ಅಡಿಲೇಡ್: ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಗೆದ್ದ ಸರ್ಬಿಯಾದ ನೊವಾಕ್ ಜೊಕೊವಿಚ್ ಅವರು ಅಡಿಲೇಡ್ ಇಂಟರ್‌ನ್ಯಾಷನಲ್ ಟೆನಿಸ್ ಟೂರ್ನಿಯಲ್ಲಿ ಚಾಂಪಿಯನ್ ಆದರು.
ಭಾನುವಾರ ನಡೆದ ಫೈನಲ್ನಲ್ಲಿ ಜೊಕೊವಿಚ್ 6-7 (8), 7-6 (3), 6-4ರಿಂದ ಅಮೆರಿಕದ ಸೆಬಾಸ್ಟಿಯನ್ ಕೊರ್ಡಾ ಅವರನ್ನು ಸೋಲಿಸಿದರು.ಸೆಮಿಫೈನಲ್ ಪಂದ್ಯದ ವೇಳೆ ಗಾಯಗೊಂಡಿದ್ದ ಜೊಕೊವಿಚ್ ಪ್ರಶಸ್ತಿ ಸುತ್ತಿನಲ್ಲಿ ಆಡುವ ಅನುಮಾನವಿತ್ತು. ಆದರೆ ಕಣಕ್ಕಿಳಿದ ಅವರು 3 ತಾಸಿಗಿಂತ ಹೆಚ್ಚು ಕಾಲ ನಡೆದ ಹಣಾಹಣಿಯಲ್ಲಿ ಜಯ ಒಲಿಸಿ ಕೊಂಡರು.
ಜೊಕೊವಿಚ್ ಅವರಿಗೆ ಅಡಿ ಲೇಡ್‌ನಲ್ಲಿ ಇದು 2ನೇ ಪ್ರಶಸ್ತಿ. 2007ರಲ್ಲಿ 19ನೇ ವಯಸ್ಸಿನಲ್ಲಿ ಅವರು ಮೊದಲ ಪ್ರಶಸ್ತಿ ಗೆದ್ದಿದ್ದರು. ಸರ್ಬಿಯಾ ಆಟಗಾರನಿಗೆ ವೃತ್ತಿಜೀವನದ 92ನೇ ಕಿರೀಟ ಇದು.
ಮಹಿಳಾ ವಿಭಾಗದ ಪ್ರಶಸ್ತಿಯು ಬೆಲಾರಸ್‌ನ ಅರಿನಾ ಸಬಲೆಂಕಾ ಅವರಿಗೆ ಒಲಿಯಿತು. ಫೈನಲ್‌ನಲ್ಲಿ ಅವರು 6-2 7-6 (4)ರಿಂದ ಜೆಕ್ ಗಣ ರಾಜ್ಯದ ಲಿಂಡಾ ನೊಸ್ಕೊವಾ ಎದುರು ಗೆದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.