ADVERTISEMENT

ವಿದಾಯದತ್ತ ಟೆನಿಸ್ ಕ್ರೀಡೆಯ ದಿಗ್ಗಜ ಆಟಗಾರ್ತಿ ಸೆರೆನಾ ವಿಲಿಯಮ್ಸ್‌ ಇಂಗಿತ

23 ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳ ಒಡತಿ; ಅಮೆರಿಕ ಓಪನ್‌ ನಲ್ಲಿ ಕೊನೆಯ ಬಾರಿಗೆ ಆಡಲಿರುವ ಆಟಗಾರ್ತಿ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2022, 23:15 IST
Last Updated 9 ಆಗಸ್ಟ್ 2022, 23:15 IST
ಸೆರೆನಾ ವಿಲಿಯಮ್ಸ್  –ಎಪಿ/ಪಿಟಿಐ
ಸೆರೆನಾ ವಿಲಿಯಮ್ಸ್  –ಎಪಿ/ಪಿಟಿಐ   

ಪ್ಯಾರಿಸ್: ಟೆನಿಸ್ ಕ್ರೀಡೆಯ ದಿಗ್ಗಜ ಆಟಗಾರ್ತಿ, ಅಮೆರಿಕದ ಸೆರೆನಾ ವಿಲಿಯಮ್ಸ್‌ ವೃತ್ತಿಜೀವನಕ್ಕೆ ವಿದಾಯ ಹೇಳುವ ಇಂಗಿತ ವ್ಯಕ್ತಪಡಿಸಿದ್ದಾರೆ.

‘ಜೀವನದಲ್ಲಿ ವಿಭಿನ್ನ ದಿಕ್ಕಿನಲ್ಲಿ ಪ್ರಯಾಣ ಆರಂಭಿಸಬೇಕಾದ ಕಾಲ ಈಗ ಬಂದಿದೆ. ಮತ್ತೊಂದು ಹಾದಿಯಲ್ಲಿ ಸಾಗಲು ನಿರ್ಧರಿಸಿದ್ದೇನೆ.ನಾವು ಅತ್ಯಂತ ಪ್ರೀತಿಸುವ ಸಂಗತಿಯಿಂದ ದೂರವಾಗುವ ನಿರ್ಧಾರವು ಯಾವಾಗಲೂ ಕಠಿಣ ಹಾಗೂ ನೋವು ತರುವಂತದ್ದು. ನಾನು ಅತ್ಯಂತ ಪ್ರೀತಿಸುವುದು ಟೆನಿಸ್ ಆಟವನ್ನು. ಆದರೆ ಈಗ ದಿನಗಣನೆ ಆರಂಭವಾಗಿದೆ’ಎಂದು 40 ವರ್ಷದ ಸೆರೆನಾ ಮಂಗಳವಾರ ಇನ್ಸ್ಟಾಗ್ರಾಮ್‌ನಲ್ಲಿ ಸಂದೇಶ ಹಾಕಿದ್ದಾರೆ.

‘ತಾಯಿಯಾಗಿ ನಿರ್ವಹಿಸಬೇಕಾದ ಕರ್ತವ್ಯದ ಮೇಲೆ ನನ್ನ ಗಮನ ಕೇಂದ್ರಿಕರಿಸಬೇಕಾಗಿದೆ. ಅಂತಿಮವಾಗಿ ಜೀವನದ ನೈಜ ಹಾಗೂ ಭಿನ್ನವಾದ ಅನ್ವೇಷಣೆಯತ್ತ ಸಾಗಲಿದ್ದೇನೆ. ಆದರೆ, ಮುಂದಿನ ಇನ್ನೂ ಕೆಲವು ವಾರಗಳವರೆಗೆ ಸೆರೆನಾಗೆ ಅತ್ಯಂತ ಕೌತುಕದ ದಿನಗಳಾಗಲಿವೆ. ಈ ದಿನಗಳನ್ನು ನಾನು ಮನಪೂರ್ವಕವಾಗಿ ಆಸ್ವಾದಿಸಲಿದ್ದೇನೆ’ ಎಂದು 23 ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳ ಒಡತಿ ಬರೆದುಕೊಂಡಿದ್ದಾರೆ.

