ADVERTISEMENT

ದುಬೈ ಚಾಂಪಿಯನ್‌ಷಿಪ್: ಸೋಲಿನೊಂದಿಗೆ ಟೆನಿಸ್ ವೃತ್ತಿಜೀವನಕ್ಕೆ ಸಾನಿಯಾ ವಿದಾಯ

ಪಿಟಿಐ
Published 21 ಫೆಬ್ರುವರಿ 2023, 17:12 IST
Last Updated 21 ಫೆಬ್ರುವರಿ 2023, 17:12 IST
   

ದುಬೈ: ಮಂಗಳವಾರ ಇಲ್ಲಿ ನಡೆದ ಡಬ್ಲ್ಯುಟಿಎ ದುಬೈ ಡ್ಯೂಟಿ ಫ್ರೀ ಟೆನಿಸ್ ಚಾಂಪಿಯನ್‌ಶಿಪ್‌ನ ಮಹಿಳೆಯರ ಡಬಲ್ಸ್ ಪಂದ್ಯದ ಮೊದಲ ಸುತ್ತಿನಲ್ಲೇ ಅಮೆರಿಕದ ಮ್ಯಾಡಿಸನ್ ಕೀಸ್ ಜೊತೆ ಸೋಲನುಭವಿಸುವ ಮೂಲಕ ಭಾರತದ ಮಹಿಳಾ ಟೆನಿಸ್‌ ತಾರೆ ಸಾನಿಯಾ ಮಿರ್ಜಾ ಅವರು ತಮ್ಮ ಟೆನಿಸ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ.

ಸಾನಿಯಾ ಮತ್ತು ಕೀಸ್ ಜೋಡಿ ರಷ್ಯಾದ ವೆರ್ನೊನಿಕಾ ಕುಡೆರಮೆಟೊವಾ ಮತ್ತು ಲಿಯುಡ್ಮಿಲಾ ಸಮ್ಸೊನೊವಾ ವಿರುದ್ಧ 4–6, 0–6 ನೇರ್ ಸೆಟ್‌ಗಳಿಂದ ಸೋಲನುಭವಿಸಿತು.

25 ವರ್ಷದ ವೆರ್ನೊನಿಕಾ ಸಿಂಗಲ್ಸ್‌ನಲ್ಲಿ 11ನೇ ಶ್ರೇಯಾಂಕಿತೆಯಾಗಿದ್ದು, ಡಬಲ್ಸ್‌ನಲ್ಲಿ 5ನೇ ಸ್ಥಾನದಲ್ಲಿದ್ದಾರೆ. ಲಿಯುಡ್ಮಿಲಾ 13ನೇ ಶ್ರೇಯಾಂಕಿತೆಯಾಗಿದ್ದಾರೆ.

ADVERTISEMENT

‘ದೇಹವು ಮೊದಲಿನಂತೆ ಆಟಕ್ಕೆ ಒಗ್ಗುತ್ತಿಲ್ಲ. ಮೊದಲಿನಂತೆ ಶಕ್ತಿಯನ್ನು ಒಗ್ಗೂಡಿಸುವುದಕ್ಕೂ ಆಗುವುದಿಲ್ಲ ಹಾಗಾಗಿ, ಮುಂದಿನ ದಿನಗಳಲ್ಲಿ ನಿವೃತ್ತಿ ಪಡೆಯುವುದಾಗಿ ಜನವರಿಯಲ್ಲಿ ಸಾನಿಯಾ ಹೇಳಿದ್ದರು. ದುಬೈ ಟೆನಿಸ್ ಚಾಂಪಿಯನ್‌ಶಿಪ್‌ ಬಳಿಕ ಮತ್ತೆ ಟೆನಿಸ್ ಕಣಕ್ಕೆ ಇಳಿಯುವುದಿಲ್ಲ ಎಂದು ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದರು.

36 ವರ್ಷದ ಸಾನಿಯಾ ಮಿರ್ಜಾ ಮೊದಲ ಮಗುವಿಗೆ ಜನ್ಮ ನೀಡಿದ ನಂತರ ಸುದೀರ್ಘ ಕಾಲ ಅಂಗಣದಿಂದ ಹೊರಗೆ ಉಳಿದಿದ್ದರು. 2019ರ ಮಾರ್ಚ್‌ನಲ್ಲಿ ಮತ್ತೆ ಆಡಲು ಇಳಿದಿದ್ದರು. ಆದರೆ, ಕೆಲವೇ ತಿಂಗಳಲ್ಲಿ ಕೋವಿಡ್‌ ಕಾಡಿದ್ದರಿಂದ ಆಟವನ್ನು ಮುಂದುವರೆಸಲು ಸಾಧ್ಯವಾಗಿರಲಿಲ್ಲ.

ಆಸ್ಟ್ರೇಲಿಯನ್ ಓಪನ್ ಆಡಿದ ಬಳಿಕ ದುಬೈ ಚಾಂಪಿಯನ್‌ಶಿಪ್‌ನಲ್ಲಿ ಕೊನೆಯದಾಗಿ ಆಡಿ ಟೆನಿಸ್‌ಗೆ ವಿದಾಯ ಹೇಳುವುದಾಗಿ ಸಾನಿಯಾ ಹೇಳಿದ್ದರು.

1986ರ ನವೆಂಬರ್‌ 15ರಂದು ಮುಂಬೈನಲ್ಲಿ ಜನಿಸಿದ ಸಾನಿಯಾ 2010ರಲ್ಲಿ ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರನ್ನು ವಿವಾಹವಾಗಿದ್ದರು.

ಸಾನಿಯಾ ಸಾಧನೆ: ಆಸ್ಟ್ರೇಲಿಯನ್ ಓಪನ್, ವಿಂಬಲ್ಡನ್, ಯುಎಸ್ ಓಪನ್, ಫ್ರೆಂಚ್ ಓಪನ್ ಪ್ರಶಸ್ತಿಗಳು ಮಾತ್ರವಲ್ಲದೇ ಅನೇಕ ಅಂತರರಾಷ್ಟ್ರೀಯ ಪಂದ್ಯಗಳನ್ನು ಗೆದ್ದಿದ್ದಾರೆ.

ಭಾರತ ಸರ್ಕಾರದಿಂದ ಅರ್ಜುನ ಪ್ರಶಸ್ತಿ, ಪದ್ಮಶ್ರೀ, ರಾಜೀವ್ ಗಾಂಧಿ ಖೇಲ್ ರತ್ನ ಮತ್ತು ಪದ್ಮಭೂಷಣ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.