ಹದಿನೇಳರ ಚಿಕ್ಕಪ್ರಾಯದಲ್ಲೇ ಟೆನಿಸ್ ಆಡಲು ಶುರುಮಾಡಿದ ಸೆರೆನಾ 26 ವರ್ಷಗಳಿಂದ ವೃತ್ತಿಪರ ಆಟಗಾರ್ತಿ. ಒಂದೂವರೆ ದಶಕದಿಂದ ಕಾಲಿಗೆ ಸಂಬಂಧಿಸಿದ ಹಲವು ಬಗೆಯ ನೋವುಗಳು ಅವರನ್ನು ಬಾಧಿಸಿವೆ. ವಿಂಬಲ್ಡನ್‌ನಲ್ಲಿ ಮೊದಲ ಸುತ್ತಿನ ಮೊದಲ ಸೆಟ್‌ನಲ್ಲೇ ಆಡಲಾಗದೆ ಹೊರನಡೆದ ಅವರ ಸಂಕಟ ಕ್ರೀಡಾಪ್ರೇಮಿಗಳದ್ದೂ ಹೌದು. ಸೆರೆನಾ ನೋವಿನ ಅಧ್ಯಾಯಗಳು ಒಂದೆರಡಲ್ಲ...
***
‘1999ರಲ್ಲಿ ನಾನು ಅಮೆರಿಕ ಓಪನ್ ಟೆನಿಸ್ ಚಾಂಪಿಯನ್ ಆದಾಗ ಬೆನ್ನಮೇಲೆ ದೊಡ್ಡದೊಂದು ‘ಎಕ್ಸ್ ಫ್ಯಾಕ್ಟರ್’ ಇತ್ತು. ಎದುರಾಳಿಗಳೊಡ್ಡಿದ ಸವಾಲುಗಳನ್ನೆಲ್ಲ ಎದುರಿಸಿ ದಣಿದಿದ್ದ ಬೆನ್ನಮೇಲಿನ ನೋವು ಕೂಡ ಆಗ ಹಿತಾನುಭವವೇ; ಆನಂದಬಾಷ್ಪ ಎನ್ನುತ್ತೇವಲ್ಲ, ಹಾಗೆ ಅದು ಆನಂದದ ನೋವು.’
ಸೆರೆನಾ ವಿಲಿಯಮ್ಸ್ ಈ ಸಲದ ವಿಂಬಲ್ಡನ್ ಆಡುವ ಮೊದಲು ಸುದ್ದಿಮಿತ್ರರಿಗೆ ಮುಖಾಮುಖಿಯಾದಾಗ ಹಂಚಿಕೊಂಡಿದ್ದ ನೆನಪು ಇದು. ಇಪ್ಪತ್ತಾರು ವರ್ಷಗಳಷ್ಟು ಸುದೀರ್ಘಾವಧಿ ವೃತ್ತಿಪರ ಟೆನಿಸ್ ಆಡಿದ ಅವರ ಅಂಗಾಂಗಳೆಲ್ಲ ಇನ್ನಿಲ್ಲದಂತೆ ದಣಿದಿವೆ. ಮೂವತ್ತೊಂಬತ್ತರ ವಯಸ್ಸಿನಲ್ಲೂ ಅವರ ಆಟೋತ್ಕಟತೆ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ. 24ನೇ ಗ್ರ್ಯಾನ್ ಸ್ಲ್ಯಾಮ್ ಪ್ರಶಸ್ತಿ ಗೆದ್ದು ಬೀಗಬೇಕೆಂಬ ಹೆಗ್ಗುರಿಯನ್ನು ಮುಟ್ಟಲು ಅವರಿಗೆ ಆಗುತ್ತಲೇ ಇಲ್ಲ. ಹಾಗೆಂದು ಅವರು ಪೂರ್ಣವಿರಾಮ ಹಾಕಲು ಇನ್ನೂ ಸಿದ್ಧರಿಲ್ಲ. ವಿಂಬಲ್ಡನ್‌ನ ಮೊದಲ ಸುತ್ತಿನ ಪಂದ್ಯದಲ್ಲೇ ಅವರು ಕಾಲು ನೋವನ್ನು ತಡೆಯಲಾರದೆ ಕಣ್ಣಂಚಲ್ಲಿ ನೀರು ತಂದುಕೊಂಡು ಹೊರಟುಬಿಟ್ಟರು. ನವೊಮಿ ಒಸಾಕಾ ಹಾಗೂ ಸಿಮೊನಾ ಹೆಲೆಪ್ ಈ ಟೂರ್ನಿಯಲ್ಲಿ ಆಡದೇ ಹೊರಗುಳಿದ ಘಟ್ಟದಲ್ಲಿ ಸೆರೆನಾಗೆ ಗೆಲ್ಲುವ ಅವಕಾಶ ಇದೆಯೆಂದೇ ಟೆನಿಸ್ ಪ್ರೇಮಿಗಳು ಭಾವಿಸಿದ್ದರು. ಆದರೆ, ಅದು ಸುಳ್ಳಾಯಿತು.
