ಲಂಡನ್: ಟೆನಿಸ್ ಲೋಕದ ದಿಗ್ಗಜ ಆಟಗಾರ ರೋಜರ್ ಫೆಡರರ್ ಅವರು ವೃತ್ತಿಜೀವನದ ಕೊನೆಯ ಟೂರ್ನಿಯಲ್ಲಿ ತಮ್ಮ ‘ಬದ್ಧ ವೈರಿ’ ಸ್ಪೇನ್‌ನ ರಫೆಲ್ ನಡಾಲ್ ಜತೆಗೂಡಿ ಆಡಿದ ಕೊನೆಯ ಪಂದ್ಯದಲ್ಲಿ ಸೋಲುಂಡು ಟೆನಿಸ್ ಜಗತ್ತಿಗೆ ನೋವಿನ ವಿದಾಯ ಹೇಳಿದ್ದಾರೆ.
ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದ 20 ಬಾರಿಯ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್, 2021ರ ವಿಂಬಲ್ಡನ್ ಕ್ವಾರ್ಟರ್ ಫೈನಲ್‌ನಿಂದ ಕಣಕ್ಕೆ ಇಳಿದಿರಲಿಲ್ಲ. ಈ ಮಧ್ಯೆ, ಕಳೆದ ವಾರ ಟೆನಿಸ್‌ಗೆ ನಿವೃತ್ತಿ ಘೋಷಿಸಿದ್ದರು.
ಲಂಡನ್ನಿನ ವಿಂಬಲ್ಡನ್ ಟೂರ್ನಿಯ ರೀತಿ ಕಿಕ್ಕಿರಿದು ಸೇರಿದ್ದ ಅಭಿಮಾನಿಗಳಿಗೆ ಫೆಡರರ್ ಸೋಲು ಹತಾಶೆ ತಂದಿತು.
ಫೆಡರರ್ ಮತ್ತು ನಡಾಲ್ ಜೋಡಿ, ಟೀಮ್ ವರ್ಲ್ಡ್‌ನ ಫ್ರಾನ್ಸಿಸ್ ಟಿಯಾಫೋ ಮತ್ತು ಜಾಕ್ ಸಾಕ್ ವಿರುದ್ಧ 4-6, 7-6 (7/2),11-9 ಸೆಟ್‌ಗಳಿಂದ ಸೋಲನುಭವಿಸಿತು.
‘ನಾನು ಈ ಸೋಲಿನ ಕಹಿ ನೆನಪನ್ನು ಹೇಗೊ ನಿಭಾಯಿಸುತ್ತೇನೆ’ ಎಂದು ಫೆಡರರ್ ಕಣ್ಣೀರು ಹಾಕಿದರು. ‘ಇದೊಂದು ಅದ್ಭುತ ದಿನವಾಗಿದೆ. ನಾನು ಸಂತೋಷವಾಗಿದ್ದೇನೆ, ದುಃಖವಿಲ್ಲ’ ಎಂದು ಅಭಿಮಾನಿಗಳಿಗೆ ತಿಳಿಸುತ್ತೇನೆ’ ಎಂದು ಹೇಳಿದರು.
‘ಇಲ್ಲಿ ಆಡಿದ್ದು ತುಂಬಾ ಸಂತೋಷವಾಯಿತು. ಬಹಳ ದಿನಗಳ ಬಳಿಕ ಮೈದಾನಕ್ಕೆ ಇಳಿದಿದ್ದೆ’ ಎಂದು ಅವರು ಹೇಳಿದ್ದಾರೆ.
‘ಈ ಸೋಲಿನಿಂದ ನನಗೆ ಯಾವುದೇ ಒತ್ತಡ ಇಲ್ಲ, ಆದರೆ, ಪಂದ್ಯವು ಅದ್ಭುತವಾಗಿತ್ತು.ರಾಫಾ ಅವರೊಂದಿಗೆ ಆಡಿದ್ದು ಖುಷಿ ತಂದಿದೆ. ಇಲ್ಲಿರುವ ಎಲ್ಲ ಟೆನಿಸ್ ದಂತಕಥೆಗಳಿಗೆ ಧನ್ಯವಾದಗಳು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.