ನವದೆಹಲಿ:ಭಾರತದ ರಾಮಕುಮಾರ್ ರಾಮನಾಥನ್ ಅವರು ಅಟ್ಲಾಂಟಾ ಓಪನ್ ಟೆನಿಸ್ ಟೂರ್ನಿಯ ಮೊದಲ ಸುತ್ತಿನ ಪಂದ್ಯದಲ್ಲೇ ನಿರಾಸೆ ಅನುಭವಿಸಿದ್ದಾರೆ. ಇದರೊಂದಿಗೆ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಇತ್ತೀಚೆಗೆ ನಡೆದಿದ್ದ ಹಾಲ್ ಆಫ್ ಫೇಮ್ ಓಪನ್ ಟೆನಿಸ್ ಟೂರ್ನಿಯಲ್ಲಿ ಅವರು ರನ್ನರ್ ಅಪ್ ಆಗಿದ್ದರು.
ಬುಧವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ರಾಮಕುಮಾರ್ ಅವರು 4–6, 4–6ರಿಂದ ಅಮೆರಿಕದ ಟೇಲರ್ ಫ್ರಿಟ್ಞ್ ವಿರುದ್ಧ ಸೋತರು. ಟೇಲರ್ ಅವರ ಆಕ್ರಮಣಕಾರಿ ಆಟಕ್ಕೆಭಾರತದ ಆಟಗಾರ ಪ್ರತ್ಯುತ್ತರ ನೀಡಲು ವಿಫಲವಾದರು.
ಪ್ರಜ್ಞೇಶ್ ಗುಣೇಶ್ವರನ್ ಅವರು ಸ್ಲೋವಾಕಿಯಾದ ಲುಕಾಸ್ ಲಾಕೊ ವಿರುದ್ಧ ಮಣಿದರು. ಇದರೊಂದಿಗೆ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಹೋರಾಟ ಅಂತ್ಯವಾಗಿದೆ.
ಡಬಲ್ಸ್ ವಿಭಾಗದಲ್ಲಿ ಭಾರತದ ಲಿಯಾಂಡರ್ ಪೇಸ್ ಹಾಗೂ ಅಮೆರಿಕದ ಜೇಮ್ಸ್ ಕೆರೆಟಾನಿ ಜೋಡಿಯು 5–7, 1–6ರಿಂದ ಅಮರಿಕದ ಮೈಕ್ ಬ್ಯಾನ್ ಹಾಗೂ ಫ್ರಾನ್ಸಸ್ ಟಿಯಾಫೊ ಜೋಡಿಯ ವಿರುದ್ಧ ಸೋತಿದೆ.
ಪೂರವ್ ರಾಜಾ ಹಾಗೂ ಕೆನ್ ಸ್ಕುಪ್ಸ್ಕಿ ಜೋಡಿಯು 6–4, 6–3ರಿಂದ ರಿಕಾರ್ಡಸ್ ಬೆರಾನ್ಸ್ಕಿ ಹಾಗೂ ಮಲೆಕ್ ಜಜಿರಿ ಜೋಡಿಯ ಎದುರು ಜಯ ಸಾಧಿಸಿತು. ಇದರೊಂದಿಗೆ ಈ ಜೋಡಿಯು ಕ್ವಾರ್ಟರ್‌ಫೈನಲ್ ಹಂತಕ್ಕೆ ಪ್ರವೇಶ ಪಡೆದಿದೆ.
ಮತ್ತೊಂದು ಪಂದ್ಯದಲ್ಲಿ ದಿವಿಜ್ ಶರಣ್ ಹಾಗೂ ಅರ್ಟೆಮ್ ಸಿಟಾಕ್ ಜೋಡಿಯು ರೊಮೆನ್ ಅರ್ನೆಡೊ ಹಾಗೂ ಜೆರೆಮು ಚಾರ್ಡಿ ವಿರುದ್ಧ ಆಡಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.