ಪ್ಯಾರಿಸ್: ‘ಕೊಸೊವೊ ಸರ್ಬಿಯಾದ ಹೃದಯವಿದ್ದಂತೆ’ ಎಂದು ಸರ್ಬಿಯಾ ಆಟಗಾರ ನೊವಾಕ್ ಜೊಕೊವಿಚ್ ಹೇಳಿಕೆಯಿಂದ ನಿಯಮಗಳ ಉಲ್ಲಂಘನೆಯಾಗಿಲ್ಲ. ಗ್ರ್ಯಾಂಡ್‌ಸ್ಲ್ಯಾಮ್ ನಿಯಮಾವಳಿಗಳು ರಾಜಕೀಯ ಹೇಳಿಕೆಯನ್ನು ನಿರ್ಬಂಧಿಸುವುದಿಲ್ಲ ಎಂದು ಇಂಟರ್‌ನ್ಯಾಷನಲ್ ಟೆನಿಸ್ ಫೆಡರೇಷನ್ (ಐಟಿಎಫ್) ಬುಧವಾರ ತಿಳಿಸಿದೆ.
ಸೋಮವಾರ ಮೊದಲ ಸುತ್ತಿನ ಪಂದ್ಯ ಗೆದ್ದ ನಂತರ ವಿಶ್ವದ ಮೂರನೇ ಕ್ರಮಾಂಕದ ಆಟಗಾರ ಜೊಕೊವಿಚ್ ಅವರು ಟಿ.ವಿ ಕ್ಯಾಮೆರಾ ಸ್ಕ್ರೀನ್ ಮೇಲೆ ಈ ಸಂದೇಶ ಬರೆದಿದ್ದರು. ಅದೇ ದಿನ ಕೊಸೊವೊದ ಪಟ್ಟಣ ಜ್ವೆಕಾನ್‌ನಲ್ಲಿ ಸರ್ಬಿಯಾದ ಪ್ರತಿಭಟನಕಾರರ ಜೊತೆ ಘರ್ಷಣೆಯಲ್ಲಿ 30 ಮಂದಿ ನ್ಯಾಟೊ ಶಾಂತಿಪಾಲನಾ ಪಡೆಯ ಯೋಧರು ಗಾಯಗೊಂಡಿದ್ದರು. ಜೊಕೊವಿಚ್ ಅವರ ತಂದೆ ಜ್ವೆಕಾನ್ ಪಟ್ಟಣದಲ್ಲಿ ಬೆಳೆದವರು.
ಉತ್ತರ ಕೊಸೊವೊದಲ್ಲಿ ಸರ್ಬಿಯನ್ನರೇ ಬಹುಸಂಖ್ಯಾತರಾಗಿದ್ದಾರೆ. ಏಪ್ರಿಲ್‌ನಲ್ಲಿ ನಡೆದ ಚುನಾವಣೆ ಬಹಿಷ್ಕರಿಸಿದ್ದ ಈ ಮೂಲನಿವಾಸಿಗಳು ಬೆಲ್‌ಗ್ರೇಡ್ (ಸರ್ಬಿಯಾದ ರಾಜಧಾನಿ) ತಮ್ಮ ರಾಜಧಾನಿಯೆಂದೇ ಭಾವಿಸಿದ್ದಾರೆ. ಕೊಸೊವೊ ಪೊಲೀಸರು ಮತ್ತು ನ್ಯಾಟೊ ಶಾಂತಿಪಾಲನಾ ಪಡೆಯ ಜೊತೆ ಘರ್ಷಣೆಗೂ ಇಳಿದಿದ್ದಾರೆ.
‘ಈಗಾಗಲೇ ಉದ್ವಿಗ್ನಗೊಂಡಿರುವ ಪರಿಸ್ಥಿತಿಯನ್ನು ಜೊಕೊವಿಚ್ ಅವರು ಇನ್ನಷ್ಟು ಹದಗೆಡಿಸುತ್ತಿದ್ದಾರೆ’ ಎಂದು ಕೊಸೊವೊ ಟೆನಿಸ್ ಸಂಸ್ಥೆ ಮಂಗಳವಾರ ಜೊಕೊವಿಚ್ ವಿರುದ್ಧ ಆರೋಪಿಸಿತ್ತು. ಬುಧವಾರ ಅವರ ಹೇಳಿಕೆಯನ್ನು ಕೊಸೊವೊ ಒಲಿಂಪಿಕ್ ಸಮಿತಿ ಪ್ರತಿಧ್ವನಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.