ಲಂಡನ್: ವಿಂಬಲ್ಡನ್ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿಯ ಪಂದ್ಯವನ್ನು ವೀಕ್ಷಿಸುವ ಮೂಲಕ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಗಮನ ಸೆಳೆದಿದ್ದಾರೆ.
ಇದೇ ಮೊದಲ ಬಾರಿಗೆ ವಿಂಬಲ್ಡನ್ ಪಂದ್ಯವನ್ನು ವೀಕ್ಷಿಸಲು ರೋಹಿತ್ ಶರ್ಮಾ ಸೆಂಟರ್ ಕೋರ್ಟ್‌ಗೆ ಆಗಮಿಸಿದ್ದಾರೆ.
ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಮ್ ಇಂಡಿಯಾ ಇತ್ತೀಚೆಗಷ್ಟೇ ಟ್ವೆಂಟಿ-20 ವಿಶ್ವಕಪ್ ಜಯಿಸಿತ್ತು. ಈಗ ಸೂಟ್ ಧರಿಸಿ ವಿಂಬಲ್ಡನ್ ಸೆಂಟರ್ ಕೋರ್ಟ್‌ಗೆ ಆಗಮಿಸಿದ ರೋಹಿತ್ ಅವರನ್ನು ಅಭಿಮಾನಿಗಳು ಚಪ್ಪಾಳೆ ತಟ್ಟುವ ಮೂಲಕ ಸ್ವಾಗತಿಸಿದರು. ಈ ವೇಳೆ ಅಭಿಮಾನಿಗಳತ್ತ ರೋಹಿತ್ ಕೈಬೀಸಿದರು.
ವಿಂಬಲ್ಡನ್ ಅಧಿಕೃತ ಪುಟದಲ್ಲಿ ರೋಹಿತ್ ಶರ್ಮಾ ಅವರಿಗೆ ಸ್ವಾಗತವನ್ನು ಕೋರಲಾಗಿದ್ದು, ಚಿತ್ರವನ್ನು ಹಂಚಿಕೊಂಡಿದೆ. ಸೆಮಿಫೈನಲ್ ಪಂದ್ಯವನ್ನು ರೋಹಿತ್ ವೀಕ್ಷಿಸಿದರು.
ಈ ವೇಳೆ ಪ್ರತಿಕ್ರಿಯಿಸಿರುವ ರೋಹಿತ್, 'ಇಲ್ಲಿನ ಅದ್ಭುತ ವಾತಾವರಣವನ್ನು ಅನುಭವಿಸಲು ಬಂದಿದ್ದೇನೆ' ಎಂದು ಹೇಳಿದ್ದಾರೆ.
'ನಾನು ಯಾವುದೇ ಆಟಗಾರನನ್ನು ಬೆಂಬಲಿಸುತ್ತಿಲ್ಲ. ಅತ್ಯುತ್ತಮ ಟೆನಿಸ್ ಆಟವನ್ನು ವೀಕ್ಷಿಸಲು ಬಂದಿದ್ದೇನೆ. ಕ್ರಿಕೆಟ್‌ನಲ್ಲಿ ಅತ್ಯುತ್ತಮ ತಂಡ ಗೆಲ್ಲಲಿ ಎಂದು ಹೇಳುತ್ತೇವೆ. ಹಾಗೆಯೇ ಟೆನಿಸ್‌ನಲ್ಲಿ ಅತ್ಯುತ್ತಮ ಆಟಗಾರ ಗೆಲ್ಲಲಿ' ಎಂದು ಹೇಳಿದ್ದಾರೆ.
ಕೆಲವು ದಿನಗಳ ಹಿಂದೆಯಷ್ಟೇ ಭಾರತದ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ವಿಂಬಲ್ಡನ್ ಪಂದ್ಯ ವೀಕ್ಷಿಸಲು ಆಗಮಿಸಿದ್ದರು. ಬಹಳ ವರ್ಷಗಳಿಂದ ಸಚಿನ್ ಇಲ್ಲಿಗೆ ಬಂದು ಪಂದ್ಯ ವೀಕ್ಷಣೆ ಮಾಡುವುದನ್ನು ರೂಢಿ ಮಾಡಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.