ಪ್ಯಾರಿಸ್: ಸರ್ಬಿಯಾದ ನೊವಾಕ್ ಜೊಕೊವಿಕ್ ಸೋಮವಾರ ನಡೆದ ಒಲಿಂಪಿಕ್ಸ್‌ನ ಪುರುಷರ ಸಿಂಗಲ್ಸ್ ಎರಡನೇ ಸುತ್ತಿನ ಪಂದ್ಯದಲ್ಲಿ ಸ್ಪೇನ್‌ನ ರಫೆಲ್ ನಡಾಲ್ ಅವರನ್ನು ಮಣಿಸಿದರು.
ದಾಖಲೆಯ 24 ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ವಿಜೇತ ಜೊಕೊವಿಚ್ ಅವರು 6–1, 6–4ರಿಂದ ನಡಾಲ್ ಅವರನ್ನು ಹಿಮ್ಮೆಟ್ಟಿಸಿದರು. 14 ಬಾರಿ ಫ್ರೆಂಚ್ ಓಪನ್ ಚಾಂಪಿಯನ್ ಆಗಿರುವ ನಡಾಲ್ 22 ಗ್ರ್ಯಾನ್‌ಸ್ಲಾಮ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
ಈ ಟೆನಿಸ್ ತಾರೆಯರ ನಡುವೆ ಇದು 60ನೇ ಮತ್ತು ಬಹುತೇಕ ಕೊನೆಯ ಮುಖಾಮುಖಿಯಾಗಿದೆ. ಅದರಲ್ಲಿ ಜೊಕೊವಿಚ್ 31 ಪಂದ್ಯಗಳನ್ನು ಗೆದ್ದಂತಾಗಿದೆ. ರೋಲ್ಯಾಂಡ್ ಗ್ಯಾರೋಸ್ ಕ್ಲೇ ಕೋರ್ಟ್‌ನಲ್ಲೇ 2006ರಲ್ಲಿ ಅವರಿಬ್ಬರು ಮೊದಲ ಬಾರಿ ಎದುರಾಗಿದ್ದರು.
‘20 ವರ್ಷಗಳ ನಂತರ ನಾವು ಮತ್ತೆ ಮುಖಾಮುಖಿಯಾಗುತ್ತೇವೆ ಎಂದು ಕನಸಿನಲ್ಲೂ ಯೋಚಿಸಿರಲಿಲ್ಲ’ ಎಂದು ಪಂದ್ಯದ ಬಳಿಕ ಜೊಕೊವಿಚ್ ಪ್ರತಿಕ್ರಿಯಿಸಿದರು.
ಸಿಂಗಲ್ಸ್‌ನಲ್ಲಿ ಸೋಲಿನ ಹೊರತಾಗಿಯೂ, ಕಾರ್ಲೋಸ್ ಅಲ್ಕರಾಜ್ ಅವರೊಂದಿಗೆ ಪುರುಷರ ಡಬಲ್ಸ್‌ನಲ್ಲಿ ಸ್ಪರ್ಧಿಸುತ್ತಿರುವ ನಡಾಲ್ ಇನ್ನೂ ಚಿನ್ನದ ಪದಕದ ಭರವಸೆಯನ್ನು ಉಳಿಸಿಕೊಂಡಿದ್ದಾರೆ.
ಇಗಾ ಶ್ವಾಂಟೆಕ್‌ಗೆ ಗೆಲುವು:
ವಿಶ್ವದ ಅಗ್ರಮಾನ್ಯ ಆಟಗಾರ್ತಿ ಇಗಾ ಶ್ವಾಂಟೆಕ್ ಮಹಿಳೆಯರ ಸಿಂಗಲ್ಸ್‌ನಲ್ಲಿ ಮೂರನೇ ಸುತ್ತು ಪ್ರವೇಶಿಸಿದರು.
ಪೋಲೆಂಡ್‌ನ 23 ವರ್ಷ ವಯಸ್ಸಿನ ಆಟಗಾರ್ತಿ 6–1, 6–1ರಿಂದ ಆತಿಥೇಯ ಫ್ರಾನ್ಸ್‌ನ ಡಯೇನ್ ಪೆರ‍್ರಿ ಅವರನ್ನು ಸುಲಭವಾಗಿ ಮಣಿಸಿದರು. ನಾಲ್ಕು ಬಾರಿಯ ಫ್ರೆಂಚ್ ಓಪನ್ ಚಾಂಪಿಯನ್ ಶ್ವಾಂಟೆಕ್ ಅವರು, ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಎರಡನೇ ಸುತ್ತಿನಲ್ಲೇ ಹೊರಬಿದ್ದಿದ್ದರು. ಅಂದು ಚೀನಾದ ವಾಂಗ್ ಕ್ಸಿಯು ವಿರುದ್ಧ ಸೋತಿದ್ದರು. ಅಮೆರಿಕದ ಕೊಕೊ ಗಾಫ್ 6-1, 6-1ರಿಂದ ಅರ್ಜೆಂಟೀನಾದ ಮರಿಯಾ ಲೌರ್ಡೆಸ್ ಕಾರ್ಲೆ ಅವರನ್ನು ಸೋಲಿಸಿ ಮೂರನೇ ಸುತ್ತು ಪ್ರವೇಶಿಸಿದರು.
