ನ್ಯೂಯಾರ್ಕ್: ಪೋಲಂಡ್‌ನ ಇಗಾ ಸ್ವಟೆಕ್ ಅವರು ಅಮೆರಿಕ ಓಪನ್ ಗ್ರ್ಯಾನ್‌ಸ್ಲಾಮ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಚೊಚ್ಚಲ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
ಅಲ್ಲದೆ ಪ್ರಸಕ್ತ ಸಾಲಿನಲ್ಲಿ ಎರಡನೇ ಮತ್ತು ಒಟ್ಟಾರೆಯಾಗಿ ಮೂರನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಜಯಿಸಿದ್ದಾರೆ.
ಇಗಾ ಸ್ವಟೆಕ್ 2020 ಹಾಗೂ 2022ನೇ ಸಾಲಿನಲ್ಲಿ ಫ್ರೆಂಚ್ ಓಪನ್ ಗೆದ್ದ ಸಾಧನೆ ಮಾಡಿದ್ದಾರೆ.
ವಿಶ್ವದ ಅಗ್ರ ರ‍್ಯಾಂಕ್‌ನ ಆಟಗಾರ್ತಿ 21 ವರ್ಷದ ಸ್ವಟೆಕ್ ಅವರು ಶನಿವಾರ ನಡೆದ ಫೈನಲ್ ಮುಖಾಮುಖಿಯಲ್ಲಿ ಟ್ಯುನಿಷಿಯಾದ ಆನ್ಸ್ ಜಬೇರ್ ವಿರುದ್ಧ 6-2, 7-6 (7/5)ರ ನೇರ ಸೆಟ್‌ನಲ್ಲಿ ಜಯ ಗಳಿಸಿದರು.
ಅರ್ಥುರ್ ಅಶ್ಲೆ ಸ್ಟೇಡಿಯಂನಲ್ಲಿ ನಡೆದ ಜಿದ್ದಾಜಿದ್ದಿನ ಸೆಣಸಾಣದಲ್ಲಿ ಒಂದು ಗಂಟೆ 52 ನಿಮಿಷಗಳ ಅಂತರದಲ್ಲಿ ಸ್ವಟೆಕ್ ಪಂದ್ಯ ವಶಪಡಿಸಿಕೊಂಡರು.
ಅತ್ತ ಆನ್ಸ್ ಜಬೇರ್, ಪ್ರಸಕ್ತ ಸಾಲಿನಲ್ಲಿ ಎರಡನೇ ಬಾರಿಗೆ ಚೊಚ್ಚಲ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆಲ್ಲುವ ಅವಕಾಶದಿಂದ ವಂಚಿತರಾಗಿದ್ದಾರೆ. ಕಳೆದ ವಿಂಬಲ್ಡನ್ ಟೂರ್ನಿಯಲ್ಲೂ ರನ್ನರ್-ಅಪ್ ಪ್ರಶಸ್ತಿ ಜಯಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.