ADVERTISEMENT

ಜೊಕೊವಿಚ್ ವೀಸಾ ರದ್ದು: ಹಲವು ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ– ನಡಾಲ್

ರಾಯಿಟರ್ಸ್
Published 15 ಜನವರಿ 2022, 6:00 IST
Last Updated 15 ಜನವರಿ 2022, 6:00 IST
ರಾಫೆಲ್ ನಡಾಲ್
ರಾಫೆಲ್ ನಡಾಲ್   

ಮೆಲ್ಬರ್ನ್: ಆಸ್ಟ್ರೇಲಿಯಾ ಓಪನ್‌ನಲ್ಲಿ ಆಡಲು ನೊವಾಕ್ ಜೊಕೊವಿಚ್ ಅವರ ಪ್ರಯತ್ನಕ್ಕೆ ಸಂಬಂಧಿಸಿದಂತೆ ‘ಹಲವು ಪ್ರಶ್ನೆಗಳಿಗೆ’ಇನ್ನಷ್ಟೇ ಉತ್ತರ ಸಿಗಬೇಕಾಗಿದೆ ಎಂದು ಮತ್ತೊಬ್ಬ ಖ್ಯಾತ ಟೆನಿಸ್ ತಾರೆ ರಾಫೆಲ್ ನಡಾಲ್ ಶನಿವಾರ ಹೇಳಿದ್ದಾರೆ.

ನೊವಾಕ್ ಅವರ ವೀಸಾ ಪ್ರಹಸನವು ವರ್ಷದ ಮೊದಲ ಗ್ರ್ಯಾನ್ ಸ್ಲಾಮ್ ಮೇಲೆ ಕರಿಛಾಯೆ ಮೂಡಿಸಿದೆ ಎಂದು ಕೆಲ ಆಟಗಾರರು ವಿಷಾದಿಸಿದ್ಧಾರೆ.

ಕೋವಿಡ್ ಲಸಿಕೆ ಪಡೆದ ದಾಖಲೆ ಸಲ್ಲಿಸದ ಕಾರಣ ಸಮುದಾಯಕ್ಕೆ ಅಪಾಯವಿದೆ ಎಂಬ ಕಾರಣದಿಂದ ಆಸ್ಟ್ರೇಲಿಯಾ ಸರ್ಕಾರವು ಎರಡನೇ ಬಾರಿಗೆ ಜೊಕೊವಿಚ್ ವೀಸಾ ರದ್ದುಮಾಡಿದ್ದು, ಗಡೀಪಾರು ಮಾಡುವ ಪ್ರಯತ್ನದಲ್ಲಿದೆ. ಆದರೆ, ಇದನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿರುವ ನೊವಾಕ್, ಸೋಮವಾರದಿಂದ ಮೆಲ್ಬರ್ನ್‌ನಲ್ಲಿ ಆರಂಭವಾಗಲಿರುವ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯಲ್ಲಿ ಭಾಗವಹಿಸಲು ಅಂತಿಮ ಪ್ರಯತ್ನ ನಡೆಸಿದ್ಧಾರೆ.

ADVERTISEMENT

ಕೋವಿಡ್ ಲಸಿಕೆ ಹಾಕಿಸಿಕೊಳ್ಳದೆ ಪಂದ್ಯಾವಳಿಯಲ್ಲಿ ಆಡಲು ಜೊಕೊವಿಚ್‌ಗೆ ಆಸ್ಟ್ರೇಲಿಯಾದ ಅಧಿಕಾರಿಗಳು ಈ ಮೊದಲು ಹೇಗೆ ಆರೋಗ್ಯ ವಿನಾಯಿತಿ ನೀಡಿದ್ದರು. ದೇಶಕ್ಕೆ ಆಗಮಿಸಿದ ನಂತರ ಅವರ ವೀಸಾವನ್ನು ರದ್ದುಗೊಳಿಸಿದ್ದೇಕೆ? ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ.

ಸರ್ಬಿಯಾದ ಆರೋಗ್ಯ ಸಚಿವಾಲಯದ ಅಧಿಕಾರಿಯೊಬ್ಬರು ನೊವಾಕ್ ಅವರನ್ನು ಸಮರ್ಥಿಸಿಕೊಂಡಿದ್ದು, ಕೋವಿಡ್ ಪಾಸಿಟಿವ್ ವರದಿಯ ಪರೀಕ್ಷೆಯ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದ್ದಾರೆ.

ಈ ಮಧ್ಯೆ, ಜೊಕೊವಿಕ್ ಅವರಿಗೆ ‘ಆಲ್‌ದಿ ಬೆಸ್ಟ್’ ಹೇಳಿರುವ ನಡಾಲ್, ಅವರ ಪ್ರಕರಣದ ಕುರಿತು ಹೆಚ್ಚಿನ ವಿವರಗಳು ಲಭ್ಯವಾಗಬೇಕಿದೆ ಎಂದು ಹೇಳಿದ್ಧಾರೆ.

‘ನನ್ನ ದೃಷ್ಟಿಕೋನದಲ್ಲಿ ನೊವಾಕ್ ಕುರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಹಳಷ್ಟು ಪ್ರಶ್ನೆಗಳಿಗೆ ಉತ್ತರಿಸಬೇಕಾಗಿದೆ. ಎಲ್ಲವನ್ನೂ ಶೀಘ್ರದಲ್ಲೇ ಸ್ಪಷ್ಟಪಡಿಸಿದರೆ ಒಳ್ಳೆಯದು ಎಂದು ನಾನು ಭಾವಿಸುತ್ತೇನೆ, ಹೌದು ಅಲ್ಲವೇ?’ಎಂದು ನಡಾಲ್ ಮೆಲ್ಬರ್ನ್ ಪಾರ್ಕ್‌ನಲ್ಲಿ ಸುದ್ದಿಗಾರರಿಗೆ ತಿಳಿಸಿದರು.

‘ಕಳೆದ ಎರಡು ವಾರಗಳಲ್ಲಿ ಅವರ ನಡವಳಿಕೆಯನ್ನು ನಾನು (ಮಾಡುತ್ತೇನೆ) ಒಪ್ಪದಿದ್ದರೂ ಸಹ ಅವರನ್ನು ನಿಜವಾಗಿಯೂ ಗೌರವಿಸುತ್ತೇನೆ.’ ಎಂದು ನಡಾಲ್ ಹೇಳಿದರು.

ಶೇಕಡ 90ರಷ್ಟು ವಯಸ್ಕರು ಕೋವಿಡ್ ಲಸಿಕೆ ಪಡೆದಿರುವ ಆಸ್ಟ್ರೇಲಿಯಾದಲ್ಲಿ ಲಸಿಕೆ ಪಡೆಯದೆ ಗ್ರ್ಯಾನ್ ಸ್ಲಾಮ್ ಆಡುವ ನೊವಾಕ್ ಅವರ ಪ್ರಯತ್ನದ ಬಗ್ಗೆ ಆಸ್ಟ್ರೇಲಿಯಾದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಅವರನ್ನು ಗಡೀಪಾರು ಮಾಡುವ ಸರ್ಕಾರದ ಪ್ರಯತ್ನಕ್ಕೆ ಬೆಂಬಲ ವ್ಯಕ್ತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.