ಇಸ್ಲಾಮಾಬಾದ್: ಸಿಂಗಲ್ಸ್‌ನಲ್ಲಿ ಅಗ್ರ ಆಟಗಾರರಿಲ್ಲದೇ ಭಾರತ ಟೆನಿಸ್ ತಂಡ ಪಾಕಿಸ್ತಾನಕ್ಕೆ ಬಂದಿದ್ದರೂ, ಶನಿವಾರ ಇಸ್ಲಾಮಾಬಾದಿ ನಲ್ಲಿ ನಡೆಯುವ ಡೇವಿಸ್ ಕಪ್ ವಿಶ್ವ ಗುಂಪಿನ ಪ್ಲೇ ಆಫ್ ಪಂದ್ಯದಲ್ಲಿ ಗೆಲ್ಲುವ ನೆಚ್ಚಿನ ತಂಡವೆನಿಸಿದೆ. ಭದ್ರತೆಯ ಕಾರಣದಿಂದ ‘ಇಸ್ಲಾಮಾಬಾದ್ ಟೆನಿಸ್ ಕೋರ್ಟ್ ಸಂಕೀರ್ಣದಲ್ಲಿ ಪ್ರೇಕ್ಷಕರ ಸಂಖ್ಯೆಗೆ ನಿರ್ಬಂಧ ಹೇರಲಾಗಿದೆ.
ಪಂದ್ಯ ವೀಕ್ಷಣೆಗೆ ಒಟ್ಟು 500 ಮಂದಿ ಅತಿಥಿಗಳು ಮತ್ತು ಅಭಿಮಾನಿ ಗಳಿಗಷ್ಟೇ ಅವಕಾಶ ಕಲ್ಪಿಸಲಾಗಿದೆ. ಭಾರತ ಟೆನಿಸ್ ತಂಡ 60 ವರ್ಷಗಳ ನಂತರ ಪಾಕಿಸ್ತಾನಕ್ಕೆ ಬಂದಿಳಿದಿದೆ. ಈ ಹಿಂದೆ ಇವೆರಡು ತಂಡಗಳು ಏಳು ಬಾರಿ ಮುಖಾಮುಖಿ ಆಗಿದ್ದು ಪ್ರತಿ ಸಲ ಭಾರತ ಜಯಗಳಿಸಿದೆ. ಈ ಬಾರಿಯೂ ಇದೇ ಫಲಿತಾಂಶ ಮುಂದುವರಿಯುವ ಸಾಧ್ಯತೆಯಿದೆ.
ಈ ಸಲ ಆತಿಥೇಯರು ಪಂದ್ಯಕ್ಕೆ ಹುಲ್ಲಿನಂಕಣವನ್ನು ಆಯ್ಕೆ ಮಾಡಿ ಕೊಂಡಿದ್ದು ತಮ್ಮ ಅನುಭವಿ ಆಟಗಾರ ರಾದ ಐಸಾಮ್–ಉಲ್–ಹಕ್ ಖುರೇಷಿ ಮತ್ತು ಅಖೀಲ್ ಖಾನ್ ಅವರ ಮೂಲಕ ಪೈಪೋಟಿಯೊಡ್ಡುವ ಸೂಚನೆ ನೀಡಿದ್ದಾರೆ. ಈ ಅಂಕಣದಲ್ಲಿ ಪಾಕ್ ಆಟಗಾರರು ಉತ್ತಮ ಹೋರಾಟದ
ಸಾಮರ್ಥ್ಯ ಹೊಂದಿದ್ದಾರೆ. ಇಸ್ಲಾಮಾಬಾ ದಿನ ಕೋರ್ಟ್‌ಗಳಲ್ಲಿ ಚೆಂಡು ವೇಗವಾಗಿ ಮತ್ತು ಕೆಳ ಮಟ್ಟದಲ್ಲಿ ಬೌನ್ಸ್ ಆಗುತ್ತದೆ.
