ನವದೆಹಲಿ: ಭಾರತದ ಸುಮಿತ್ ನಗಾಲ್ ಅವರು ಸೋಮವಾರ ಪ್ರಕಟಗೊಂಡ ಎಟಿಪಿ ಸಿಂಗಲ್ಸ್ ರ‍್ಯಾಂಕಿಂಗ್‌ನಲ್ಲಿ ಜೀವನಶ್ರೇಷ್ಠ 71ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.
26 ವರ್ಷದ ನಗಾಲ್ ಅವರು ಕಳೆದ ವಾರ 95ರಿಂದ 77ನೇ ಸ್ಥಾನಕ್ಕೆ ಜಿಗಿದಿದ್ದರು. ಭಾನುವಾರ ಪೆರುಗಿಯಾ ಚಾಲೆಂಜರ್ ಟೆನಿಸ್ ಟೂರ್ನಿಯಲ್ಲಿ ರನ್ನರ್ ಅಪ್ ಆಗಿರುವ ನಗಾಲ್ ಅವರಿಗೆ ಇದೀಗ ಮತ್ತೆ ಆರು ಸ್ಥಾನಗಳ ಬಡ್ತಿ ದೊರಕಿದೆ.
ಪ್ಯಾರಿಸ್ ಒಲಿಂಪಿಕ್ಸ್‌ನ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಅರ್ಹತೆಗಾಗಿ ಎದುರು ನೋಡುತ್ತಿರುವ ನಗಾಲ್ ಈತನಕ ಒಟ್ಟು 777 ಎಟಿಪಿ ಪಾಯಿಂಟ್ಸ್‌ಗಳನ್ನು ಗಳಿಸಿದ್ದಾರೆ.
ಉತ್ತಮ ಲಯದಲ್ಲಿರುವ ನಗಾಲ್ ಕಳೆದ ಒಂದು ತಿಂಗಳಿನಲ್ಲಿ ಅಮೋಘ ಪ್ರದರ್ಶನ ನೀಡಿದ್ದು, ಹೀಗಾಗಿ ರ‍್ಯಾಂಕಿಂಗ್‌ನಲ್ಲಿ ಗಣನೀಯವಾಗಿ ಸುಧಾರಣೆ ಕಂಡಿದೆ. ಇದು ಒಲಿಂಪಿಕ್ಸ್ ಕೋಟಾ ಪಡೆಯಲು ಅವರಿಗೆ ನೆರವಾಗಲಿದೆ.
ಆಸ್ಟ್ರೇಲಿಯಾ ಓಪನ್‌ನಲ್ಲಿ ಎರಡನೇ ಸುತ್ತು ಪ್ರವೇಶಿಸುವ ಮೂಲಕ ಐತಿಹಾಸಿಕ ಸಾಧನೆಯೊಂದಿಗೆ ವರ್ಷಾರಂಭ ಮಾಡಿದ್ದ ನಗಾಲ್, ಫ್ರೆಂಚ್ ಓಪನ್‌ನ ಮೊದಲ ಸುತ್ತಿನಲ್ಲೇ ನಿರ್ಗಮಿಸಿದ್ದರು. ಮುಂದಿನ ತಿಂಗಳು ನಡೆಯುವ ವಿಂಬಲ್ಡನ್‌ನ ಮುಖ್ಯಸುತ್ತಿನ ಸ್ಪರ್ಧೆಯಲ್ಲಿ ನಗಾಲ್ ಕಣಕ್ಕೆ ಇಳಿಯುವರು. ಅದರ ಬೆನ್ನಲ್ಲೇ ಒಲಿಂಪಿಕ್ಸ್‌ನ ಸ್ಪರ್ಧೆ ರೋಲ್ಯಾಂಡ್ ಗ್ಯಾರೋಸ್‌ನಲ್ಲಿ ನಡೆಯಲಿದೆ.
ಫೆಬ್ರುವರಿಯಲ್ಲಿ ಚೆನ್ನೈ ಓಪನ್ ಪುರುಷರ ಸಿಂಗಲ್ಸ್ ಕಿರೀಟ ಗೆದ್ದಿದ್ದ ನಗಾಲ್, ಈ ತಿಂಗಳ ಆರಂಭದಲ್ಲಿ ಜರ್ಮನಿಯಲ್ಲಿ ನಡೆದ ಹೀಲ್ ಬ್ರಾನ್ ನೆಕರ್‌ಕಪ್ ಎಟಿಪಿ ಚಾಲೆಂಜರ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.