ಟೆನಿಸ್‌ನಲ್ಲಿ ಭಾರತದ ಸವಾಲು ಅಂತ್ಯ
ಪ್ಯಾರಿಸ್ (ಪಿಟಿಐ): ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಟೆನಿಸ್ ಅಭಿಯಾನ ಒಂದೇ ದಿನದಲ್ಲಿ ಮುಕ್ತಾಯಗೊಂಡಿದೆ. ಸುಮಿತ್ ನಗಾಲ್ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ ಸೋತ ಬೆನ್ನಲ್ಲೇ, ರೋಹನ್ ಬೋಪಣ್ಣ– ಎನ್. ಶ್ರೀರಾಮ್ ಬಾಲಾಜಿ ಅವರು ಡಬಲ್ಸ್‌ನಲ್ಲೂ ಹೊರಬಿದ್ದಿದ್ದಾರೆ.
ಭಾನುವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಬೋಪಣ್ಣ– ಬಾಲಾಜಿ ಜೋಡಿಯು 5-7, 2-6ರ ನೇರ ಸೆಟ್‌ಗಳಿಂದ ಆತಿಥೇಯ ಫ್ರಾನ್ಸ್‌ನ ಎಡ್ವರ್ಡ್ ರೋಜರ್ ವ್ಯಾಸೆಲಿನ್ ಮತ್ತು ಗೇಲ್ ಮೊನ್ಫಿಲ್ಸ್ ಅವರಿಗೆ ಶರಣಾಯಿತು. ಫ್ರೆಂಚ್ ಆಟಗಾರ ಫ್ಯಾಬಿಯನ್ ರೆಬೌಲ್ ಕೊನೆಯ ಕ್ಷಣದಲ್ಲಿ ಗಾಯಾಳಾದ ಕಾರಣ ಅವರ ಸ್ಥಾನವನ್ನು ಮೊನ್ಫಿಲ್ಸ್ ತುಂಬಿದರು.
ಟೆನಿಸ್‌ನಲ್ಲಿ ಭಾರತವು ಈತನಕ ಒಂದು ಒಲಿಂಪಿಕ್ ಪದಕ ಮಾತ್ರ ಗೆದ್ದಿದೆ. 1996ರ ಅಟ್ಲಾಂಟಾ ಕ್ರೀಡಾಕೂಟದಲ್ಲಿ ಲಿಯಾಂಡರ್ ಪೇಸ್ ಪುರುಷರ ಸಿಂಗಲ್ಸ್‌ನಲ್ಲಿ ಕಂಚನ್ನು ಕೊರಳಿಗೇರಿಸಿಕೊಂಡಿದ್ದರು.
ಮೂರನೇ ಬಾರಿ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ 44 ವರ್ಷದ ಬೋಪಣ್ಣ ಅವರಿಗೆ ಒಲಿಂಪಿಕ್ ಪದಕ ಗೆಲ್ಲಲು ಇದ್ದ ಕೊನೆಯ ಅವಕಾಶವೂ ಮುಚ್ಚಿಹೋಯಿತು. ಬೋಪಣ್ಣ ಈಗಾಗಲೇ ಡೇವಿಸ್ ಕಪ್‌ಗೆ ವಿದಾಯ ಹೇಳಿದ್ದಾರೆ.
‘ಭಾರತದ ಜೆರ್ಸಿಯಲ್ಲಿ ಇದು ನನ್ನ ಕೊನೆಯ ಪಂದ್ಯವಾಗಿದೆ’ ಎಂದು ಪಂದ್ಯ ಸೋತ ನಂತರ ಕರ್ನಾಟಕದ ಬೋಪಣ್ಣ ಪ್ರತಿಕ್ರಿಯಿಸಿದರು.
ಇದಕ್ಕೂ ಮೊದಲು ಪುರುಷರ ಸಿಂಗಲ್ಸ್‌ನಲ್ಲಿ ನಗಾಲ್ ಅವರು ಫ್ರಾನ್ಸ್‌ನ ಕೊರೆಂಟಿನ್ ಮೌಟೆಟ್ ಅವರಿಗೆ 2-6, 6-4, 5-7ರಲ್ಲಿ ಮಣಿದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.