ಈಗಿನ ತಂಡದಲ್ಲಿರುವ ಪ್ರಮುಖ ಆಟಗಾರ ರಾಮಕುಮಾರ್ ರಾಮನಾಥನ್ ಅವರ ನಂತರ ಮೊದಲ ದಿನ ಎರಡನೇ ಸಿಂಗಲ್ಸ್ ಆಟಗಾರರಾಗಿ ಡಬಲ್ಸ್ ಪರಿಣತ ಎನ್.ಶ್ರೀರಾಮ್ ಬಾಲಾಜಿ ಅವರನ್ನು ಕಣಕ್ಕಿಳಿಲು ನಿರ್ಧರಿಸಿರುವುದು ಸಮಂಜಸ ಕ್ರಮವೆನಿಸಿದೆ. ನಿಕಿ ಪೂಣಚ್ಚ ಅವರನ್ನು ಆಡಿಸುವ ಅವಕಾಶ ಮುಂದಿದ್ದರೂ, ಅಂಕಣದ ‘ಸ್ವಭಾವ’ ನೋಡಿ ಕಡಿಮೆ ಎತ್ತರ ಹೊಂದಿರುವ ಬಾಲಾಜಿ ಅವರನ್ನು ಆಯ್ಕೆ ಮಾಡಲಾಗಿದೆ. ಯುವ ಪೀಳಿಗೆಯಲ್ಲಿ ಉತ್ತಮ ಸರ್ವ್ ಮತ್ತು ವಾಲಿ ಆಟಗಾರ ಎನಿಸಿರುವ ರಾಮಕುಮಾರ್, ಗ್ರಾಸ್ ಕೋರ್ಟ್‌ನಲ್ಲಿ ಪ್ರಬಲ ಆಟಗಾರ ಎನಿಸಿದ್ದಾರೆ. ನ್ಯೂಪೋರ್ಟ್‌ನಲ್ಲಿ (ಎಟಿಪಿ 250 ಟೂರ್ನಿಯ ಫೈನಲ್ ತಲುಪಿದ್ದು) ಅವರ ಜೀವನ ಶ್ರೇಷ್ಠ ಸಾಧನೆಯಾಗಿದ್ದು ಈ ಟೂರ್ನಿ ಹಲ್ಲಿನಂಕಣದಲ್ಲಿ ನಡೆದಿತ್ತು.
ರಾಮಕುಮಾರ್ ಮೊದಲ ಪಂದ್ಯದಲ್ಲಿ 43 ವರ್ಷದ ಐಸಾಮ್ ಅವರನ್ನು ಎದುರಿಸಲಿದ್ದಾರೆ. ‘ನೀವೆಲ್ಲ ನನ್ನ ವಯಸ್ಸು ನೆನಪಿಸುತ್ತಿದ್ದೀರಿ. ಆದರೆ ಅಷ್ಟ ವಯಸ್ಸು ಹೃದಯಕ್ಕೆ ಆಗಿಲ್ಲ’ ಎಂದು ಐಸಾಮ್ ಖುರೇಷಿ ಲಘುಧಾಟಿಯಲ್ಲಿ ಹೇಳಿದರು.
‘ಈ ಪಂದ್ಯದ ಮೂಲಕ ಬದಲಾವಣೆ ಉಂಟಾಗಬಹುದೆಂಬ ವಿಶ್ವಾಸವಿದೆ. ಭಾರತದ ಹೆಚ್ಚೆಚ್ಚು ತಂಡಗಳು ಪಾಕ್‌ಗೆ ಬರಲೆಂಬ ಆಶಾವಾದ ಹೊಂದಿದ್ದೇನೆ. ಇದು ಟೆನಿಸ್‌ನಿಂದ ಆರಂಭವಾಗಿರುವುದಕ್ಕೆ ಸಂಸತವಾಗಿದೆ’ ಎಂದು ಪಾಕ್‌ನ ಜನಪ್ರಿಯ ಟೆನಿಸ್ ತಾರೆ ಹೇಳಿದರು.
ಡೇವಿಸ್ ಕಪ್ ಪಂದ್ಯದಲ್ಲಿ ಮುಖಾಮುಖಿ
ಫೆಬ್ರುವರಿ 3
* ಮೊದಲ ಸಿಂಗಲ್ಸ್: ರಾಮಕುಮಾರ್ ರಾಮನಾಥನ್ – ಐಸಾಮ್ ಉಲ್ ಹಕ್ ಖುರೇಷಿ
* ಎರಡನೇ ಸಿಂಗಲ್ಸ್: ಅಖೀಲ್ ಖಾನ್ – ಶ್ರೀರಾಮ್ ಬಾಲಾಜಿ ಫೆಬ್ರುವರಿ 4
* ಡಬಲ್ಸ್: ಬರ್ಕತ್‌ಉಲ್ಲಾ/ ಮುಝಾಮಿಲ್ ಮುರ್ತಾಝಾ – ಯೂಕಿ ಭಾಂಬ್ರಿ/ ಸಾಕೇತ್ ಮೈನೇನಿ
* ಮೊದಲ ರಿವರ್ಸ್ ಸಿಂಗಲ್ಸ್: ರಾಮಕುಮಾರ್ – ಅಖೀಲ್ ಖಾನ್
* ಎರಡನೇ ರಿವರ್ಸ್ ಸಿಂಗಲ್ಸ್: ಐಸಾಮ್ ಉಲ್ ಹಕ್ – ಶ್ರೀರಾಮ್ ಬಾಲಾಜಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.