ADVERTISEMENT

ಐಟಿಎಫ್‌ ಓಪನ್‌ ಟೆನಿಸ್‌ ಟೂರ್ನಿ: ನಾಲ್ಕರ ಘಟ್ಟಕ್ಕೆ ತನಿಶಾ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2024, 19:26 IST
Last Updated 18 ಅಕ್ಟೋಬರ್ 2024, 19:26 IST
<div class="paragraphs"><p>ಭಾರತದ ತನಿಶಾ ಕಶ್ಯಪ್‌</p></div>

ಭಾರತದ ತನಿಶಾ ಕಶ್ಯಪ್‌

   

ಬೆಂಗಳೂರು: ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡ ಭಾರತದ ತನಿಶಾ ಕಶ್ಯಪ್ ಇಲ್ಲಿ ನಡೆಯುತ್ತಿರುವ ಎಸ್‌ಕೆಎಂಇ ಐಟಿಎಫ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದರು.

ಇಲ್ಲಿನ ಕೆಎಸ್‌ಎಲ್‌ಟಿಎ ಟೆನಿಸ್‌ ಅಂಗಣದಲ್ಲಿ ಶುಕ್ರವಾರ ನಡೆದ ಕ್ವಾರ್ಟರ್‌ ಫೈನಲ್‌ನಲ್ಲಿ 22 ವರ್ಷದ ತನಿಶಾ 6-7 (2-7), 6-1, 7-5ರಿಂದ ಅಮೆರಿಕದ ಪಾವೊಲಾ ಲೋಪೆಜ್ ಅವರನ್ನು ಹಿಮ್ಮೆಟ್ಟಿಸಿದರು.

ADVERTISEMENT

ಮೂರು ಗಂಟೆ 10 ನಿಮಿಷ ನಡೆದ ಪಂದ್ಯದ ಮೊದಲ ಸೆಟ್‌ ಅನ್ನು ತನಿಶಾ ಟೈ ಬ್ರೇಕರ್‌ನಲ್ಲಿ ಕಳೆದುಕೊಂಡರು. ಎರಡನೇ ಸೆಟ್‌ನಲ್ಲಿ ಪಾರಮ್ಯ ಮೆರೆದು, ನಿರ್ಣಾಯಕ ಸೆಟ್‌ನ ಆರಂಭದಲ್ಲಿ ಮತ್ತೆ ಹಿನ್ನಡೆ ಅನುಭವಿಸಿದರು. 2–5ರಿಂದ ಚೇತರಿಸಿಕೊಂಡು ನಾಲ್ಕರ ಘಟ್ಟಕ್ಕೆ ಮುನ್ನಡೆದರು.

ತನಿಶಾ ಮುಂದಿನ ಸುತ್ತಿನಲ್ಲಿ ನಾಲ್ಕನೇ ಶ್ರೇಯಾಂಕದ ಕ್ಯಾರೊಲನ್ ಡೆಲೌನೆ (ನ್ಯೂ ಕ್ಯಾಲೆಡೋನಿಯಾ) ಅವರನ್ನು ಎದುರಿಸಲಿದ್ದಾರೆ. ಕ್ಯಾರೊಲನ್ ಅವರು ಕ್ವಾರ್ಟರ್‌ ಫೈನಲ್‌ನಲ್ಲಿ 6-1, 6-4 ರಿಂದ ಭಾರತದ ಸೋಹಾ ಸಾದಿಕ್ ಅವರನ್ನು ಮಣಿಸಿದರು.

ಇತರ ಕ್ವಾರ್ಟರ್‌ ಫೈನಲ್‌ನಲ್ಲಿ ಭಾರತದ ಎರಡನೇ ಶ್ರೇಯಾಂಕದ ವೈಷ್ಣವಿ ಅಡ್ಕರ್ 6-0, 6-2ರಿಂದ ರಷ್ಯಾದ ಅರಿನಾ ಅರಿಫುಲ್ಲಿನಾ ಅವರನ್ನು ಸೋಲಿಸಿದರು. ಭಾರತದ ಆಟಗಾರ್ತಿಯರ ವ್ಯವಹಾರವಾಗಿದ್ದ ಮತ್ತೊಂದು ಪಂದ್ಯದಲ್ಲಿ ಆಕಾಂಕ್ಷಾ ನಿಟ್ಟುರೆ 6-3, 6-1ರಿಂದ ಅಭಯ ವೇಮುರಿ ಅವರನ್ನು ಸೋಲಿಸಿದರು.

ಸಿಂಗಲ್ಸ್‌ನಲ್ಲಿ ನಿರಾಸೆ ಮೂಡಿಸಿದ್ದ ಬೆಂಗಳೂರಿನ ಸೋಯಾ ಸಾದಿಕ್‌ ಅವರು ಆಕಾಂಕ್ಷಾ ನಿಟ್ಟುರೆ ಅವರೊಂದಿಗೆ ಡಬಲ್ಸ್‌ನಲ್ಲಿ ಸೆಮಿಫೈನಲ್‌ಗೆ ಮುನ್ನಡೆದರು. ಈ ಜೋಡಿಯು 6-2, 6-1ರಿಂದ ಸ್ವದೇಶದ ಹರ್ಷಿಣಿ ಎನ್. ನಾಗರಾಜ್ ಮತ್ತು ಸ್ನಿಗ್ಧಾ ಕಾಂತಾ ಅವರನ್ನು ಸೋಲಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.