ADVERTISEMENT

2017ರಲ್ಲಿ ಗರ್ಭಿಣಿಯಾಗಿದ್ದ ಅವರು, ಆಸ್ಟ್ರೇಲಿಯಾ ಓಪನ್ ಟೂರ್ನಿಯಲ್ಲಿ ಆಡಿ ಪ್ರಶಸ್ತಿ ಜಯಿಸಿದ್ದರು. ಅದು ಅವರ 23ನೇ ಗ್ರ್ಯಾನ್‌ಸ್ಲಾಂ ಪ್ರಶಸ್ತಿಯಾಗಿತ್ತು. ಅದಾಗಿ ಕೆಲವು ದಿನಗಳ ನಂತರ ಮಗಳು ಒಲಿಂಪಿಯಾಗೆ ಜನ್ಮ ನೀಡಿದ್ದರು. ಕೆಲವು ತಿಂಗಳುಗಳ ನಂತರ ಅವರು ಟೆನಿಸ್ ಅಂಕಣಕ್ಕೆ ಮರಳಿದ್ದರು. ಆದರೆ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಜಯಿಸಲು ಸಾಧ್ಯವಾಗಿರಲಿಲ್ಲ.

ಈ ತಿಂಗಳಾಂತ್ಯದಲ್ಲಿ ನ್ಯೂಯಾರ್ಕ್‌ನಲ್ಲಿ ಆರಂಭವಾಗಲಿರುವ ಅಮೆರಿಕ ಓಪನ್‌ ಟೆನಿಸ್ ಟೂರ್ನಿಯಲ್ಲಿ ಕೊನೆಯ ಬಾರಿಗೆ ಕಣಕ್ಕಿಳಿಯಲಿದ್ದಾರೆ. ಇಲ್ಲಿ ಪ್ರಶಸ್ತಿ ಜಯಿಸಿದರೆ ಮಾರ್ಗರೆಟ್ ಕೋರ್ಟ್ (24 ಗ್ರ್ಯಾನ್‌ಸ್ಲಾಂ) ದಾಖಲೆಯನ್ನು ಸರಿಗಟ್ಟುವರು.

‘ಈ ವರ್ಷ ನಡೆದ ವಿಂಬಲ್ಡನ್‌ನಲ್ಲಿ ಜಯಿಸಲು ನನ್ನ ಸಿದ್ಧತೆ ಸಾಕಾಗಿರಲಿಲ್ಲ. ಅದು ನನ್ನ ದುರದೃಷ್ಟ. ಅಮೆರಿಕ ಓಪನ್ ಟೂರ್ನಿಗೂ ನಾನು ಸಿದ್ಧವಾಗಿದ್ದೇನೆ ಎಂಬುದು ಖಚಿತವಿಲ್ಲ. ನನ್ನ ಅಭಿಮಾನಿಗಳು ಮಾರ್ಗರೆಟ್ ದಾಖಲೆ ಸರಿಗಟ್ಟುವುದನ್ನು ಬಯಸುತ್ತಾರೆಂಬುದರ ಅರಿವು ನನಗಿದೆ. ಅಂದು ಲಂಡನ್‌ನಲ್ಲಿ (ವಿಂಬಲ್ಡನ್‌) ಆಗದಿದ್ದನ್ನು ಈಗ ನ್ಯೂಯಾರ್ಕ್‌ನಲ್ಲಿ ಮಾಡುವ ಅವಕಾಶ ಇದೆ. ಪ್ರಶಸ್ತಿ ಜಯಿಸಿದರೆ ಅದೊಂದು ಕ್ಷಣ ನನಗೆ ಅವಿಸ್ಮರಣೀಯವಾಗಲಿದೆ’ ಎಂದು ವೊಗ್ ನಿಯತಕಾಲಿಕೆಯ ಅಂಕಣದಲ್ಲಿ ಸೆರೆನಾ ಬರೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.