ಪ್ಯಾರಿಸ್: ಭಾರತದ ಅಗ್ರಮಾನ್ಯ ಸಿಂಗಲ್ಸ್ ಆಟಗಾರ ಸುಮಿತ್ ನಗಾಲ್ ಅವರು ಒಲಿಂಪಿಕ್ಸ್‌ನಲ್ಲಿ ಪುರುಷರ ಸಿಂಗಲ್ಸ್ ಆರಂಭಿಕ ಸುತ್ತಿನಲ್ಲಿ ಮೂರು ಸೆಟ್‌ಗಳ ಹೋರಾಟದ ನಂತರ ನಿರಾಸೆ ಅನುಭವಿಸಿದರು.
ಎರಡನೇ ಬಾರಿ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿರುವ 26 ವರ್ಷ ವಯಸ್ಸಿನ ನಗಾಲ್ ಭಾನುವಾರ ನಡೆದ ಪಂದ್ಯದಲ್ಲಿ 2-6, 6-2, 5-7ರಿಂದ ಆತಿಥೇಯ ಫ್ರಾನ್ಸ್‌ನ ಕೊರೆಂಟಿನ್ ಮೌಟೆಟ್ ಅವರಿಗೆ ಶರಣಾದರು.
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನಗಾಲ್ ಎರಡನೇ ಸುತ್ತು ತಲುಪಿದ್ದರು. ಅಲ್ಲಿ ರಷ್ಯಾದ ಡೇನಿಯಲ್ ಮೆಡ್ವೆಡೆವ್ ಅವರಿಗೆ ಮಣಿದಿದ್ದರು. ಆದರೆ, ಇಲ್ಲಿ ಉತ್ತಮ ಆರಂಭ ಪಡೆಯಲು ಅವರಿಗೆ ಸಾಧ್ಯವಾಗಲಿಲ್ಲ.
ರೋಲ್ಯಾಂಡ್ ಗ್ಯಾರೋಸ್‌ನ ಏಳನೇ ಅಂಕಣದಲ್ಲಿ ಎರಡು ಗಂಟೆ 28 ನಿಮಿಷಗಳ ಕಾಲ ನಡೆದ ಹೋರಾಟದ ಮೊದಲ ಸೆಟ್‌ನಲ್ಲಿ ಕೊರೆಂಟಿನ್ ಮೇಲುಗೈ ಸಾಧಿಸಿದರು. ನಂತರದಲ್ಲಿ ತಿರುಗೇಟು ನೀಡಿದ ನಗಾಲ್, ಸೆಟ್ ಅನ್ನು ಸಮಬಲಗೊಳಿಸುವಲ್ಲಿ ಯಶಸ್ವಿಯಾದರು. ನಿರ್ಣಾಯಕ ಸೆಟ್‌ನಲ್ಲಿ ಇಬ್ಬರ ನಡುವೆ ತೀವ್ರ ಪೈಪೋಟಿ ನಡೆಯುತಾದರೂ ಅಂತಿಮವಾಗಿ ಕೊರೆಂಟಿನ್ ತವರಿನ ಪ್ರೇಕ್ಷಕರ ಎದುರು ಮುಂದಿನ ಸುತ್ತಿನತ್ತ ಹೆಜ್ಜೆ ಹಾಕಿದರು. ನಗಾಲ್ ಎಸಗಿದ ಹಲವು ತಪ್ಪುಗಳು ಅವರಿಗೆ ದುಬಾರಿಯಾದವು.
ನಗಾಲ್ ನಿರ್ಗಮಿಸುವುದರೊಂದಿಗೆ ಸಿಂಗಲ್ಸ್‌ನಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ. ಡಬಲ್ಸ್‌ನಲ್ಲಿ ರೋಹನ್ ಬೋಪಣ್ಣ– ಎನ್. ಶ್ರೀರಾಮ್ ಬಾಲಾಜಿ ಜೋಡಿಯು ಫ್ರಾನ್ಸ್‌ನ ಗೇಲ್ ಮೊನ್‌ಫಿಲ್ಸ್ ಮತ್ತು ಎಡ್ವರ್ಡ್ ರೋಜರ್ ವಾಸೆಲಿನ್ ವಿರುದ್ಧ ಅಭಿಯಾನ ಆರಂಭಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.