ADVERTISEMENT

ಬದುಕು ಬದಲಿಸಿದ ಗಾಲಿಕುರ್ಚಿ ಟೆನಿಸ್

ಪ್ರಜಾವಾಣಿ ವಿಶೇಷ
Published 12 ಮಾರ್ಚ್ 2021, 19:30 IST
Last Updated 12 ಮಾರ್ಚ್ 2021, 19:30 IST
ಪ್ರತಿಮಾ ಎನ್. ರಾವ್
ಪ್ರತಿಮಾ ಎನ್. ರಾವ್   

ಬೆಂಗಳೂರಿನ ಪ್ರತಿಮಾ ಎನ್‌. ರಾವ್ ಈಗ ಭಾರತದ ಗಾಲಿಕುರ್ಚಿ ಟೆನಿಸ್‌ನಲ್ಲಿ ನಂಬರ್ ಒನ್ ಆಟಗಾರ್ತಿಯಾಗಿದ್ದಾರೆ. ಒಂಬತ್ತು ವರ್ಷಗಳ ಹಿಂದೆ ಗಾಲಿಕುರ್ಚಿ ಟೆನಿಸ್ ಆಡಲು ಶುರು ಮಾಡಿದಾಗ ವ್ಯಂಗ್ಯ ಮಾಡಿ ನಕ್ಕವರೇ ಈಗ ಅಭಿನಂದಿಸುವ ಮಟ್ಟಕ್ಕೆ ಪ್ರತಿಮಾ ಬೆಳೆದಿದ್ದಾರೆ.

ನಾನು 2012ಕ್ಕಿಂತ ಮುಂಚೆ ಒಂದು ಸಲವೂ ಟೆನಿಸ್‌ ಆಟವಾಡಿರಲೇ ಇಲ್ಲ. ನನ್ನ ಆಂಟಿಯ ಸ್ನೇಹಿತರಾದ ಸೀತಾರಾಮ್ ಅವರು ಟೆನಿಸ್ ಆಡುತ್ತಿದ್ದರು. ‘ಒಮ್ಮೆ ಕೆಎಸ್‌ಎಲ್‌ಟಿಎಗೆ ಬಂದು ಗಾಲಿಕುರ್ಚಿ ಟೆನಿಸ್ ಆಡುವುದನ್ನು ನೋಡಿ’ ಎಂದು ಬಹಳಷ್ಟು ಸಲ ಹೇಳಿದ್ದರು. ಅದೊಂದು ದಿನ ಅವರೊಂದಿಗೆ ಕಬ್ಬನ್‌ ಪಾರ್ಕ್‌ನಲ್ಲಿರುವ ಕೆಎಸ್‌ಎಲ್‌ಟಿಎಗೆ ಹೋದೆ. ಗಾಲಿಕುರ್ಚಿ ಟೆನಿಸ್ ನನ್ನ ಮನಗೆದ್ದಿತು. ಬಹುವಾಗಿ ಆಕರ್ಷಿಸಿದ ಆಟವನ್ನು ಅಪ್ಪಿಕೊಂಡೆ. ಅದು ನನ್ನ ಬದುಕು ಬದಲಿಸಿತು.

ಮೂರನೇ ವಯಸ್ಸಿನಲ್ಲಿ ಪೋಲಿಯೊದಿಂದಾಗಿ ಕಾಲಿನ ಸ್ವಾಧಿನ ಕಳೆದುಕೊಂಡ ಮೇಲೆ ಕ್ಯಾಲಿಪರ್ಸ್ ನೆರವಿನಿಂದ ಬದುಕು ಸಾಗಿಸಿದ್ದೆ. ಓದು, ಮನೆ ಮತ್ತು ಕೆಲಸ ಸಿಕ್ಕ ಮೇಲೆ ಕಚೇರಿಯಷ್ಟೇ ನನ್ನ ಬದುಕಾಗಿತ್ತು. ಆದರೆ, ಅದೊಮ್ಮೆ ಕ್ರೀಡೆಯಲ್ಲಿ ಏನಾದರೂ ಸಾಧಿಸಬೇಕು ಎಂಬ ಛಲ ಮೂಡಿತು. ಅಥ್ಲೆಟಿಕ್ಸ್, ಆರ್ಚರಿಯಲ್ಲಿ ಪ್ರಯತ್ನಿಸಿದೆ. ಆದರೆ, ಗಾಲಿಕುರ್ಚಿ ಟೆನಿಸ್ ಮನಸೂರೆಗೊಂಡಿತು. ಟೆನಿಸ್ ಆಡಲು ಆರಂಭಿಸುತ್ತೇನೆ ಎಂದಾಗ ವ್ಯಂಗ್ಯವಾಗಿ ನಕ್ಕವರು ಅದೆಷ್ಟೋ ಜನ. ಅದನ್ನು ಚಾಲೆಂಜ್ ಆಗಿ ತೆಗೆದುಕೊಂಡೆ. ಗಾಲಿಕುರ್ಚಿ ಉಪಯೋಗಿಸುವುದನ್ನು ಕಲಿಯಲು ಒಂದು ತಿಂಗಳು ತೆಗೆದುಕೊಂಡೆ. ಏಕೆಂದರೆ ಅದು ವಿಶೇಷ ವಿನ್ಯಾಸದಿಂದ ಇರುವ ಗಾಲಿಕುರ್ಚಿ. ಕೋರ್ಟ್‌ನಲ್ಲಿ ಚೆಂಡನ್ನು ಹೊಡೆಯಲು ಚಲಿಸಲು ಅನುಕೂಲವಾಗುವಂತಹ ತಂತ್ರಜ್ಞಾನ ಅದರಲ್ಲಿರುತ್ತದೆ. ಅದನ್ನು ಬಳಸಲು ಕಲಿತ ನಂತರ ಆತ್ಮವಿಶ್ವಾಸ ಹೆಚ್ಚಿತು.

