ಮೆಲ್ಬರ್ನ್: ಭಾರತದ ಸುಮೀತ್ ನಗಾಲ್ ಅವರು, ಪ್ರತಿಷ್ಠಿತ ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್‌ಸ್ಲಾಮ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಪ್ರಧಾನ ಸುತ್ತಿಗೆ ಅರ್ಹತೆ ಪಡೆದುಕೊಂಡಿದ್ದಾರೆ.
ಸುಮೀತ್ ಅವರು ಶುಕ್ರವಾರ ನಡೆದ ಅರ್ಹತಾ ಸುತ್ತಿನ ಫೈನಲ್ ಪಂದ್ಯದಲ್ಲಿ ಸ್ಲೊವಾಕಿಯಾದ ಅಲೆಕ್ಸ್ ಮೊಲ್ಕನ್ ಅವರನ್ನು 6-4, 6-4ರ ಅಂತರದಲ್ಲಿ ಸೋಲಿಸಿದ್ದಾರೆ. ಎರಡು ತಾಸು ಮೂರು ನಿಮಿಷಗಳವರೆಗೆ ನಡೆದ ಹೋರಾಟದ ಅಂತಿಮದಲ್ಲಿ ನಗಾಲ್ ವಿಜಯಿಯಾಗಿ ಹೊರಹೊಮ್ಮಿದ್ದಾರೆ.
ಆಸ್ಟ್ರೇಲಿಯನ್ ಓಪನ್ ಪುರುಷರ ಸಿಂಗಲ್ಸ್ ಮೊದಲ ಸುತ್ತಿನಲ್ಲಿ ನಗಾಲ್ ಅವರಿಗೆ ವಿಶ್ವ ನಂ.31 ರ್‍ಯಾಂಕ್‌ನ ಕಜಕಿಸ್ತಾನದ ಬಬ್ಲಿಕ್ ಅವರ ಸವಾಲು ಎದುರಾಗಲಿದೆ.
ವಿಶ್ವ ರ್‍ಯಾಂಕಿಂಗ್‌ನಲ್ಲಿ 139ನೇ ಸ್ಥಾನದಲ್ಲಿರುವ ನಗಾಲ್, 2021ರ ಬಳಿಕ ಎರಡನೇ ಬಾರಿಗೆ ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್‌ಸ್ಲಾಮ್ ಟೂರ್ನಿಗೆ ಅರ್ಹತೆ ಪಡೆದಿದ್ದಾರೆ. 2021ರಲ್ಲಿ ಮೊದಲ ಸುತ್ತಿನಲ್ಲೇ ಸೋಲನುಭವಿಸಿದ್ದ ನಗಾಲ್, ಹೊರಬಿದ್ದಿದ್ದರು.
2019 ಹಾಗೂ 2020ರ ಅಮೆರಿಕನ್ ಓಪನ್ ಗ್ರ್ಯಾನ್‌ಸ್ಲಾಮ್ ಟೂರ್ನಿಯಲ್ಲೂ ನಗಾಲ್ ಪ್ರಧಾನ ಸುತ್ತಿಗೆ ಅರ್ಹತೆ ಪಡೆದಿದ್ದರು. 2020ರಲ್ಲಿ ಎರಡನೇ ಸುತ್ತಿಗೆ ತಲುಪಿದ್ದರು.
2019ರಲ್ಲಿ ಟೆನಿಸ್ ದಿಗ್ಗಜ ರೋಜರ್ ಫೆಡರರ್‌ಗೆ ದಿಟ್ಟ ಪೈಪೋಟಿ ಒಡ್ಡಿದ್ದರು. ಅಂದು ನಡೆದಿದ್ದ ರೋಚಕ ಪಂದ್ಯದಲ್ಲಿ 6-4, 1-6, 2-6, 4-6ರ ಅಂತರದಲ್ಲಿ ನಗಾಲ್ ಅಂತಿಮವಾಗಿ ಶರಣಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.