‘1999ರಲ್ಲಿ ಅಮೆರಿಕ ಓಪನ್ ಗೆದ್ದಮೇಲೆ ಅಖಂಡವಾದ ಆತ್ಮವಿಶ್ವಾಸ ಬಂದಿತು. ಎದುರಾಳಿಗಳು ಅಲ್ಲಿಂದಾಚೆಗೆ ನನ್ನನ್ನು ಸೋಲಿಸಿದರೂ ಮುಂದಿನ ಸುತ್ತಿನಲ್ಲಿಯೇ ಅವರೂ ಸೋಲುತ್ತಿದ್ದರು. ಯಾಕೆಂದರೆ, ನನ್ನ ವಿರುದ್ಧ ಗೆಲ್ಲಲು ಅವರು ಅಷ್ಟರಮಟ್ಟಿಗೆ ಹೋರಾಡಿ ದಣಿದಿರುತ್ತಿದ್ದರು. ನನ್ನ ಸೋಲು ನನ್ನ ದಣಿವಷ್ಟೇ ಅಲ್ಲ, ಎದುರಾಳಿಯ ಜಂಘಾಬಲವನ್ನೂ ಉಡುಗಿಸಿಯೇ ಆಗಿರುತ್ತಿತ್ತು. ಸುಲಭವಾಗಿ ಪಂದ್ಯ ಬಿಟ್ಟುಕೊಡುವುದು ನನ್ನ ಜಾಯಮಾನ ಆಗಿರಲಿಲ್ಲ. ನಾನು 100 ಪರ್ಸೆಂಟ್ ಶ್ರಮ ಹಾಕಿದರೆ, ಎದುರಾಳಿ 150 ಪರ್ಸೆಂಟ್ ಹಾಕಲೇಬೇಕಿತ್ತು...’–ಸೆರೆನಾ ಹೀಗೆ ನೆನಪಿನ ಬುತ್ತಿ ಬಿಚ್ಚಿದ್ದು ವಿಂಬಲ್ಡನ್ ಶುರುವಾಗುವ ಮೊದಲು.
