ADVERTISEMENT

ವಿಂಬಲ್ಡನ್‌ ಟೆನಿಸ್‌: ಹಲೆಪ್‌ ಮುಡಿಗೆ ಕಿರೀಟ

ಸೆರೆನಾ 24ನೇ ಗ್ರ್ಯಾನ್‌ಸ್ಲಾಮ್‌ ಕನಸು ಭಗ್ನ

ರಾಯಿಟರ್ಸ್
Published 13 ಜುಲೈ 2019, 20:02 IST
Last Updated 13 ಜುಲೈ 2019, 20:02 IST
ಪ್ರಶಸ್ತಿಯೊಂದಿಗೆ ಸಿಮೊನಾ ಹಲೆಪ್‌–ರಾಯಿಟರ್ಸ್ ಚಿತ್ರ
ಪ್ರಶಸ್ತಿಯೊಂದಿಗೆ ಸಿಮೊನಾ ಹಲೆಪ್‌–ರಾಯಿಟರ್ಸ್ ಚಿತ್ರ   

ಲಂಡನ್‌: ರುಮೇನಿಯಾದ ಸಿಮೊನಾ ಹಲೆಪ್‌ ಅವರು ಶನಿವಾರ ವಿಂಬಲ್ಡನ್‌ ಟೂರ್ನಿಯ ಮಹಿಳಾ ಸಿಂಗಲ್ಸ್ ನೂತನ ಚಾಂಪಿಯನ್‌ ಆಗಿ ಹೊರಹೊಮ್ಮಿದರು.

ಫೈನಲ್‌ ಪಂದ್ಯದಲ್ಲಿ ಅಮೆರಿಕಾ ಆಟಗಾರ್ತಿ ಏಳು ಬಾರಿಯ ಚಾಂಪಿಯನ್‌ ಸೆರೆನಾ ವಿಲಿಯಮ್ಸ್ ಅವರನ್ನು 6–2, 6–2 ಸೆಟ್‌ಗಳಿಂದ ಹಲೆಪ್‌ ಸುಲಭವಾಗಿ ಸದೆಬಡಿದರು. ಕೇವಲ 56 ನಿಮಿಷಗಳಲ್ಲಿ ಪಂದ್ಯ ಮುಕ್ತಾಯವಾಯಿತು. ವಿಂಬಲ್ಡನ್‌ ಪ್ರಶಸ್ತಿ ಗೆದ್ದ ರುಮೇನಿಯಾದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಯೂ ಹಲೆಪ್‌ ಪಾಲಾಯಿತು.

ಹೋದ ವರ್ಷ ಫ್ರೆಂಚ್‌ ಓಪನ್‌ನಲ್ಲಿ ಪ್ರಶಸ್ತಿ ಹಲೆಪ್‌ ತಮ್ಮದಾಗಿಸಿಕೊಂಡಿದ್ದರು. ಇದು ಅವರು ಗೆದ್ದಿರುವ ಎರಡನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಯಾಗಿದೆ. ವಿಂಬಲ್ಡನ್‌ನಲ್ಲಿ ಮೊದಲ ಪ್ರಶಸ್ತಿ. ಪಂದ್ಯದಲ್ಲಿ ಸೆರೆನಾ ಎಸಗಿದ ಹಲವು ತಪ್ಪುಗಳು ಹಲೆಪ್‌ಗೆ ವರವಾಗಿ ಪರಿಣಮಿಸಿದವು.

ADVERTISEMENT

ಮೊದಲ ಗೇಮ್‌ನಲ್ಲಿ ಸೆರೆನಾ ಅವರ ಸರ್ವ್‌ ಮರಿದ ಹಲೆಪ್‌ 4–0 ಮುನ್ನಡೆ ಕಂಡರು. ಅದೇ ಆಟವನ್ನು ಮುಂದುವರಿಸಿದ ಹಲೆಪ್‌ ಅವರ ಎದುರು ಸೆರೆನಾ ಮಂಕಾದಂತೆ ಕಂಡರು. ಎರಡನೇ ಸೆಟ್‌ನಲ್ಲಿ ಅಮೆರಿಕಾ ಆಟಗಾರ್ತಿಯು ಲಯ ಕಂಡುಕೊಂಡಂತೆ ತೋರಿದರೂ ಧೃತಿಗೆಡದ ವಿಜೇತ ಆಟಗಾರ್ತಿ ಪಂದ್ಯವನ್ನು ಬಿಟ್ಟುಕೊಡಲಿಲ್ಲ.

ಹೋದ ವರ್ಷ ನಡೆದ ಫೈನಲ್‌ ಪಂದ್ಯದಲ್ಲಿ ಸೆರೆನಾ ಅವರು ಅಂಜೆಲಿಕ್‌ ಕೆರ್ಬರ್‌ ವಿರುದ್ಧ ಸೋತಿದ್ದರು. ಸೆರೆನಾ ವಿಲಿಯಮ್ಸ್ ಅವರು ಟ್ರೋಫಿ ಗೆದ್ದಿದ್ದರೆ ಮಾರ್ಗರೇಟ್‌ ಕೋರ್ಟ್‌ ಅವರ 24 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ದಾಖಲೆ ಸರಿಗಟ್ಟುವ ಅವಕಾಶವಿತ್ತು.

12ನೇ ಬಾರಿ ಫೈನಲ್‌ಗೆ‌ಫೆಡರರ್‌: ಶುಕ್ರವಾರ ತಡರಾತ್ರಿ ನಡೆದ ಪುರುಷರ ಸಿಂಗಲ್ಸ್ ಸೆಮಿಫೈನಲ್‌ ಪಂದ್ಯದಲ್ಲಿ ಟೆನಿಸ್‌ ದಿಗ್ಗಜ ಸ್ವಿಟ್ಜರ್ಲೆಂಡ್‌ನ ರೋಜರ್‌ ಫೆಡರರ್‌, ರಫೆಲ್‌ ನಡಾಲ್‌ ಅವರನ್ನು ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟರು. ಉಭಯ ಆಟಗಾರರು ಮದಗಜಗಳಂತೆ ಕಾದಾಡಿದರು. 37 ವರ್ಷದ ಆಟಗಾರ ಫೆಡರರ್‌ 7–6, 1–6, 6–3, 6–4 ಸೆಟ್‌ಗಳಿಂದ ಜಯಿಸಿದರು. ಭಾನುವಾರ ನಡೆಯುವ ಫೈನಲ್‌ನಲ್ಲಿ ಜೊಕೊವಿಚ್‌ರನ್ನು ಫೆಡರರ್‌ ಎದುರಿಸುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.