ಅಡಿಲೇಡ್: ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್ ಶುಕ್ರವಾರ ತಮ್ಮ ಮಗಳು ಒಲಿಂಪಿಯಾ ಜೊತೆಗೆ ಇಲ್ಲಿಯ ಪ್ರಾಣಿಸಂಗ್ರಹಾಲಯಕ್ಕೆ ಭೇಟಿ ನೀಡಿದರು.
ಮುಂದಿನ ತಿಂಗಳು ನಡೆಯಲಿರುವ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯಲ್ಲಿ ಅವರು ಕಣಕ್ಕಿಳಿಯಲಿದ್ದಾರೆ. ಇದೀಗ 14 ದಿನಗಳ ಕ್ವಾರಂಟೈನ್ ಮುಗಿಸಿದರು.
’ಕ್ವಾರಂಟೈನ್ ನಂತರ ಮೊದಲಬಾರಿ ಹೊರಬಿದ್ದಿದ್ದೇವೆ. ಪ್ರಾಣಿಸಂಗ್ರಹಾಲಯಕ್ಕೆ ಭೇಟಿ ನೀಡಿದೆವು. ಮೂರು ವರ್ಷದ ಮಗಳೊಂದಿಗೆ ಇಷ್ಟು ದಿನ ಒಂದೇ ಕೋಣೆಯಲ್ಲಿ ಇದ್ದೆವು. ಮಗಳ ಜೊತೆಗೆ ಸಮಯ ಕಳೆಯುವ ಅವಕಾಶವೇನೋ ಸಿಕ್ಕಿತು. ಆದರೆ ಎರಡು ವಾರಗಳವರೆಗೆ ಒಂದೇ ಕಡೆ ಇರುವುದು ಬೇಸರ ಮೂಡಿಸುತ್ತದೆ‘ ಎಂದು ಸೆರೆನಾ ಹೇಳಿದರು.
ಈ ವೇಳೆ ನಡೆದ ಪ್ರದರ್ಶನ ಪಂದ್ಯದಲ್ಲಿ ಸೆರೆನಾ ವಿಲಿಯಮ್ಸ್ 6–2, 2–6, 10–7ರಿಂದ ಜಪಾನಿನ ನವೊಮಿ ಒಸಾಕಾ ವಿರುದ್ಧ ಜಯಿಸಿದರು.
’ನಮ್ಮನ್ನು ಇಲ್ಲಿ ಕರೆಸಿ ಗೌರವಿಸುತ್ತಿರುವುದು ಸಂತಸ ತಂದಿದೆ‘ ಎಂದು ಸೆರೆನಾ ಹೇಳಿದರು.
ಪುರುಷರ ವಿಭಾಗದ ಪ್ರದರ್ಶನ ಪಂದ್ಯದಲ್ಲಿ ರಫೆಲ್ ನಡಾಲ್ 7–5, 6–4ರಿಂದ ಅಮೆರಿಕ ಓಪನ್ ಚಾಂಪಿಯನ್ ಡಾಮ್ನಿಕ್ ಥೀಮ್ ವಿರುದ್ಧ ಗೆದ್ದರು.
ಇನ್ನೊಂದು ಪಂದ್ಯದಲ್ಲಿ ಸಿಮೊನಾ ಹಲೆಪ್ 3–6, 6–1, 10–8ರಿಂದ ಆ್ಯಷ್ ಬಾರ್ಟಿ ವಿರುದ್ಧ ಜಯಿಸಿದರು. ಬಾರ್ಟಿ 11 ತಿಂಗಳುಗಳ ನಂತರ ಪಂದ್ಯ ಆಡಿದರು.
ಫಿಸಿಯೊ ಬಳಿ ಚಿಕಿತ್ಸೆಗೆ ತೆರಳಿದ್ದ ಕಾರಣ ಪ್ರದರ್ಶನ ಪಂದ್ಯಕ್ಕೆ ತಡವಾಗಿ ಆಗಮಿಸಿದ ನೊವಾಕ್ ಜೊಕೊವಿಚ್ ಕ್ಷಮೆ ಕೋರಿದರು. ಅವರ ಅಂಗೈ ಮೇಲೆ ಬೊಬ್ಬೆಗಳಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಫೆಬ್ರುವರಿ 8ರಿಂದ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.