ಮಯಾಮಿ ಗಾರ್ಡನ್ಸ್, ಅಮೆರಿಕ: ಭಾರತದ ರೋಹನ್ ಬೋಪಣ್ಣ ಮತ್ತು ಅವರ ಆಸ್ಟ್ರೇಲಿಯನ್ ಜತೆಗಾರ ಮ್ಯಾಥ್ಯೂ ಎಬ್ಡೆನ್ ಅವರು ಇಲ್ಲಿ ನಡೆದ ಮಯಾಮಿ ಓಪನ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡರು. ಈ ಗೆಲುವಿನೊಂದಿಗೆ ಎಟಿಪಿ ಮಾಸ್ಟರ್ಸ್ 1000 ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಅತ್ಯಂತ ಹಿರಿಯ ಆಟಗಾರ ಎಂಬ ತಮ್ಮದೇ ದಾಖಲೆಯನ್ನು 44 ವರ್ಷದ ರೋಹನ್ ಬಲಪಡಿಸಿಕೊಂಡರು.
ಕನ್ನಡಿಗ ರೋಹನ್ ಮತ್ತು 36 ವರ್ಷದ ಎಬ್ಡೆನ್ ಅವರೊಂದಿಗೆ ಶನಿವಾರ ತಡರಾತ್ರಿ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ 6-7(3), 6-3, 10-6 ರಿಂದ ಕ್ರೊವೇಷ್ಯಾದ ಇವಾನ್ ದೊಡಿಗ್ ಮತ್ತು ಅಮೆರಿಕದ ಆಸ್ಟಿನ್ ಕ್ರಾಜಿಕ್ ವಿರುದ್ಧ ಗೆಲುವು ಸಾಧಿಸಿದರು. ಈ ಜೋಡಿಗೆ ಪ್ರಸಕ್ತ ವರ್ಷದಲ್ಲಿ ದೊರೆತ ಎರಡನೇ ಪ್ರಶಸ್ತಿಯಾಗಿದೆ. ಜನವರಿಯಲ್ಲಿ ಆಸ್ಟ್ರೇಲಿಯಾ ಓಪನ್ ಟೂರ್ನಿಯಲ್ಲಿ ಚಾಂಪಿಯನ್ ಆಗಿತ್ತು.
ಕಳೆದ ವರ್ಷ ಇಂಡಿಯನ್ಸ್ ವೇಲ್ಸ್‌ನಲ್ಲಿ ಪ್ರಶಸ್ತಿ ಗೆದ್ದಾಗ ಎಟಿಪಿ ಟೂರ್ನಿಯಲ್ಲಿ ಈ ಸಾಧನೆ ಮಾಡಿದ ಅತ್ಯಂತ ಹಿರಿಯ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದ ರೋಹನ್ ಅವರು, ಇದೀಗ ತಮ್ಮದೇ ದಾಖಲೆಯನ್ನು ಮುರಿದರು.
ಕೊಡಗಿನ ರೋಹನ್ ಅವರಿಗೆ ಇದು 14ನೇ ಎಟಿಪಿ ಮಾಸ್ಟರ್ಸ್ 1000 ಫೈನಲ್ ಆಗಿತ್ತು. ಒಟ್ಟಾರೆಯಾಗಿ ಅನುಭವಿ ಆಟಗಾರನ 63ನೇ ಎಟಿಪಿ ಟೂರ್ ಮಟ್ಟದ ಫೈನಲ್ ಮತ್ತು 26ನೇ ಡಬಲ್ಸ್ ಪ್ರಶಸ್ತಿಯಾಗಿದೆ. ಭಾರತದ ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್ ನಂತರ ಎಲ್ಲಾ ಒಂಬತ್ತು ಎಟಿಪಿ ಮಾಸ್ಟರ್ಸ್ 1000 ಸ್ಪರ್ಧೆಗಳಲ್ಲಿ ಫೈನಲ್ ತಲುಪಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಅಗ್ರ ಶ್ರೇಯಾಂಕದ ರೋಹನ್– ಎಬ್ಡೆನ್ ಜೋಡಿಗೆ ಆರಂಭಿಕ ಸೆಟ್‌ನಲ್ಲಿ ಎರಡನೇ ಶ್ರೇಯಾಂಕದ ಇವಾನ್– ಆಸ್ಟಿನ್ ಜೋಡಿಯಿಂದ ಪ್ರಬಲ ಸ್ಪರ್ಧೆ ಎದುರಾಯಿತು. ಸಮಬಲದ ಹೋರಾಟದಲ್ಲಿ ಟೈಬ್ರೇಕರ್ ಮೂಲಕ ಎದುರಾಳಿ ತಂಡವು ಮೇಲುಗೈ ಸಾಧಿಸಿತು. ಆದರೆ, ಎರಡನೇ ಸೆಟ್‌ನಲ್ಲಿ ತಿರುಗೇಟು ನೀಡಿದ ಭಾರತ– ಆಸ್ಟ್ರೇಲಿಯಾ ಜೋಡಿ ಸ್ಕೋರ್ ಸಮಬಲಗೊಳಿಸಿತು. ಅದೇ ಲಯವನ್ನು ಮುಂದುವರಿಸಿದ ಜೋಡಿಯು ನಿರ್ಣಾ ಯಕ ಸೆಟ್‌ನಲ್ಲೂ ಪಾರಮ್ಯ ಮೆರೆದರು.
ಈ ಗೆಲುವಿನ ಮೂಲಕ ರೋಹನ್ ಮತ್ತೆ ಎಟಿಪಿ ರ‍್ಯಾಂಕಿಂಗ್‌ನಲ್ಲಿ ಮತ್ತೆ ಅಗ್ರಸ್ಥಾನಕ್ಕೆ ಏರಿದರು. ಆಸ್ಟ್ರೇಲಿಯಾ ಓಪನ್ ಗೆದ್ದ ಬಳಿಕ ಅಗ್ರಸ್ಥಾನಕ್ಕೆ ಏರಿದ್ದ ಅವರು, ಈ ಸಾಧನೆ ಮಾಡಿದ ಹಿರಿಯ ಆಟಗಾರ ಎಂಬ ದಾಖಲೆಯನ್ನೂ ನಿರ್ಮಿಸಿದ್ದರು. ಆದರೆ, ದುಬೈ ಚಾಂಪಿಯನ್‌ಷಿಪ್‌ನಲ್ಲಿ ಕ್ವಾರ್ಟರ್‌ಫೈನಲ್‌ನಲ್ಲಿ ನಿರ್ಗಮನ ಮತ್ತು ಇಂಡಿಯನ್ ವೆಲ್ಸ್ ಮಾಸ್ಟರ್ಸ್‌ನಲ್ಲಿ ಆರಂಭಿಕ ಸುತ್ತಿನಲ್ಲಿ ಸೋತ ಬಳಿಕ ಡಬಲ್ಸ್ ರ್‍ಯಾಂಕಿಂಗ್‌ನಲ್ಲಿ ಅವರು ಎರಡನೇ ಸ್ಥಾನಕ್ಕೆ ಜಾರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.