ADVERTISEMENT

ಆಗ ಕೆಎಸ್‌ಎಲ್‌ಟಿಎ (ಕರ್ನಾಟಕ ರಾಜ್ಯ ಲಾನ್‌ಟೆನಿಸ್‌ ಸಂಸ್ಥೆ)ನಲ್ಲಿ ವಾರಾಂತ್ಯದ ಎರಡು ದಿನ ಮಾತ್ರ ವ್ಹೀಲ್‌ಚೇರ್ ಟೆನಿಸ್‌ ಪಟುಗಳಿಗೆ ಅಭ್ಯಾಸ ಮಾಡಲು ಅವಕಾಶ ಇತ್ತು. ನನ್ನಂತೆ ಇದ್ದ ಒಂದಿಷ್ಟು ಗೆಳೆಯರೊಂದಿಗೆ ಅಲ್ಲಿ ಅಭ್ಯಾಸ ಮಾಡುತ್ತಿದ್ದೆ. 2015ರಲ್ಲಿ ನಡೆದ ಒಂದು ಟೂರ್ನಿಯಲ್ಲಿ ರನ್ನರ್ ಅಪ್ ಆದೆ. ಆಗ ಅಲ್ಲಿಯ ಮುಖ್ಯ ಕೋಚ್ ನಿರಂಜನ್ ರಮೇಶ್ ನನ್ನ ಆಟ ಗಮನಿಸಿದರು. ‘ಪ್ರತಿದಿನದ ಅಭ್ಯಾಸಕ್ಕೆ ಬನ್ನಿ, ತರಬೇತಿ ಕೋಡುತ್ತೇವೆ. ಶುಲ್ಕದ ಬಗ್ಗೆ ಯೋಚನೆ ಮಾಡಬೇಡಿ. ಆಡಲು ಬನ್ನಿ’ ಎಂದರು. ಆ ದಿನ ನನ್ನ ಜೀವನಕ್ಕೆ ಹೊಸ ತಿರುವು ಲಭಿಸಿತು. ಸಾಧನೆಯ ಹಾದಿಯಲ್ಲಿ ಗಾಲಿಕುರ್ಚಿ ಸಾಗುತ್ತಿದೆ. ಈ ಟೆನಿಸ್‌ ಕಲಿತ ಮೇಲೆ ಬದುಕು ಭಾವನಾತ್ಮಕವಾಗಿ, ಸೃಜನಾತ್ಮಕವಾಗಿ ಮತ್ತು ಸಕಾರಾತ್ಮಕವಾಗಿ ಬದಲಾಗಿದೆ. ಮೊದಲೆಲ್ಲ ಅಭದ್ರತೆ ಕಾಡುತ್ತಿತ್ತು. ಶಾಲೆ, ಕಚೇರಿಗಳಿಗೆ ಹೋಗಲು ಒಬ್ಬರು ಜೊತೆಗೆ ಬರಬೇಕಿತ್ತು. ಆದರೆ ಟೆನಿಸ್ ಆಡಲು ಆರಂಭಿಸಿದ ಮೇಲೆ ಒಬ್ಬಳೇ ಪ್ರಯಾಣ ಮಾಡುತ್ತೇನೆ.

