ಪ್ಯಾರಿಸ್: ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಮ್ ಟೆನಿಸ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್, ಸರ್ಬಿಯಾದ ನೊವಾಕ್ ಜೊಕೊವಿಚ್, ಪ್ರಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ.
ಭಾನುವಾರ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ದಾಖಲೆಯ 24 ಬಾರಿಯ ಗ್ರ್ಯಾನ್‌ಸ್ಲಾಮ್ ಚಾಂಪಿಯನ್ ಜೊಕೊವಿಚ್ ಅವರು, ಇಟಲಿಯ 22ರ ಹರೆಯದ ಯುವ ಆಟಗಾರ ಲೊರೆನ್ಸೊ ಮುಸೆಟ್ಟಿ ವಿರುದ್ಧ 7-5, 6-7 (6/8), 2-6, 6-3, 6-0ರ ಅಂತರದಲ್ಲಿ ಪ್ರಯಾಸದ ಗೆಲುವು ದಾಖಲಿಸಿದ್ದಾರೆ.
ಐದು ಸೆಟ್‌ಗಳ ಮ್ಯಾರಥಾನ್ ಹಣಾಹಣಿಯಲ್ಲಿ ಅತ್ಯಮೋಘ ಪ್ರದರ್ಶನದ ಮೂಲಕ ಜೊಕೊವಿಚ್, ತಾವೇಕೆ ಚಾಂಪಿಯನ್ ಆಟಗಾರ ಎಂಬುದನ್ನು ಸಾಬೀತು ಮಾಡಿದರು.
ಮೊದಲ ಸೆಟ್ 7-5ರ ಕಠಿಣ ಅಂತರದಲ್ಲಿ ವಶಪಡಿಸಿಕೊಂಡಿದ್ದ ಜೊಕೊವಿಚ್‌ಗೆ ನಂತರದ ಎರಡೂ ಸೆಟ್‌ಗಳಲ್ಲಿ ಹಿನ್ನಡೆ ಎದುರಾಗಿತ್ತು. ಆದರೆ 37ರ ಹರೆಯದಲ್ಲೂ ಅಮೋಘ ದೈಹಿಕ ಬಲ ಪ್ರದರ್ಶಿಸಿದ ಜೊಕೊವಿಚ್, ಕೊನೆಯ ಎರಡು ಸೆಟ್‌ಗಳನ್ನು ವಶಪಡಿಸಿಕೊಂಡು ಪಂದ್ಯ ತಮ್ಮದಾಗಿಸಿಕಕೊಂಡರು.
ನಾಲ್ಕು ತಾಸು 29 ನಿಮಿಷಗಳ ವರೆಗೆ ಸಾಗಿದ ಜಿದ್ದಾಜಿದ್ದಿನ ಪೈಪೋಟಿಯ ಅಂತಿಮದಲ್ಲಿ ಜೊಕೊವಿಚ್ ಗೆಲುವಿನ ನಗೆ ಬೀರಿ ಅಂತಿಮ 16ರ ಸುತ್ತಿಗೆ ಪ್ರವೇಶಿಸಿದ್ದಾರೆ.
2021ರಲ್ಲೂ ಫೆಡರರ್ ವಿರುದ್ಧ ಎರಡು ಸೆಟ್ ಮುನ್ನಡೆಯಲ್ಲಿದ್ದ ಮುಸೆಟ್ಟಿ ಗಾಯದಿಂದಾಗಿ ನಿವೃತ್ತಿ ಹೊಂದಿದ್ದರು. ಈಗ ಮಗದೊಮ್ಮೆ ಚಾಂಪಿಯನ್ ಆಟಗಾರನ ವಿರುದ್ಧ 30ನೇ ಶ್ರೇಯಾಂಕಿತ ಆಟಗಾರ ದಿಟ್ಟ ಹೋರಾಟ ಪ್ರದರ್ಶಿಸಿದ್ದಾರೆ.
ಫೆಡರರ್ ದಾಖಲೆ ಸರಿಗಟ್ಟಿದ ಜೊಕೊವಿಚ್...
ಇದರೊಂದಿಗೆ ವಿಶ್ವ ನಂ.1 ರ‍್ಯಾಂಕ್‌ನ ಜೊಕೊವಿಚ್, ದಿಗ್ಗಜ ರೋಜರ್ ಫೆಡರರ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಜೊಕೊವಿಚ್ ಗಳಿಸಿದ 369ನೇ ಗ್ರ್ಯಾನ್‌ಸ್ಲಾಮ್ ಗೆಲುವು ಇದಾಗಿದೆ.
ಪ್ರಿ ಕ್ವಾರ್ಟರ್ ಪೈನಲ್‌ನಲ್ಲಿ ಜೊಕೊವಿಚ್ ಅವರು 23ನೇ ಶ್ರೇಯಾಂಕಿತ ಅರ್ಜೆಂಟೀನಾದ ಸೆರುಂಡೊಲೊ ಅವರ ಸವಾಲನ್ನು ಎದುರಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.