ಮೆಲ್ಬರ್ನ್ (ಎಎಫ್‌ಪಿ/ರಾಯಿಟರ್ಸ್): ಪ್ರಮುಖ ಆಟಗಾರರ ಗಾಯದ ಸಮಸ್ಯೆಯ ನಡುವೆ ಮತ್ತು ಹಿರಿಯ ಆಟಗಾರರ ನಿವೃತ್ತಿ ಸೂಚನೆಯ ಬೆನ್ನಲ್ಲೇ ವರ್ಷದ ಮೊದಲ ಗ್ರ್ಯಾನ್‌ಸ್ಲ್ಯಾಮ್ ಟೂರ್ನಿಯಾದ ಆಸ್ಟ್ರೇಲಿಯಾ ಓಪನ್ ಸೋಮವಾರ ಆರಂಭವಾಗಲಿದೆ.
ಬ್ರಿಟನ್‌ನ ಆ್ಯಂಡಿ ಮರ‍್ರೆ ಮತ್ತು ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್ ಈಗಾಗಲೇ ಇದು ತಮ್ಮ ವೃತ್ತಿ ಜೀವನದ ಕೊನೆಯ ಟೂರ್ನಿ ಆಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ರಫೆಲ್ ನಡಾಲ್ ಗಾಯದ ಸಮಸ್ಯೆಯಿಂದ ಗುಣಮುಖರಾಗಿ ಮರಳಿದ್ದಾರೆ. ಟೂರ್ನಿಗೆ ಸಂಪೂರ್ಣ ಸಜ್ಜಾಗಿದ್ದೇನೆ ಎಂದು ನಡಾಲ್ ಶನಿವಾರ ಹೇಳಿದ್ದಾರೆ. ಆದರೂ ಅವರ ಫಿಟ್‌ನೆಸ್ ಪ್ರಮಾಣ ಪಂದ್ಯಗಳ ಸಂದರ್ಭದಲ್ಲೇ ಸಾಬೀತಾಗಬೇಕಷ್ಟೆ.
ತಾಯಿಯಾದ ನಂತರ ಅಮೆರಿಕದ ಸೆರೆನಾ ವಿಲಿಯಮ್ಸ್ ಅವರಿಗೆ ಇದು ಪ್ರಮುಖ ಟೂರ್ನಿಯಾಗಿದ್ದು ಟೆನಿಸ್ ಅಂಗಣದಲ್ಲಿ ಹಳೆಯ ಚಾಪನ್ನು ಮುಂದುವರಿಸಲು ಅವರು ಪ್ರಯತ್ನಿಸಲಿದ್ದಾರೆ.
ಆ್ಯಂಡಿ ಮರ‍್ರೆ ಮೊದಲ ಸುತ್ತಿನಲ್ಲಿ ಸ್ಪೇನ್‌ನ ರಾಬರ್ಟೊ ಬೌಟಿಸ್ಟ ಅವರನ್ನು ಎದುರಿಸಲಿದ್ದಾರೆ. ಈ ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ. ಮೂರು ಗ್ರ್ಯಾನ್‌ಸ್ಲ್ಯಾಮ್ ಪ್ರಶಸ್ತಿ ಗೆದ್ದಿರುವ ಮರ‍್ರೆ ಅವರ ಪ್ರಶಸ್ತಿ ಕನಸಿಗೆ ರೆಕ್ಕೆ ಮೂಡಬೇಕಾದರೆ ಈ ಪಂದ್ಯದಲ್ಲಿ ಗೆಲ್ಲಲೇಬೇಕು.
‘ಮರ‍್ರೆ ಅವರ ಸಾಮರ್ಥ್ಯವನ್ನು ನಾನು ಬಲ್ಲೆ. ಅವರು ಸಮರ್ಥ ಆಟಗಾರ ಎಂಬುದರ ಅರಿವೂ ಇದೆ. ಆದರೆ ನನಗೆ ಮೊದಲ ಪಂದ್ಯದಲ್ಲಿ ಯಾವುದೇ ಒತ್ತಡ ಇಲ್ಲ’ ಎಂದು ಬೌಟಿಸ್ಟ ಹೇಳಿದರು.
ಜೊಕೊವಿಚ್, ನಡಾಲ್, ಫೆಡರರ್ ಮೇಲೆ ಕಣ್ಣು: ಸರ್ಬಿಯಾದ ನೊವಾಕ್ ಜೊಕೊವಿಚ್, ಸ್ಪೇನ್‌ನ ರಫೆಲ್ ನಡಾಲ್ ಮತ್ತು ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್ ಮೇಲೆ ಈಗ ಎಲ್ಲರ ಕಣ್ಣು ನೆಟ್ಟಿದೆ. ರ‍್ಯಾಂಕಿಂಗ್‌ನಲ್ಲಿ ಒಂದೇ ಸ್ಥಾನದಲ್ಲಿರುವ ಜೊಕೊವಿಚ್ ಕಳೆದ ವರ್ಷ ಅತ್ಯುತ್ತಮ ಫಾರ್ಮ್‌ನಲ್ಲಿದ್ದರು. ವಿಂಬಲ್ಡನ್ ಮತ್ತು ಅಮೆರಿಕ ಓಪನ್ ಟೂರ್ನಿಯ ಪ್ರಶಸ್ತಿ ಗೆದ್ದಿರುವ ಅವರು ಹ್ಯಾಟ್ರಿಕ್ ಸಾಧನೆಯ ಹಾದಿಯಲ್ಲಿದ್ದಾರೆ.
ಹಿಮ್ಮಡಿ ನೋವಿನಿಂದಾಗಿ ಕಳೆದ ವರ್ಷ ತೀವ್ರ ಹಿನ್ನಡೆ ಅನುಭವಿಸಿದ ರಫೆಲ್‌ಗೆ ಆಸ್ಟ್ರೇಲಿಯಾ ಓಪನ್ ಹೊಸ ಸವಾಲು. ಹಾಲಿ ಚಾಂಪಿಯನ್ ಫೆಡರರ್ ಕಳೆದ ವರ್ಷದ ಕೊನೆಯ ಅವಧಿಯಲ್ಲಿ ನಿರಾಸೆ ಕಂಡಿದ್ದರು. ಆದ್ದರಿಂದ ಅವರಿಗೂ ಈ ಟೂರ್ನಿ ಸವಾಲಿನದ್ದಾಗಲಿದೆ. ಕೀ ನಿಶೀಕೋರಿ ಮತ್ತು ಕೆವಿನ್ ಆ್ಯಂಡರ್ಸನ್ ಈ ಬಾರಿಯೂ ಉತ್ತಮ ಸಾಮರ್ಥ್ಯ ಮೆರೆಯುವ ಭರವಸೆಯಲ್ಲಿದ್ದಾರೆ.
ಸೆರೆನಾ, ಹಲೆಪ್, ಕೆರ್ಬರ್‌ಗೆ ಮಹತ್ವದ ಟೂರ್ನಿ: ಮಹಿಳೆಯರ ವಿಭಾಗದಲ್ಲಿ ಸೆರೆನಾ ವಿಲಿಯಮ್ಸ್, ಸಿಮೊನಾ ಹಲೆಪ್ ಮತ್ತು ಏಂಜಲಿಕ್ ಕೆರ್ಬರ್, ಕರೊಲಿನಾ ವೋಜ್ನಿಯಾಕಿ ಮುಂತಾದವರು ಗಮನ ಸೆಳೆಯಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.