ಸಿಡ್ನಿ: ಘಟಾನುಘಟಿ ಆಟಗಾರರಾದ ರಫೆಲ್ ನಡಾಲ್ ಮತ್ತು ನೊವಾಕ್ ಜೊಕೊವಿಚ್ ಮುಖಾಮುಖಿಗೆ ಎಟಿಪಿ ಕಪ್ ಫೈನಲ್ ಕಣ ವೇದಿಕೆ ಆಗಲಿದೆ.
ಸ್ಪೇನ್ ಮತ್ತು ಸರ್ಬಿಯಾ ತಂಡಗಳು ಮೊದಲ ಬಾರಿ ನಡೆಯುತ್ತಿರುವ ಈ ಟೂರ್ನಿಯ ಫೈನಲ್ ತಲುಪಿದ್ದು, ಇದಕ್ಕೆ ಅವಕಾಶ ಒದಗಿಸಿದೆ.
ಟೂರ್ನಿಯ ನಿಯಮದ ಪ್ರಕಾರ ಇತ್ತಂಡಗಳ ಅಗ್ರಮಾನ್ಯ ಆಟಗಾರರು ಪರಸ್ಪರರನ್ನು ಎದುರಿಸಬೇಕಾಗುತ್ತದೆ. 2006ರಲ್ಲಿ ಮೊದಲ ಬಾರಿ ಎದುರಾಗಿದ್ದ ಇವರಿಬ್ಬರು, 55ನೇ ಬಾರಿ (ಭಾನುವಾರ) ಮುಖಾಮುಖಿ ಆಗಲಿದ್ದಾರೆ. ಚೊಕೊವಿಚ್, ಈವರೆಗೆ 28ರಲ್ಲಿ ಗೆದ್ದು 26ರಲ್ಲಿ ಸೋತಿದ್ದಾರೆ.
ಆದರೆ ವಿಶ್ವದ ಮೊದಲ ಎರಡು ಕ್ರಮಾಂಕದ ಈ ಆಟಗಾರರು ಸೆಮಿಫೈನಲ್‌ನಲ್ಲಿ ಉತ್ಸಾಹಿ ಕಿರಿಯ ಎದುರಾಳಿಗಳನ್ನು ಮಣಿಸಲು ಮೂರು ಸೆಟ್‌ಗಳನ್ನು ಆಡಬೇಕಾಯಿತು. ಡೇವಿಸ್ ಕಪ್ ಚಾಂಪಿಯನ್ ಸ್ಪೇನ್ 2–0 ಯಿಂದ ಆಸ್ಟ್ರೇಲಿಯಾವನ್ನು ಮಣಿಸಿತು.
ರಾಬರ್ಟೊ ಬಾಟಿಸ್ಟಾ 6–1, 6–4 ರಿಂದ ನಿಕ್ ಕಿರ್ಗಿಯೋಸ್ ಅವರ ಸದ್ದಡಗಿಸಿದರು. ವಿಶ್ವದ ಅಗ್ರಮಾನ್ಯ ಆಟಗಾರ ನಡಾಲ್ 4–6, 7–5, 6–1 ರಿಂದ ಅಲೆಕ್ಸ್ ಡಿ ಮಿನೋರ್ ಅವರನ್ನು ಹಿಮ್ಮೆಟ್ಟಿಸಿದರು. ಇನ್ನೊಂದು ಪಂದ್ಯದಲ್ಲಿ ಸರ್ಬಿಯಾ 2–0ಯಿಂದ ರಷ್ಯಾವನ್ನು ಮಣಿಸಿತು. ಜೊಕೊವಿಚ್ 6–1, 7–5, 6–4 ರಲ್ಲಿ ಡೇನಿಯಲ್ ಮೆಡ್ವೆಡೇವ್ ಎದುರು, ಡುಸಾನ್ ಲಾಜೊವಿಕ್ 7–5, 7–6 (7/1) ರಿಂದ ಕರೆನ್ ಕಚನೋವ್ ವಿರುದ್ಧ ಗೆದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.