ಲಂಡನ್: ಫ್ರಾನ್ಸ್‌ನ ಹಾರ್ಮನಿ ಟಾನ್ ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಗೆಲುವಿನ ಓಟ ಮುಂದುವರಿಸಿದ್ದಾರೆ. ಇದೇ ಮೊದಲ ಬಾರಿ ಗ್ರ್ಯಾನ್‌ಸ್ಲಾಮ್ ಟೂರ್ನಿಯೊಂದರನಾಲ್ಕನೇ ಸುತ್ತು ತಲುಪಿದ ಶ್ರೇಯ ಗಳಿಸಿದ್ದಾರೆ.
ಮೊದಲ ಸುತ್ತಿನ ಹಣಾಹಣಿಯಲ್ಲಿ ಏಳು ಬಾರಿಯ ವಿಂಬಲ್ಡನ್ ಚಾಂಪಿಯನ್ ಅಮೆರಿಕದ ಸೆರೆನಾ ವಿಲಿಯಮ್ಸ್ ಅವರಿಗೆ ಸೋಲುಣಿಸಿಟಾನ್ ಗಮನಸೆಳೆದಿದ್ದರು.
ಮಹಿಳಾ ಸಿಂಗಲ್ಸ್ ವಿಭಾಗದ ಮೂರನೇ ಸುತ್ತಿನ ಪಂದ್ಯದಲ್ಲಿ ಟಾನ್ ಶನಿವಾರ 6–1, 6–1ರಿಂದ ಬ್ರಿಟನ್‌ನ ಕೇಟಿ ಬೌಲ್ಟರ್ ಅವರನ್ನು ಮಣಿಸಿದರು. ಇದರೊಂದಿಗೆ ಸೆರೆನಾ ಎದುರಿನ ಗೆಲುವು ‘ಆಕಸ್ಮಿಕ‘ವಲ್ಲ ಎಂದು ಸಾಬೀತು ಮಾಡಿದರು.
ಈ ಜಯದೊಂದಿಗೆ ಟಾನ್ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಟೂರ್ ಹಂತದ ಸತತ ಮೂರು ಪಂದ್ಯಗಳನ್ನು ಗೆದ್ದರು. ತವರಿನ ಪ್ರೇಕ್ಷಕರ ಅಪಾರ ಬೆಂಬಲವಿದ್ದರೂ ಬೌಲ್ಟರ್‌ಗೆ ಗೆಲುವು ದಾಖಲಿಸಲು ಸಾಧ್ಯವಾಗಲಿಲ್ಲ. ಟಾನ್ ಅವರ ವೈವಿಧ್ಯಮಯ ಆಟ ಹಾಗೂ ಅಂಗಣದ ‘ಕವರೇಜ್‘ ಕೌಶಲಗಳ ಮುಂದೆ ಅವರು ತಲೆಬಾಗಿದರು. 21 ಅನಗತ್ಯ ತಪ್ಪುಗಳು ಅವರ ಸೋಲಿಗೆ ಕಾರಣವಾದವು.
ವಿಶ್ವ ರ‍್ಯಾಂಕಿಂಗ್‌ನಲ್ಲಿ 115ನೇ ಸ್ಥಾನದಲ್ಲಿರುವ ಟಾನ್, ಮುಂದಿನ ಪಂದ್ಯದಲ್ಲಿ ಅಮೆರಿಕದ ಕೊಕೊ ಗಫ್ ಅಥವಾ ಅಮಂಡಾ ಅನಿಸಿಮೊವಾ ಅವರನ್ನು ಎದುರಿಸಲಿದ್ದಾರೆ.
ಬಾರ್ಬರಾಗೆ ಅಜ್ಲಾ ಆಘಾತ: 2021ರ ಫ್ರೆಂಚ್ ಓಪನ್ ಮಹಿಳಾ ಸಿಂಗಲ್ಸ್ ಚಾಂಪಿಯನ್ ಬಾರ್ಬರಾ ಕ್ರೇಜಿಕೊವಾ ನಿರಾಸೆ ಅನುಭವಿಸಿದರು. ಮೂರನೇ ಸುತ್ತಿನ ಹಣಾಹಣಿಯಲ್ಲಿ ಆಸ್ಟ್ರೇಲಿಯಾದ ಅಜ್ಲಾ ತೋಮ್ಲಾಜನೊವಿಚ್2-6, 6-4, 6-3ರಿಂದ ಜೆಕ್ ಗಣರಾಜ್ಯದ ಆಟಗಾರ್ತಿಗೆ ಸೋಲುಣಿಸಿ ಪ್ರೀಕ್ವಾರ್ಟರ್‌ಫೈನಲ್ ತಲುಪಿದರು.
ಮೊದಲ ಸೆಟ್‌ನಲ್ಲಿ ಸುಲಭವಾಗಿ ಗೆದ್ದ ಬಾರ್ಬರಾ ಅವರಿಗೆ ನಂತರದ ಎರಡು ಸೆಟ್‌ಗಳಲ್ಲಿ ಅಜ್ಲಾ ತಿರುಗೇಟು ನೀಡಿದರು.
ಪುರುಷರ ಸಿಂಗಲ್ಸ್ ವಿಭಾಗದ ಮೂರನೇ ಸುತ್ತಿನ ಪಂದ್ಯದಲ್ಲಿ ಚಿಲಿಯ ಕ್ರಿಸ್ಟಿಯನ್ ಗರಿನ್ 6–2, 6–3, 1–6, 6–4ರಿಂದ ಅಮೆರಿಕದ ಜೆನ್ಸನ್ ಬ್ರೂಕ್ಸ್‌ಬಿ ಅವರನ್ನು ಸೋಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.