ADVERTISEMENT

ಟೆನಿಸ್‌ ಟೂರ್ನಿ: ನೊವಾಕ್ ಜೊಕೊವಿಚ್‌ಗೆ ಆಸ್ಟ್ರೇಲಿಯಾ ವೀಸಾ?

ಪಿಟಿಐ
Published 15 ನವೆಂಬರ್ 2022, 13:10 IST
Last Updated 15 ನವೆಂಬರ್ 2022, 13:10 IST
ನೊವಾಕ್ ಜೊಕೊವಿಚ್‌– ಎಎಫ್‌ಪಿ ಚಿತ್ರ
ನೊವಾಕ್ ಜೊಕೊವಿಚ್‌– ಎಎಫ್‌ಪಿ ಚಿತ್ರ   

ಮೆಲ್ಬರ್ನ್‌: ಸರ್ಬಿಯಾ ಟೆನಿಸ್‌ ಆಟಗಾರ ನೊವಾಕ್ ಜೊಕೊವಿಚ್ ಅವರು ಮುಂದಿನ ವರ್ಷ ನಡೆಯಲಿರುವ ಆಸ್ಟ್ರೇಲಿಯಾ ಓಪನ್‌ ಟೂರ್ನಿಯಲ್ಲಿ ಆಡುವ ಸಾಧ್ಯತೆಯಿದೆ. ಅವರಿಗೆ ಆಸ್ಟ್ರೇಲಿಯಾ ಸರ್ಕಾರದಿಂದ ವೀಸಾ ಲಭಿಸುವ ನಿರೀಕ್ಷೆಯಿದೆ.

ಈ ವರ್ಷದ ಜನವರಿಯಲ್ಲಿ ಕೋವಿಡ್‌ ಲಸಿಕೆ ಹಾಕಿಸಿಕೊಳ್ಳದೇ ದೇಶ ಪ್ರವೇಶಿಸಿದ್ದ ಜೊಕೊವಿಚ್‌ ಅವರ ವೀಸಾಅನ್ನು ಆಸ್ಟ್ರೇಲಿಯಾ ಸರ್ಕಾರ ರದ್ದು ಮಾಡಿತ್ತು. ಅಲ್ಲದೆ ಆಸ್ಟ್ರೇಲಿಯಾ ಓಪನ್ ಟೂರ್ನಿಯಲ್ಲಿ ಆಡಲು ಅವಕಾಶ ನೀಡಿರಲಿಲ್ಲ. ಟೂರ್ನಿ ಆರಂಭವಾಗುವ ಹಿಂದಿನ ದಿನ ಅವರು ಅಲ್ಲಿಂದ ತವರಿಗೆ ವಾಪಸಾಗಿದ್ದರು. ಮೂರು ವರ್ಷಗಳ ಸಂಭಾವ್ಯ ಗಡಿಪಾರಿನ ಭೀತಿಯನ್ನೂ ಎದುರಿಸಿದ್ದರು.

ಆಸ್ಟ್ರೇಲಿಯಾದ ಇಮಿಗ್ರೇಷನ್ ಸಚಿವರು, ಜೊಕೊವಿಚ್‌ ಅವರನ್ನು ಮೂರು ವರ್ಷ ದೇಶದಿಂದ ಹೊರಗಿಡುವ ಅವಧಿಯನ್ನು ರದ್ದುಪಡಿಸಿದ್ದಾರೆ ಎಂದು ಸುದ್ದಿಸಂಸ್ಥೆಗಳ ವರದಿಗಳನ್ನು ಆಸ್ಟ್ರೇಲಿಯನ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್‌ ದೃಢಪಡಿಸಿದೆ.

ADVERTISEMENT

ಇಮಿಗ್ರೇಷನ್‌ ಸಚಿವ ಆ್ಯಂಡ್ರ್ಯೂ ಗೈಲ್ಸ್ ಅವರ ಕಚೇರಿಯು ಗೋಪ್ಯತೆಯ ಕಾರಣ ಈ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದೆ. ವೀಸಾ ಸ್ಥಿತಿಗತಿಯ ಕುರಿತು ಜೊಕೊವಿಚ್‌ ಅವರೇ ಘೋಷಿಸಬೇಕಿದೆ.

ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಗಡಿ ನಿಯಮಗಳನ್ನು ಬದಲಾಯಿಸಲಾಗಿದೆ. ಅನ್ಯ ದೇಶಗಳಿಂದ ಆಸ್ಟ್ರೇಲಿಯಾಕ್ಕೆ ಬರುವವರು ಕೋವಿಡ್‌–19 ಪ್ರಮಾಣಪತ್ರ ತೋರಿಸಬೇಕಿಲ್ಲ ಎಂಬುದೂ ಅದರಲ್ಲಿ ಸೇರಿದೆ. ಹೀಗಾಗಿ ಜೊಕೊವಿಚ್‌ ಪ್ರವೇಶಕ್ಕಿದ್ದ ದೊಡ್ಡ ತಡೆಯೊಂದು ಇಲ್ಲದಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.