ಬೆಲರೂಸ್‌ನ ಅಲಿಯಾ ಸ್ಯಾಸ್‌ನೊವಿಚ್ ವಿರುದ್ಧ ವಿಂಬಲ್ಡನ್‌ನ ಮೊದಲ ಸುತ್ತಿನ ಪಂದ್ಯದ ಮೊದಲ ಸೆಟ್‌ನಲ್ಲೇ ಸೆರೆನಾ ಅವರನ್ನು ಕಾಲಿನ ನೋವು ಇನ್ನಿಲ್ಲದಂತೆ ಬಾಧಿಸಿತು. ಒಮ್ಮೆ ನೋವಿಗಾಗಿ ಚಿಕಿತ್ಸೆ ಪಡೆದು, ಮರಳಿ ತಮ್ಮ ಟ್ರೇಡ್‌ಮಾರ್ಕ್ ಫೋರ್‌ಹ್ಯಾಂಡ್ ಹೊಡೆತಗಳನ್ನು ತೋರಿದರಾದರೂ ಮುಖದ ಗೆರೆಗಳೇ ಅವರ ಯಾತನೆಗೆ ಕನ್ನಡಿ ಹಿಡಿದವು. ತಾವು ಸರ್ವ್ ಮಾಡುತ್ತಿದ್ದಾಗ ಚಿಕ್ಕ ಪ್ರಾಯದ ಎದುರಾಳಿ ಕೊಟ್ಟ ಪ್ರತಿಕ್ರಿಯೆಗೆ ನಿರುತ್ತರರಾದರು. ಚೆಂಡು ಬಂದ ದಿಕ್ಕಿನತ್ತ ನುಗ್ಗಿ ತಲುಪಲು ಬೇಸ್‌ಲೈನ್ ಬಳಿ ಕಾಲುಗಳು ಸ್ಪಂದಿಸಲಿಲ್ಲ. ಹಿಂದಕ್ಕೆಳೆದು ಕಟ್ಟಿದ ಗುಂಗುರು ಕೂದಲು ಮಂಡಿಯೂರಿ ಕುಸಿದ ಅವರ ಮುಖ ಮುಚ್ಚಿತು. ಎಡಗೆನ್ನೆಯ ಮೇಲಿನ ಮಚ್ಚೆಗೆ ಹೊಂದಿಕೊಂಡ ಭಾಗಗಳಲ್ಲೆಲ್ಲ ನೋವಿನ ನಿರಿಗೆ. ಮುಚ್ಚಿದ ಕಣ್ಣುಗಳ ರೆಪ್ಪೆಗಳ ಗೆರೆಗಳಲ್ಲೂ ನೋವೇ ನೋವು. ಕೆಲವೇ ನಿಮಿಷಗಳ ಮೊದಲು ಅವರ ತುಂಬು ಭುಜಗಳ ಸ್ನಾಯುಗಳ ಕಂಡಿದ್ದ ಪ್ರೇಕ್ಷಕರಿಗೂ ಸಂಕಟವಾಗುವಂಥ ದೃಶ್ಯವದು. 3–3ರಲ್ಲಿ ಸಮಬಲ ಸಾಧಿಸಿದ ಗೇಮ್ ಅಷ್ಟಕ್ಕೇ ಮುಗಿದುಹೋಯಿತು. ಮೊದಲ ಬ್ರೇಕ್ ಪಡೆದು 3–1ರಿಂದ ಸೆರೆನಾ ಮುನ್ನಡೆ ಸಾಧಿಸಿದ್ದರು. ಅಂತಹ ನೋವಿನಲ್ಲೂ ಅವರ ಮಾಗಿದ ಆಟ ಹೇಗಿತ್ತೆನ್ನುವುದಕ್ಕೆ ಅದು ಕನ್ನಡಿ ಹಿಡಿಯುತ್ತದೆ.
