ನವದೆಹಲಿ (ಪಿಟಿಐ): ಕನ್ನಡಿಗ ರೋಹನ್ ಬೋಪಣ್ಣ ಅವರು ಡೇವಿಸ್ ಕಪ್ ಟೆನಿಸ್‌ಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ.
ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಮೊರಕ್ಕೊ ವಿರುದ್ಧದ ಡೇವಿಸ್ ಕಪ್ ಪಂದ್ಯವು ಅವರಿಗೆ ಕೊನೆಯದ್ದಾಗಲಿದೆ. ಆದರೆ ಈ ಪಂದ್ಯವು ಬೆಂಗಳೂರಿನಲ್ಲಿ ನಡೆದರೆ ತಮಗೆ ಅವಿಸ್ಮರಣೀಯವಾಗಲಿದೆ ಎಂಬ ಇಂಗಿತವನ್ನೂ ಅವರು ವ್ಯಕ್ತಪಡಿಸಿದ್ದಾರೆ. ಆದರೆ ಈ ಟೂರ್ನಿಯನ್ನು ಉತ್ತರಪ್ರದೇಶದ ರಾಜಧಾನಿ ಲಖನೌನಲ್ಲಿ ನಡೆಸಲು ಈ ಮುಂಚೆಯೇ ನಿರ್ಧರಿಸಲಾಗಿದೆ. ಭಾರತ ಮತ್ತು ಮೊರಕ್ಕೊ ತಂಡಗಳು ವಿಶ್ವ ಗುಂಪು ಎರಡರಲ್ಲಿ ಆಡಲಿವೆ.
43 ವರ್ಷದ ಬೋಪಣ್ಣ ಇದುವರೆಗೆ ಭಾರತ ತಂಡವನ್ನು 32 ಡೇವಿಸ್ ಕಪ್ ಟೂರ್ನಿಗಳಲ್ಲಿ ಪ್ರತಿನಿಧಿಸಿದ್ದಾರೆ. 2002ರಲ್ಲಿ ಅವರು ಪದಾರ್ಪಣೆ ಮಾಡಿದ್ದರು. ಎಟಿಪಿ ಟೂರ್‌ಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.
’2002ರಿಂದ ತಂಡದಲ್ಲಿದ್ದೇನೆ. ಈ ಪಂದ್ಯವು ನನ್ನ ತವರಿನ ಅಂಗಳದಲ್ಲಿ ಆಗಬೇಕೆಂಬ ಆಸೆ ಇತ್ತು. ಅದಕ್ಕಾಗಿ ನಾನು ಎಲ್ಲ ಆಟಗಾರರೊಂದಿಗೆ ಮಾತನಾಡಿದೆ. ಅವರೆಲ್ಲರೂ ಸಮ್ಮತಿಸಿದರು. ಕೆಎಸ್‌ಎಲ್‌ಟಿಎ ಕೂಡ ಸಂತಸಗೊಂಡಿದೆ. ಆದರೆ ಫೆಡರೇಷನ್ ಬೆಂಗಳೂರಿನಲ್ಲಿ ಟೂರ್ನಿ ಆಯೋಜಿಸುವ ಬಗ್ಗೆ ತೀರ್ಮಾನಿಸಬೇಕಿದೆ. ನನ್ನ ಸ್ಥಳೀಯ ಅಭಿಮಾನಿಗಳ ಮುಂದೆ ಕೊನೆಯ ಬಾರಿ ಆಡುವ ಅವಕಾಶ ದೊರೆಯುವ ಭರವಸೆ ಇದೆ ‘ ಎಂದು ರೋಹನ್ ಹೇಳಿದ್ದಾರೆ.
ರೋಹನ್ ಇದುವರೆಗೆ ನಾಲ್ಕು ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳನ್ನು ಜಯಿಸಿದ್ದಾರೆ.
‘ರೋಹನ್ ತಮ್ಮ ತವರಿನಂಗಳದಲ್ಲಿ ಕೊನೆಯ ಪಂದ್ಯ ಆಡುವ ಇಂಗಿತ ವ್ಯಕ್ತಪಡಿಸಿರುವುದು ತಪ್ಪಲ್ಲ. ಪ್ರಾಮಾಣಿಕವಾಗಿ ಹೇಳುವುದಾದರೆ ಇದು ಒಳ್ಳೆಯದು ಕೂಡ. ಆದರೆ ಈಗಾಗಲೇ ಡೇವಿಸ್ ಕಪ್ ಪಂದ್ಯವನ್ನು ಲಖನೌಗೆ ಮಂಜೂರು ಮಾಡಲಾಗಿದೆ‘ ಎಂದು ಅಖಿಲ ಭಾರತ ಟೆನಿಸ್ ಸಂಸ್ಥೆ (ಎಐಟಿಎ) ಮಹಾಪ್ರಧಾನ ಕಾರ್ಯದರ್ಶಿ ಅನಿಲ್ ಧೂಪರ್ ಸ್ಪಷ್ಟಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.