ಇನ್ನು ಆಟದ ಬಗ್ಗೆ ಹೇಳುವುದಾದರೆ.. ಸತತವಾಗಿ ರಾಷ್ಟ್ರೀಯ ನಂಬರ್ ಒನ್ ಸ್ಥಾನವನ್ನು ಉಳಿಸಿಕೊಂಡು ಬಂದಿದ್ದೇನೆ. 2020ರಲ್ಲಿ ಟೂರ್ನಿಗಳು ಇರಲಿಲ್ಲ. 2021ರಲ್ಲಿ ಈಗ ನಡೆದ ಎರಡು ಟೂರ್ನಿಗಳಲ್ಲಿಯೂ ಪ್ರಶಸ್ತಿ ಗೆದ್ದಿದ್ದೇನೆ. ಸಾಮಾನ್ಯರಿಗೆ ಇರುವ ಟೆನಿಸ್‌ ಆಟದ ಬಹುತೇಕ ನಿಯಮಗಳು ಇಲ್ಲಿಯೂ ಇವೆ. ಆದರೆ, ನಮ್ಮ ಟೆನಿಸ್‌ನಲ್ಲಿ ಚೆಂಡು ಎರಡು ಬೌನ್ಸ್‌ ರಿಟರ್ನ್‌ಗೆ ಅವಕಾಶ ಇದೆ. ಗಾಲಿಕುರ್ಚಿ ಮಾತ್ರ 3.5 ಲಕ್ಷ ರೂಪಾಯಿ ಮೌಲ್ಯದ್ದು. ವಿಷ್‌ಬೆರಿ ಕ್ರೌಡ್‌ಫಂಡಿಂಗ್‌ ಮೂಲಕ ಹಣ ಸಂಗ್ರಹಿಸಿ ವ್ಹೀಲ್‌ಚೇರ್ ತೊಗೊಂಡೆ. ಅಂತರರಾಷ್ಟ್ರೀಯ ಟೂರ್ನಿಗೂ ಹೋಗಿಬಂದೆ. ಅಲ್ಲಿಯ ಪದ್ಧತಿಯೇ ಬೇರೆ. ವಿದೇಶದಲ್ಲಿ ಪ್ರತಿಯೊಬ್ಬ ಆಟಗಾರನಿಗೆ ವೈಯಕ್ತಿಕ ಕೋಚ್ ಮತ್ತು ಅನುಕೂಲಗಳು ಇರುತ್ತವೆ. ನಮಗೆ ಅದರ ಕೊರತೆ ಇದೆ. ಇಲ್ಲಿ ಸರ್ಕಾರಗಳಿಂದ ಆ ಮಟ್ಟದ ಸಹಾಯ ಸಿಗುತ್ತಿಲ್ಲ.

ಮಗನ ಸಹಕಾರ

ಬಹಳಷ್ಟು ಬದಲಾವಣೆ ತಂದ ಟೆನಿಸ್‌ನಲ್ಲಿ ಸಾಧನೆ ಮಾಡಲು ನನ್ನ ಮಗನ ಸಹಕಾರ ದೊಡ್ಡದು. ನಾನು ಬೇರೆ ರಾಜ್ಯಗಳಿಗೆ ಮತ್ತು ದೇಶಗಳಿಗೆ ಆಡಲು ಹೋದಾಗ ತನ್ನ ಶಾಲೆ, ಓದನ್ನು ನಿರ್ವಹಿಸಿಕೊಳ್ಳುತ್ತಿದ್ದ. ಆತನೊಂದಿಗೆ ಹೆಚ್ಚು ಸಮಯ ಕೊಡಲು ನನಗೆ ಸಾಧ್ಯವಾಗುತ್ತಿರಲಿಲ್ಲ. ನನ್ನ ಯಶಸ್ಸಿನಲ್ಲಿ ಆತನಿಗೂ ಶ್ರೇಯ ಸಲ್ಲಬೇಕು. ಈಗ ಅವನು ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದಾನೆ. ವಾಲಿಬಾಲ್ ಆಟಗಾರನೂ ಹೌದು.

ನಾನು ಕಾರ್ಯನಿರ್ವಹಿಸುವ ಜಿವಿಕೆಎಂಆರ್‌ಐನಲ್ಲಿ ಬಹಳ ಬೆಂಬಲ ನೀಡುತ್ತಿದ್ದಾರೆ. ರಜೆಗಳನ್ನು ನೀಡುತ್ತಿದ್ದಾರೆ. ಬಹಳ ಸಹಕಾರ ಇದೆ. ಟೆನಿಸ್‌ ದುಬಾರಿ ಕ್ರೀಡೆಯಾಗಿರುವುದರಿಂದ ಪ್ರಾಯೋಜಕರ ಅವಶ್ಯಕತೆಯೂ ನನಗಿದೆ. ಆದರೆ ದುಡ್ಡಿಗಿಂತಲೂ ದೊಡ್ಡದೆಂದರೆ ಆತ್ಮತೃಪ್ತಿ. ಅದನ್ನು ನನಗೆ ಈ ಟೆನಿಸ್ ನೀಡಿದೆ. ವ್ಯಂಗ್ಯ ಮಾಡಿ ನಕ್ಕವರೆಲ್ಲರೂ ಬಂದು ಅಭಿನಂದಿಸಿದಾಗ ಸಿಗುವ ಖುಷಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.