ಈ ವರ್ಷ ಆಸ್ಟ್ರೇಲಿಯಾ ಓಪನ್ ಸೆಮಿಫೈನಲ್‌ನಲ್ಲಿ ನವೊಮಿ ಒಸಾಕಾ ಎದುರು ಈ ಅನುಭವಿ ಆಟಗಾರ್ತಿ ಸೋಲುಂಡಿದ್ದರು. ಫ್ರೆಂಚ್ ಓಪನ್‌ನ ನಾಲ್ಕನೇ ಸುತ್ತಿನಲ್ಲಿ ಎಲೆನಾ ರಿಬಾಕಿನಾ ಸೋಲುಣಿಸಿದ್ದರು. ವಿಂಬಲ್ಡನ್‌ನಲ್ಲಿ ಈ ಬಾರಿ ಆಡುವ ಮೊದಲು ಹುಲ್ಲಿನಂಗಳದಲ್ಲಿ ಬೇರೆ ಯಾವ ಪಂದ್ಯವನ್ನೂ ಅವರು ಆಡಿರಲಿಲ್ಲ. ಮಣ್ಣಿನ ನೆಲದ ಮೇಲೆ ಆಡಿದ ನಂತರ ಹುಲ್ಲಿನ ಮೇಲೆ ಆಡಲು ಒಂದಿಷ್ಟು ಅಭ್ಯಾಸದ ಅಗತ್ಯವಿರುತ್ತದೆ ಎನ್ನುವುದು ಅನುಭವಿಗಳ ಆಂಬೋಣ. ಬಹುಶಃ ಸೆರೆನಾ ಅವರಿಗೆ ಈ ಬಾರಿ ಅಭ್ಯಾಸವಿಲ್ಲದ್ದೇ ಮುಳುವಾಯಿತೇನೋ? ಅಷ್ಟೇ ಅಲ್ಲದೆ, ಪಂದ್ಯ ಶುರುವಾಗುವ ಮೊದಲು ಅಲ್ಲಿ ಮಳೆ ಸುರಿದಿತ್ತು. ಹೀಗಾಗಿ ಮುಚ್ಚಿದ ಚಾವಣಿಯಲ್ಲಿ ಆಟ ಆಡಿಸಿದರು. ನೆಂದ ನೆಲದ ಮೇಲಿನ ಜಾರಿಕೆಗೆ ಹೊಂದುಕೊಳ್ಳುವುದೂ ಅವರಿಗೆ ತೊಡಕಾಗಿರಬೇಕು.
1995ರಲ್ಲಿ ವೃತ್ತಿಪರ ಟೆನಿಸ್ ಆಡಲು ಪ್ರಾರಂಭಿಸಿದ ಸೆರೆನಾ ಅವರಿಗೆ ನೋವು ಹೊಸತೇನೂ ಅಲ್ಲ. 2004ರಿಂದ 2006ರ ಅವಧಿಯಲ್ಲಿಯೇ ಅದನ್ನು ಅನುಭವಿಸಿದರು. 2004ರಲ್ಲಿ ಎಡ ಪಾದದಲ್ಲಿನ ನೋವಿನಿಂದಾಗಿ ಮಿಯಾಮಿ ಟೂರ್ನಿವರೆಗೆ ಆಡಲು ಅವರಿಗೆ ಸಾಧ್ಯವಾಗಿರಲಿಲ್ಲ. 2005ನೇ ವರ್ಷವನ್ನು ಅವರು ಉತ್ತಮ ಆಟದ ಮೂಲಕ ಪ್ರಾರಂಭಿಸಿದರಾದರೂ ಮೊಣಕಾಲು ನೋವು ಬಾಧಿಸಿತು. ಆಸ್ಟ್ರೇಲಿಯಾ ಓಪನ್ ಚಾಂಪಿಯನ್ ಆದಮೇಲೆ ಫ್ರೆಂಚ್ ಓಪನ್‌ನಿಂದ ಹೊರಗುಳಿಯುವುದು ಅವರಿಗೆ ಅನಿವಾರ್ಯವಾಯಿತು. ಅಗ್ರ ಹತ್ತು ಆಟಗಾರ್ತಿಯರ ಪಟ್ಟಿಯಿಂದ ಹೊರಬೀಳಲು ಕಾರಣವಾದ ನೋವು ಅದು. ಹೋಗಲಿ, ಮುಂದಿನ ವರ್ಷವಾದರೂ ಸಿಹಿ ಸಿಕ್ಕೀತೆ ಎಂದುಕೊಂಡರೆ ಹಾಗೆ ಆಗಲಿಲ್ಲ. 2006ರಲ್ಲಿ ಅವರು ನಾಲ್ಕು ಟೂರ್ನಿಗಳಲ್ಲಿಯಷ್ಟೇ ಆಡಲಾದದ್ದು. 100 ವೃತ್ತಿಪರ ಆಟಗಾರ್ತಿಯರ ಪಟ್ಟಿಯಿಂದಲೂ ಕೆಳಗೆ ಬಂದ ಅವರು ಮಾನಸಿಕವಾಗಿ ಕುಗ್ಗಿದ್ದರು.
