ADVERTISEMENT

ತಾರತಮ್ಯ ನೀತಿ ಖಂಡಿಸಿ ಅಭಿಯಾನ: ಟೆನಿಸ್‌ ದಿಗ್ಗಜರ ಬೆಂಬಲ

ಕಪ್ಪು ಸಮುದಾಯದ ಪರ ಮಿಡಿದ ಅಮೆರಿಕ ಟೆನಿಸ್‌ ಸಂಸ್ಥೆ

ರಾಯಿಟರ್ಸ್
Published 3 ಜೂನ್ 2020, 19:30 IST
Last Updated 3 ಜೂನ್ 2020, 19:30 IST
ರಫೆಲ್‌ ನಡಾಲ್‌, ರೋಜರ್‌ ಫೆಡರರ್‌, ನೊವಾಕ್‌ ಜೊಕೊವಿಚ್‌
ರಫೆಲ್‌ ನಡಾಲ್‌, ರೋಜರ್‌ ಫೆಡರರ್‌, ನೊವಾಕ್‌ ಜೊಕೊವಿಚ್‌    

ಲಂಡನ್‌: ಜನಾಂಗೀಯ ತಾರತಮ್ಯ ಖಂಡಿಸಲು ಆರಂಭವಾಗಿರುವ #ಬ್ಲ್ಯಾಕ್‌ಔಟ್‌ ಟ್ಯೂಸ್‌ಡೆ ಅಭಿಯಾನಕ್ಕೆ ‘ಟೆನಿಸ್‌ನ ಬಿಗ್‌–3’ಗಳಾದ ರೋಜರ್‌ ಫೆಡರರ್‌, ರಫೆಲ್‌ ನಡಾಲ್‌, ನೊವಾಕ್‌ ಜೊಕೊವಿಚ್‌ ಮತ್ತು ಇತರ ಆಟಗಾರರು ಬೆಂಬಲ ಸೂಚಿಸಿದ್ದಾರೆ.

ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್‌ ಅವರನ್ನು ಕಸ್ಟಡಿಯಲ್ಲಿರುವಾಗ ಬಿಳಿಯ ಪೊಲೀಸನೊಬ್ಬ ಅಮಾನುಷ ರೀತಿ ಸಾವಿಗೀಡಾಗುವಂತೆ ಮಾಡಿದ ಪ್ರಕರಣಕ್ಕೆ ಕ್ರೀಡಾಪಟುಗಳ ಖಂಡನೆ ಮುಂದುವರಿದಿದೆ. ಮೇ 25ರಂದು ಮಿನಿಯಾಪೊಲಿಸ್‌ನಲ್ಲಿ ಈ ಪ್ರಕರಣ ನಡೆದಿತ್ತು.

ವಿಶ್ವದ ಅಗ್ರಮಾನ್ಯ ಆಟಗಾರ ಜೊಕೊವಿಚ್‌ ಅವರು ಕಪ್ಪು ಸ್ಕ್ರೀನ್‌ಶಾಟ್‌ಗಳನ್ನು ಟ್ವಿಟರ್‌ ಮತ್ತು ಇನ್‌ಸ್ಟಾಗ್ರಾಮ್‌ ಖಾತೆಗಳಲ್ಲಿ ಹಾಕಿದ್ದು, ‘ಬ್ಲ್ಯಾಕ್‌ ಲೈವ್ಸ್‌ ಮ್ಯಾಟರ್‌’ ಎಂಬ ಸಂದೇಶವನ್ನು ಪೋಸ್ಟ್‌ ಮಾಡಿದ್ದಾರೆ. ಫೆಡರರ್‌ ಮತ್ತು ನಡಾಲ್‌ ಕೂಡ ಅವರ ಜೊತೆ ಸೇರಿದ್ದಾರೆ.

ADVERTISEMENT

ಗ್ರ್ಯಾಂಡ್‌ಸ್ಲಾಮ್‌ ವಿಜೇತರಾದ ಮರಿಯಾ ಶರಪೋವಾ, ಪೆಟ್ರಾ ಕ್ವಿಟೊವಾ ಮತ್ತು ಸ್ಟಾನ್‌ ವಾವ್ರಿಂಕಾ,ಪ್ರತಿಭಾನ್ವಿತ ಆಫ್ರೊ–ಅಮೆರಿಕನ್‌ ಆಟಗಾರ್ತಿ ಕೊಕೊ ಗಫ್‌ ಅವರೂ ಈ ಅಭಿಯಾನಕ್ಕೆ ಬೆಂಬಲ ಘೋಷಿಸಿದ್ದಾರೆ.

ಅಮೆರಿಕದ ಟೆನಿಸ್‌ ಸಂಸ್ಥೆ (ಯುಎಸ್‌ಟಿಎ) ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಕಪ್ಪು ಸ್ಕ್ರೀನ್‌ಶಾಟ್‌ ಪೋಸ್ಟ್‌ ಮಾಡಿದೆ.

‘ಅಮೆರಿಕದಲ್ಲಿ ಕಪ್ಪು ವರ್ಣೀಯರು ಅನುಭವಿಸುತ್ತಿರುವ ಯಾತನೆಯಿಂದ ಅತೀವ ನಿರಾಸೆ, ಗಾಸಿಯಾಗಿದೆ’ ಎಂದು ಸಂಸ್ಥೆ ಹೇಳಿದೆ.

‘ಆಫ್ರೊ–ಅಮೆರಿಕನ್‌ ಸಮುದಾಯ ನಮ್ಮ ಟೆನಿಸ್‌ ಕುಟುಂಬದ ಅವಿಭಾಜ್ಯ ಅಂಗ. ಅವರ ವಿರುದ್ಧ ಭೇದ, ಅನ್ಯಾಯ ಸಹಿಸುವುದಿಲ್ಲ’ ಎಂದು ಯುಎಸ್‌ಟಿಎ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.