ನ್ಯೂಯಾರ್ಕ್: ಪ್ರತಿಷ್ಠಿತ ಅಮೆರಿಕ ಓಪನ್ ಗ್ರ್ಯಾನ್‌ಸ್ಲಾಮ್ ಟೆನಿಸ್ ಟೂರ್ನಿಯಲ್ಲಿ ಸರ್ಬಿಯಾದ ನೊವಾಕ್ ಜೊಕೊವಿಚ್ ಗೆಲುವಿನ ಶುಭಾರಂಭ ಮಾಡಿದ್ದಾರೆ.
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ನಡೆದ ಮೊದಲ ಸುತ್ತಿನ ಹೋರಾಟದಲ್ಲಿ 34 ವರ್ಷದ ಜೊಕೊವಿಚ್, ಕ್ವಾಲಿಫೈಯರ್ ಡಚ್‌ನ ಹೊಲ್ಗರ್ ರೂನ್ ವಿರುದ್ಧ 6-1, 6-7 (5/7), 6-2, 6-1ರ ಅಂತರದಲ್ಲಿ ಗೆಲುವು ಸಾಧಿಸಿದರು.
ಇದನ್ನೂ ಓದಿ:ಅಮೆರಿಕ ಓಪನ್: ಎರಡನೇ ಸುತ್ತಿಗೆ ಹಲೆಪ್
ಮೊದಲ ಸುತ್ತಿನಲ್ಲಿ ಜೊಕೊವಿಚ್‌ಗೆ ತಮ್ಮ ಶ್ರೇಷ್ಠ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಅಲ್ಲದೆ ದ್ವಿತೀಯ ಸೆಟ್ ಅನ್ನು ಟ್ರೈ ಬ್ರೇಕರ್‌ನಲ್ಲಿ ಕಳೆದುಕೊಂಡರು. ಹಾಗಿದ್ದರೂ ಬಳಿಕ ಲಯ ಕಂಡುಕೊಳ್ಳುವಲ್ಲಿ ಯಶಸ್ವಿಯಾದರು.
'ನನಗೆ ಈ ಪಂದ್ಯದಲ್ಲಿ ಶ್ರೇಷ್ಠ ನಿರ್ವಹಣೆ ನೀಡಲು ಸಾಧ್ಯವಾಗಲಿಲ್ಲ. ಅದೇ ಹೊತ್ತಿಗೆ ಎದುರಾಳಿ ದ್ವಿತೀಯ ಸೆಟ್‌ನಲ್ಲಿ ಅತ್ಯುತ್ತಮವಾಗಿ ಆಡಿದರು. ನನ್ನ ಸರ್ವ್ ಕೂಡಾ ಉತ್ತಮವಾಗಿರಲಿಲ್ಲ' ಎಂದು ಗೆಲುವಿನ ಬಳಿಕ ಜೊಕೊವಿಚ್ ಪ್ರತಿಕ್ರಿಯಿಸಿದ್ದಾರೆ.
ಕಳೆದ 12 ಗ್ರ್ಯಾನ್‌ಸ್ಲಾಮ್ ಟೂರ್ನಿಗಳಲ್ಲಿ ಎಂಟರಲ್ಲಿ ಗೆಲುವು ದಾಖಲಿಸಿರುವ ಜೊಕೊವಿಚ್ ದ್ವಿತೀಯ ಸುತ್ತಿನಲ್ಲಿ 121 ರ‍್ಯಾಂಕ್‌ನ ಡಚ್‌ನ ಟ್ಯಾಲನ್ ಗ್ರಿಕ್ಸ್‌ಪೊರ್ ಸವಾಲನ್ನು ಎದುರಿಸಲಿದ್ದಾರೆ.
ರೋಜರ್ ಫೆಡರರ್, ರಫೆಲ್ ನಡಾಲ್ ಜೊತೆ 20 ಗ್ರ್ಯಾನ್‌ಸ್ಲಾಮ್ ಟ್ರೋಫಿಗಳನ್ನು ಗೆದ್ದಿರುವ ಜೊಕೊವಿಚ್ ದಾಖಲೆಯ 21ನೇ ಕಿರೀಟದ ಕನಸಿನೊಂದಿಗೆ ಕಣಕ್ಕಿಳಿದಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಈಗಾಗಲೇ ಮೂರು ಗ್ರ್ಯಾನ್‌ಸ್ಲಾಮ್ ಕಿರೀಟವನ್ನು ಮುಡಿಗೇರಿಸಿರುವ ಜೊಕೊವಿಚ್, 'ಕ್ಯಾಲೆಂಡರ್ ಗ್ರ್ಯಾನ್‌ಸ್ಲಾಮ್' ಗೆಲ್ಲುವ ಗುರಿಯನ್ನಿರಿಸಿದ್ದಾರೆ.
ಪುರುಷರ ವಿಭಾಗದಲ್ಲಿ ಐವರು ಮಾಜಿ ಚಾಂಪಿಯನ್ನರು ಈ ಬಾರಿ ಆಡುತ್ತಿಲ್ಲ. ಫೆಡರರ್, ನಡಾಲ್ ಜೊತೆಗೆ ಸ್ಟ್ಯಾನ್ ವಾವ್ರಿಂಕ, ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ ಮತ್ತು ಡೊಮಿನಿಕ್ ಥೀಮ್ ಗಾಯದಿಂದಾಗಿ ಆಡದೇ ಇರಲು ನಿರ್ಧರಿಸಿದ್ದಾರೆ.ಇದರಿಂದಾಗಿ ಜೊಕೊವಿಚ್‌ಗೆ ಅಮೆರಿಕ ಓಪನ್ ಗೆಲ್ಲುವ ಸಾಧ್ಯತೆ ಹೆಚ್ಚಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.