2011ರಲ್ಲಿ ಅವರನ್ನು ಶ್ವಾಸಕೋಶದ ಜೀವಕೋಶಗಳಿಗೆ ಸರಿಯಾಗಿ ರಕ್ತಪೂರೈಕೆ ಆಗದ ಸಮಸ್ಯೆ ಕಾಡಿತು. ‘ಪಲ್ಮನರಿ ಎಂಬಾಲಿಸಂ’ ಎಂಬ ಆ ಆರೋಗ್ಯದ ಸಮಸ್ಯೆಗೆ ಚಿಕಿತ್ಸೆ ಪಡೆದುಕೊಂಡರು.
2016ರಲ್ಲಿ ಹಾಪ್‌ಮನ್ ಕಪ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಒಂದು ಸೆಟ್ ಸೋತ ನಂತರ ಮಂಡಿ ನೋವಿನಿಂದ ಚೇತರಿಸಿಕೊಳ್ಳಲಾಗದೆ ಪಂದ್ಯ ಬಿಟ್ಟುಕೊಟ್ಟರು. ಅದೇ ವರ್ಷ ರೋಜರ್ಸ್ ಕಪ್ ಪಂದ್ಯದಲ್ಲಿಯೂ ಅವರಿಗೆ ಮಂಡಿ ನೋವೇ ಮುಳುವಾಗಿತ್ತು.
ಕಳೆದ ವರ್ಷ ರೋಲ್ಯಾಂಡ್ ಗ್ಯಾರೋಸ್‌ನಲ್ಲಿ ಮೊದಲ ಸುತ್ತಿನಲ್ಲಿ ಗೆದ್ದಮೇಲೆ ಅವರು ಟೂರ್ನಿಯಿಂದ ಹೊರಗುಳಿಯಲು ನಿರ್ಧರಿಸಿದ್ದರು. ಕಾಲಿನ ಸ್ನಾಯುಗಳು ಹಿಡಿದುಕೊಂಡಂತಾಗಿದ್ದರಿಂದ ನಡೆಯಲೂ ಅವರಿಗೆ ಕಷ್ಟವಾಗಿತ್ತು. ಅದಕ್ಕೂ ಮೊದಲು ಅಮೆರಿಕ ಓಪನ್ ಸೆಮಿಫೈನಲ್‌ನಲ್ಲಿ ಸಹ ಅವರು ಗಾಯಗೊಂಡಿದ್ದರು.
ಕ್ರೀಡೆಯಲ್ಲಿ ಗಾಯ, ನೋವು ಇದ್ದಿದ್ದೇ. ಅದನ್ನು ನೀಗಿಕೊಂಡು ಮುಂದಡಿ ಇಡುವುದು ಅನಿವಾರ್ಯ. ಸೆರೆನಾ ಬದುಕಿನುದ್ದಕ್ಕೂ ಪಾಲಿಸಿಕೊಂಡು ಬಂದದ್ದು ಅದನ್ನೇ. ಅವರಿಗೆ ಹೆರಿಗೆಯಾದಾಗ ಒಂದು ಶಸ್ತ್ರಚಿಕಿತ್ಸೆ ನಡೆದಿತ್ತು. ಆಗ ಹೊಟ್ಟೆಯ ಭಾಗದಲ್ಲಿ ಕೆಲವು ತಿಂಗಳುಗಳ ಕಾಲ ಸ್ಟಂಟ್ ಹಾಕಿದ್ದರು. ಆಮೇಲೆ ಅದನ್ನು ತೆಗೆದು, ಅವರಿಗೆ ನೆನಪಿನ ಕಾಣಿಕೆಯಾಗಿ ವೈದ್ಯರು ಕೊಟ್ಟಿದ್ದರು. ಅಡುಗೆಮನೆಯ ಶೆಲ್ಫ್ ಮೇಲೆ ಅದನ್ನು ಇಟ್ಟುಕೊಂಡ ಸೆರೆನಾ, ಸ್ಫೂರ್ತಿಯ ಸಂಕೇತವೆಂದು ಪರಿಗಣಿಸಿದರು. ದಿನವೂ ಅದನ್ನು ನೋಡಿ, ತನ್ನ ಹೊಟ್ಟೆಯನ್ನು ರಕ್ಷಿಸಿದ್ದಕ್ಕೆ ಧನ್ಯವಾದ ಹೇಳಿ, ಆಮೇಲೆ ಅಭ್ಯಾಸಕ್ಕೆ ಅಣಿಯಾಗುತ್ತಿದ್ದರು. ತಮ್ಮ ಮನೆಗೆ ಹೊಂದಿಕೊಂಡ ವಿಶಾಲ ಆವರಣದ ಟೆನಿಸ್ ಕೋರ್ಟ್ ಹಾಗೂ ಅದರ ಸುತ್ತಮುತ್ತ ಉದುರಿದ ಎಲೆಗಳನ್ನು ಗುಡಿಸುವ ಮೂಲಕ ಅವರ ವಾರ್ಮ್‌ಅಪ್ ಶುರುವಾಗುತ್ತಿತ್ತು.
