ADVERTISEMENT

ಮಿಯಾಮಿ ಓಪನ್ ಟೆನಿಸ್ ಟೂರ್ನಿ: ನೊವೊಮಿ ಒಸಾಕ ಫೈನಲ್‌ಗೆ

ಅಮೆರಿಕದ ಜೆಸಿಕಾ ಪೆಗುಲ ಎದುರು ಗೆಲುವು ಸಾಧಿಸಿದ ಪೋಲೆಂಡ್‌ನ ಇಗಾ ಸ್ವಾಟೆಕ್

ಏಜೆನ್ಸೀಸ್
Published 1 ಏಪ್ರಿಲ್ 2022, 14:34 IST
Last Updated 1 ಏಪ್ರಿಲ್ 2022, 14:34 IST
ಫೈನಲ್ ಪಂದ್ಯದಲ್ಲಿ ನೊವೊಮಿ ಒಸಾಕ ಅವರು ಸರ್ವ್ ಮಾಡಿದ ರೀತಿ –ಎಎಫ್‌ಪಿ ಚಿತ್ರ
ಫೈನಲ್ ಪಂದ್ಯದಲ್ಲಿ ನೊವೊಮಿ ಒಸಾಕ ಅವರು ಸರ್ವ್ ಮಾಡಿದ ರೀತಿ –ಎಎಫ್‌ಪಿ ಚಿತ್ರ   

ಮಿಯಾಮಿ: ಗೆಲುವಿನ ಸಂಭ್ರಮದಲ್ಲಿ ಅಂಗಣದಲ್ಲೇ ಆನಂದಬಾಷ್ಪ ಸುರಿಸಿದ ಜಪಾನ್‌ನ ನವೊಮಿ ಒಸಾಕ ಅವರು ಮಿಯಾಮಿ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್ ಪ್ರವೇಶಿಸಿದರು.

ಗುರುವಾರ ತಡರಾತ್ರಿ ನಡೆದ ನಾಲ್ಕರ ಘಟ್ಟದ ಹಣಾಹಣಿಯಲ್ಲಿ ಒಲಿಂಪಿಕ್ ಚಾಂಪಿಯನ್ ಬೆಲಿಂದಾ ಬೆನ್ಸಿಕ್ ವಿರುದ್ಧ ನವೊಮಿ4-6, 6-3, 6-4ರಲ್ಲಿ ಜಯ ಗಳಿಸಿ ಮೊದಲ ಬಾರಿ ಮಿಯಾಮಿ ಓಪನ್‌ ಟೂರ್ನಿಯ ಪ್ರಶಸ್ತಿ ಹಂತ ತಲುಪಿದರು.

ಅಂತಿಮ ಹಣಾಹಣಿಯಲ್ಲಿ ಅವರು ಪೋಲೆಂಡ್‌ನ ಇಗಾ ಸ್ವಾಟೆಕ್ ವಿರುದ್ಧ ಸೆಣಸುವರು. ಎರಡನೇ ಶ್ರೇಯಾಂಕಿತ ಆಟಗಾರ್ತಿ ಸ್ವಾಟೆಕ್6-2 7-5ರಲ್ಲಿ ಅಮೆರಿಕದ ಜೆಸಿಕಾ ಪೆಗುಲ ಅವರನ್ನು ಸೋಲಿಸಿದರು. ಇದು ಈ ಬಾರಿ ಅವರ ಸತತ 16ನೇ ಗೆಲುವು ಆಗಿದೆ.

ADVERTISEMENT

ಮೊದಲ ಸೆಟ್‌ನಲ್ಲಿ ನಿರಾಯಾಸ ಜಯ ಸಾಧಿಸಿದ ಸ್ವಾಟೆಕ್ ಎರಡನೇ ಸೆಟ್‌ನಲ್ಲಿ ಎದುರಾಳಿಯಿಂದ ಭಾರಿ ಪೈಪೋಟಿ ಎದುರಿಸಿದರು. 5–4ರ ಮುನ್ನಡೆಯಲ್ಲಿದ್ದಾಗ ಜೆಸಿಕಾ ತಿರುಗೇಟು ನೀಡಿದರು. ಹೀಗಾಗಿ ಪಂದ್ಯ ರೋಚಕವಾಯಿತು. ಆದರೆ ಪಟ್ಟು ಬಿಡದ ಸ್ವಾಟೆಕ್ ಗೆಲುವು ತಮ್ಮದಾಗಿಸಿಕೊಂಡರು. 21 ವರ್ಷದ ಸ್ವಾಟೆಕ್ ಅವರು2016ರ ನಂತರ ಇಂಡಿಯನ್ ವೆಲ್ಸ್ ಮತ್ತು ಮಿಯಾಮಿ ಓಪನ್‌ನಲ್ಲಿ ಸತತ ಎರಡು ಬಾರಿ ಫೈನಲ್ ಪ್ರವೇಶಿಸಿದ ಮೊದಲ ಆಟಗಾರ್ತಿ ಎನಿಸಿಕೊಂಡರು.

ನಾಲ್ಕು ಗ್ರ್ಯಾನ್‌ ಸ್ಲಾಂ ಪ್ರಶಸ್ತಿಗಳ ಒಡತಿ ಒಸಾಕ 18 ಏಸ್‌ಗಳನ್ನು ಸಿಡಿಸಿ ಬೆನ್ಸಿಕ್‌ಗೆ ಆಘಾತ ನೀಡಿದರು. ಟೂರ್ನಿಯಲ್ಲಿ ಅವರು ಈವರೆಗೆ ಒಂದೇ ಒಂದು ಸೆಟ್ ಕಳೆದುಕೊಂಡಿಲ್ಲ. ಸೆಮಿಫೈನಲ್‌ನ ಮೊದಲ ಸೆಟ್‌ನಲ್ಲಿ ಎರಡು ಬಾರಿ ಮಾತ್ರ ಮೊದಲ ಸರ್ವ್ ಪಾಯಿಂಟ್‌ಗಳನ್ನು ಬಿಟ್ಟುಕೊಟ್ಟ ಅವರು ಉಳಿದಂತೆ ಪಂದ್ಯದುದ್ದಕ್ಕೂ ಗಮನಾರ್ಹ ಆಟವಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.