ಬೆಂಗಳೂರು: ಸ್ಥಳೀಯ ಆಟಗಾರರಾದ ಪ್ರಜ್ವಲ್ ದೇವ್ ಮತ್ತು ಸೋಹಾ ಸಾದಿಕ್ ಅವರು ಶನಿವಾರ ಕೊನೆಗೊಂಡ ಎಐಟಿಎ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದ ಪ್ರಶಸ್ತಿ ಮುಡಿಗೇರಿಸಿಕೊಂಡರು.
ರಾಜ್ಯ ಟೆನಿಸ್ ಸಂಸ್ಥೆಯ ಆಶ್ರಯದಲ್ಲಿ ರೋಹನ್ ಬೋಪಣ್ಣ ದಿ ಸ್ಪೋರ್ಟ್ಸ್ ಸ್ಕೂಲ್ ಟೆನಿಸ್ ಅಕಾಡೆಮಿಯಲ್ಲಿ ನಡೆದ ಚಾಂಪಿಯನ್‌ಷಿಪ್‌ನ ಪುರುಷರ ವಿಭಾಗದಲ್ಲಿ ಎರಡನೇ ಶ್ರೇಯಾಂಕದ ಪ್ರಜ್ವಲ್ ದೇವ್ ಅಗ್ರ ಶ್ರೇಯಾಂಕದ ಆಟಗಾರ ಆಂಧ್ರಪ್ರದೇಶದ ನಿಕ್ಕಿ ಪೂಣಚ್ಚ ವಿರುದ್ಧ 6-4, 3-6, 6-1ರಲ್ಲಿ ಜಯ ಗಳಿಸಿದರು. ಮೂರನೇ ಶ್ರೇಯಾಂಕಿತೆ ಸೋಹ ಸಾದಿಕ್ ಎರಡನೇ ಶ್ರೇಯಾಂಕಿತೆ ತಮಿಳುನಾಡಿನ ಸಂಹಿತಾ ಚಮರ್ಥಿ ಅವರನ್ನು 6-4, 6-7 (0), 6-2ರಲ್ಲಿ ಮಣಿಸಿದರು.
ಪುರುಷರ ವಿಭಾಗದ ಫೈನಲ್‌ನ ಮೊದಲ ಸೆಟ್‌ನ ಒಂಬತ್ತನೇ ಗೇಮ್ ವರೆಗೂ ನಿಕ್ಕಿ ಪೂಣಚ್ಚ ಸರ್ವ್ ಉಳಿಸಿಕೊಂಡರು. ಅವರ ಸರ್ವ್ ಮುರಿದ ಪ್ರಜ್ವಲ್ ನಂತರ ಆಧಿಪತ್ಯ ಸ್ಥಾಪಿಸಿ ಸೆಟ್ ಗೆದ್ದುಕೊಂಡರು. ಎರಡನೇ ಸೆಟ್‌ನಲ್ಲೂ ಆರಂಭದಲ್ಲಿ ನಿಕ್ಕಿ ಅವರು ಅಮೋಘ ಆಟವಾಡಿದರು. ಆದರೆ ತಿರುಗೇಟು ನೀಡಿದ ಪ್ರಜ್ವಲ್ ಹಿಡಿತ ಸಾಧಿಸಿದರು. ಆದರೂ ನಿಕ್ಕಿ ಪಟ್ಟು ಬಿಡಲಿಲ್ಲ. ಹೀಗಾಗಿ ಪಂದ್ಯ ಮೂರನೇ ಸೆಟ್‌ಗೆ ಸಾಗಿತು. ನಿರ್ಣಾಯಕ ಸೆಟ್‌ನ ಆರಂಭದಲ್ಲೇ ಪ್ರಜ್ವಲ್ ಎದುರಾಳಿಯ ಸರ್ವ್ ಮುರಿದರು. ಮೊದಲ ಸೆಟ್‌ನಲ್ಲಿ ಕಿಬ್ಬೊಟ್ಟೆಯಲ್ಲಿ ಕಾಣಿಸಿಕೊಂಡ ನೋವು ಕೊನೆಯ ಸೆಟ್‌ನಲ್ಲಿ ನಿಕ್ಕಿ ಅವರನ್ನು ಹೆಚ್ಚು ಕಾಡಿತು. ಹೀಗಾಗಿ ಸುಲಭವಾಗಿ ಸೋಲೊಪ್ಪಿಕೊಂಡರು.
ಮಹಿಳೆಯರ ವಿಭಾಗದ ಫೈನಲ್‌ನ ಮೊದಲ ಎರಡು ಸೆಟ್‌ಗಳಲ್ಲಿ ಜಿದ್ದಾಜಿದ್ದಿಯ ಹೋರಾಟ ಕಂಡುಬಂತು. ಮೊದಲ ಸೆಟ್‌ನ ಕೊನೆಯಲ್ಲಿ ಪಾಯಿಂಟ್‌ಗಳನ್ನು ಬಿಟ್ಟುಕೊಟ್ಟು ಸೋಲೊಪ್ಪಿಕೊಂಡರೂ ಎರಡನೇ ಸೆಟ್‌ನಲ್ಲಿ ಸಂಹಿತಾ ಪ್ರಬಲ ಪೈಪೋಟಿ ನೀಡಿ ಸೆಟ್ ಟೈಬ್ರೇಕರ್‌ನತ್ತ ಸಾಗುವಂತೆ ಮಾಡಿದರು. ಆದರೆ ಕೊನೆಯ ಸೆಟ್‌ನಲ್ಲಿ ಬೆಂಗಳೂರಿನ ಆಟಗಾರ್ತಿ ಎದುರಾಳಿಗೆ ಹೆಚ್ಚು ಅವಕಾಶಗಳನ್ನು ನೀಡದೆ ಗೆದ್ದು ಸಂಭ್ರಮಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.