಾರೆ.

ಫಿಲಿಪ್ ಚಾಟ್ರಿಯರ್ ಅಂಗಣದಲ್ಲಿ ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ಸೆಮಿಫೈನಲ್ ಹಣಾಹಣಿಯಲ್ಲಿ ನಡಾಲ್ ಎದುರು ಸ್ಪರ್ಧಿಸಿದ್ದ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಗಾಯದಿಂದ ಹಿಂದೆ ಸರಿದರು. ಹೀಗಾಗಿ ನಡಾಲ್ ಅವರಿಗೆ ವಾಕ್‌ಔವರ್ ಲಭಿಸಿತು.

ಜ್ವೆರೆವ್ ಅವರ ಪಾದ ಉಳುಕಿರುವುದು

ಪಂದ್ಯದಲ್ಲಿ ಜ್ವೆರೆವ್‌ 7–6 (10–8), 6–6ರಿಂದ ಹಿನ್ನಡೆಯಲ್ಲಿದ್ದ ವೇಳೆ ಅವರ ಬಲಪಾದ ಉಳುಕಿತು. ತೀವ್ರ ನೋವು ಅನುಭವಿಸಿದ ಅವರು, ಸಿಬ್ಬಂದಿಯ ಸಹಾಯದಿಂದ ಗಾಲಿಕುರ್ಚಿಯಲ್ಲಿ ಮೈದಾನ ತೊರೆಯಬೇಕಾಯಿತು.

ADVERTISEMENT

ವೇದನೆಯಿಂದ ಕಣ್ಣೀರು ಸುರಿಸಿದ 25 ವರ್ಷದ ಆಟಗಾರ ವಾಪಸ್‌ ಅಂಗಣಕ್ಕೆ ಬಂದು ನಡಾಲ್ ಅವರ ಕೈಕುಲುಕಿ ವಾಕ್ಓವರ್ ನೀಡಿದರು.

‘ಜ್ವೆರೆವ್‌ಗೆ ಇದು ಕಠಿಣ ಮತ್ತು ದುಃಖದ ಸಂದರ್ಭ. ಗ್ರ್ಯಾನ್‌ಸ್ಲಾಂ ಗೆಲುವಿಗಾಗಿ ಅವರು ಎಷ್ಟು ಬೆವರು ಸುರಿಸಿದ್ದರೆಂದು ನನಗೆ ಗೊತ್ತು. ಭವಿಷ್ಯದಲ್ಲಿ ಅವರು ಖಂಡಿತವಾಗಿ ಗೆಲ್ಲುತ್ತಾರೆ‘ ಎಂದು ನಡಾಲ್ ಹೇಳಿದರು.

22ನೇ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಬೆನ್ನಟ್ಟಿರುವ ನಡಾಲ್‌ (36 ವರ್ಷ), ಫ್ರೆಂಚ್‌ ಓಪನ್ ಟೂರ್ನಿಯಲ್ಲಿ ಫೈನಲ್ ತಲುಪಿದ ಎರಡನೇ ಅತಿ ಹಿರಿಯ ಆಟಗಾರ ಎನಿಸಿಕೊಂಡರು. 1930ರಲ್ಲಿ 37 ವರ್ಷದ ಬಿಲ್ ಟಿಲ್ಡೆನ್ ರನ್ನರ್‌ಅಪ್ ಆಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.