ADVERTISEMENT

Federer Retirement:ಈ ದಿನ ಬರಬಾರದಿತ್ತು- ನಡಾಲ್, ಫೆಡರರ್ ಆಟಕ್ಕೆ ಮನಸೋತ ಸಚಿನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಸೆಪ್ಟೆಂಬರ್ 2022, 3:07 IST
Last Updated 16 ಸೆಪ್ಟೆಂಬರ್ 2022, 3:07 IST
ರಫೆಲ್ ನಡಾಲ್ ಮತ್ತು ರೋಜರ್ ಫೆಡರರ್
ರಫೆಲ್ ನಡಾಲ್ ಮತ್ತು ರೋಜರ್ ಫೆಡರರ್   

ಬೆಂಗಳೂರು: ಟೆನಿಸ್ ಕ್ರೀಡೆಗೆ ನಿವೃತ್ತಿ ಘೋಷಿಸಿರುವ ಸ್ವಿಜರ್ಲೆಂಡ್‌ನ ಮಹಾನ್ ಆಟಗಾರ ರೋಜರ್ ಫೆಡರರ್ ಅವರಿಗೆ ಸಮಕಾಲೀನ ಸ್ಪರ್ಧಿ ಸ್ಪೇನ್‌ನ ರಫೆಲ್ ನಡಾಲ್ ಮತ್ತು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಭಾವನಾತ್ಮಕ ಸಂದೇಶ ಹಂಚಿದ್ದಾರೆ.

41 ವರ್ಷದ ಫೆಡರರ್, ಮುಂಬರುವ ಲಂಡನ್‌ನಲ್ಲಿ ನಡೆಯಲಿರುವ ಲೇವರ್ ಕಪ್, ತಮ್ಮ ವೃತ್ತಿ ಜೀವನದ ಕಟ್ಟಕಡೆಯ ಪಂದ್ಯಾವಳಿ ಆಗಿರಲಿದೆ ಎಂದು ಗುರುವಾರ ಘೋಷಿಸಿದ್ದರು.

ರೋಜರ್ ಅವರನ್ನು ಆತ್ಮೀಯ ಸ್ನೇಹಿತ ಹಾಗೂ ಪ್ರತಿಸ್ಪರ್ಧಿ ಎಂದು ನಡಾಲ್ ಉಲ್ಲೇಖಿಸಿದ್ದಾರೆ. ಈ ದಿನ ಎಂದಿಗೂ ಬರಬಾರದಿತ್ತು. ವೈಯಕ್ತಿಯವಾಗಿ ನನಗೆ ಮತ್ತು ವಿಶ್ವದಾದ್ಯಂತ ಕ್ರೀಡೆಗೆ ಇಂದು ದುಃಖದ ದಿನವಾಗಿದೆ. ಕಳೆದ ಹಲವಾರು ವರ್ಷಗಳಿಂದ ನಿಮ್ಮೊಂದಿಗೆ ಮೈದಾನದ ಒಳಗೆ ಹಾಗೂ ಹೊರಗಡೆ ಅನೇಕ ಅದ್ಭುತ ಕ್ಷಣಗಳನ್ನು ಕಳೆದಿದ್ದೇನೆ. ಇದು ನನಗೆ ಸಂದ ಗೌರವ ಎಂದು ನಡಾಲ್ ಹೇಳಿದ್ದಾರೆ.

ADVERTISEMENT

ಭವಿಷ್ಯದಲ್ಲೂ ಜೊತೆಯಾಗಿ ಹಲವಾರು ಕ್ಷಣಗಳನ್ನು ಹಂಚಿಕೊಳ್ಳಲಿದ್ದೇವೆ ಎಂಬುದು ತಿಳಿದಿದೆ. ನಿಮ್ಮ ಪತ್ನಿ, ಮಕ್ಕಳು, ಕುಟುಂಬದೊಂದಿಗೆ ಸಂತೋಷವಾಗಿರಲು ಹಾರೈಸುತ್ತೇನೆ. ಲಂಡನ್‌ನಲ್ಲಿ ಲೇವರ್ ಕಪ್‌ನಲ್ಲಿ ನಿಮ್ಮ ಭೇಟಿಯನ್ನು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ.

ಫೆಡರರ್ ಆಟಕ್ಕೆ ಮನಸೋತ ಸಚಿನ್...
ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಫೆಡರರ್ ಆಟಕ್ಕೆ ಮನಸೋತಿದ್ದಾರೆ. ಎಂಥಹ ಕೆರಿಯರ್, ನೀವು ಆಡಿದ ಟೆನಿಸ್ ಬ್ರ್ಯಾಂಡ್‌ಗೆ ಮನ ಸೋತಿದ್ದೇನೆ. ನಿಧಾನವಾಗಿ ನಿಮ್ಮ ಟೆನಿಸ್ ಆಟ ಹವ್ಯಾಸವಾಗಿ ಬಿಟ್ಟಿತು. ಹವ್ಯಾಸಗಳು ಎಂದಿಗೂ ನಿವೃತ್ತಿಯಾಗುವುದಿಲ್ಲ. ಅವು ನಮ್ಮ ಜೀವನದ ಭಾಗವಾಗುತ್ತವೆ. ಅದ್ಭುತ ನೆನಪುಗಳನ್ನು ಹಂಚಿದ್ದಕ್ಕಾಗಿ ಧನ್ಯವಾದಗಳು ಎಂದು ಹೇಳಿದ್ದಾರೆ.

ಫೆಡರರ್ ಅವರೊಂದಿಗೆ ಹಲವಾರು ವರ್ಷಗಳಿಂದ ಸ್ನೇಹ ಬಾಂಧವ್ಯಕಾಪಾಡಿಕೊಂಡಿರುವ ಸಚಿನ್, ಈ ಹಿಂದೆ ಲಂಡನ್‌ಗೆ ತೆರಳಿ ಟೆನಿಸ್ ದಿಗ್ಗಜನ ಆಟವನ್ನು ಕಣ್ಣಾರೆ ನೋಡಿದ್ದರು.

ಫೆಡರರ್ ಜೊತೆಗೆ ನಡಾಲ್ ಉತ್ತಮ ಒಡನಾಟವನ್ನು ಕಾಯ್ದುಕೊಂಡಿದ್ದಾರೆ. ಅಲ್ಲದೆ ಆಧುನಿಕ ಟೆನಿಸ್‌ ಜಗತ್ತಿನ ಬ್ರ್ಯಾಂಡ್ ಎನಿಸಿದ್ದಾರೆ. ನಡಾಲ್ ದಾಖಲೆಯ 22 ಹಾಗೂ ಫೆಡರರ್ 20 ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗಳನ್ನು ಜಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.