ಹದಿನೇಳು ವರ್ಷಗಳಿಂದ ಅವರ ದೊಡ್ಡ ದೇಹವನ್ನು ಹೊತ್ತ ಕಾಲುಗಳು ಸವಾಲುಗಳನ್ನು ಎಸೆಯುತ್ತಿವೆ. ಮತ್ತೆ ಮತ್ತೆ ನೋವು ನೀಗಿಕೊಂಡು, ಅವನ್ನು ಎಳೆದುಕೊಂಡೇ ಟೆನಿಸ್ ಅಂಗಳದಲ್ಲಿ ಸೆರೆನಾ ಗೆಲುವಿನ ನಗೆ ಬೀರಿದ್ದಾರೆ. ಈಗ ಅವರ ಅಕ್ಕ ವೀನಸ್ ವಿಲಿಯಮ್ಸ್ 41ರ ಹರೆಯದಲ್ಲಿ ವಿಂಬಲ್ಡನ್ ಆಡುವುದನ್ನು ಕಂಡಾಗ ಅವರ ಉತ್ಸಾಹಕ್ಕೆ ಮರಳಿ ಇಂಧನ ದೊರೆಯುವ ಭರವಸೆ ಮೂಡುತ್ತದೆ.
ರೋಜರ್ ಫೆಡರರ್, ಆಂಡಿ ಮುರ್ರೆ ತರಹದವರೂ ಸೆರೆನಾ ಮೊದಲ ಸುತ್ತಿನಲ್ಲೇ ನೋವು ಅನುಭವಿಸಿ ಹೊರನಡೆದಾಗ, ‘ಅಯ್ಯೋ, ದೇವರೇ...’ ಎಂದು ಉದ್ಗಾರ ಹೊರಡಿಸಿದರು. ಕಣ್ಣಲ್ಲಿ ನೀರು ತುಂಬಿಕೊಂಡು ಆಟವಾಡದೆ ಹೊರಟ ಸೆರೆನಾ ಮುಂದಿನ ಒಲಿಂಪಿಕ್ಸ್‌ನಲ್ಲೂ ಆಡುವುದಿಲ್ಲ. ಅಮೆರಿಕ ಓಪನ್‌ನಲ್ಲಿ ಹಳೆಯ ಲಯಕ್ಕೆ ಮರಳಬೇಕೆನ್ನುವುದು ಅವರ ಬಯಕೆ. ಅವರ ನೋವು ಬೇಗ ನೀಗಲಿ ಎನ್ನುವುದೇ ಟೆನಿಸ್ ಪ್ರಿಯರ ಹಾರೈಕೆ.
ವಿಂಬಲ್ಡನ್‌ನಲ್ಲಿ ಏಳು ಸಲ ಚಾಂಪಿಯನ್ ಆಗಿರುವ ಸೆರೆನಾ, ಹಾಗೆ ಪಂದ್ಯದ ನಡುವೆ ಯಾತನೆಯಿಂದ ಹೊರನಡೆದದ್ದನ್ನು ನೋಡುವುದು ಅವರ ಎದುರಾಳಿಗೂ ಕಷ್ಟ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.