ADVERTISEMENT

ಲೆವರ್ ಕಪ್‌ ಟೂರ್ನಿ: ಡಬಲ್ಸ್‌ನಲ್ಲಿ ಫೆಡರರ್‌– ನಡಾಲ್‌ ಕಣಕ್ಕೆ

ಸ್ವಿಸ್ ದಿಗ್ಗಜನಿಗೆ ಕೊನೆಯ ಟೂರ್ನಿ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2022, 14:22 IST
Last Updated 22 ಸೆಪ್ಟೆಂಬರ್ 2022, 14:22 IST
ಗುರುವಾರ ಅಭ್ಯಾಸದ ವೇಳೆ ನಡಾಲ್‌ ಹಾಗೂ ಫೆಡರರ್‌ ವಿಶ್ರಾಂತಿ ಪಡೆದರು –ಎಪಿ ಚಿತ್ರ
ಗುರುವಾರ ಅಭ್ಯಾಸದ ವೇಳೆ ನಡಾಲ್‌ ಹಾಗೂ ಫೆಡರರ್‌ ವಿಶ್ರಾಂತಿ ಪಡೆದರು –ಎಪಿ ಚಿತ್ರ   

ಲಂಡನ್‌ (ರಾಯಿಟರ್ಸ್‌/ಎಎಫ್‌ಪಿ): ಟೆನಿಸ್‌ನ ದಿಗ್ಗಜ ಆಟಗಾರ ರೋಜರ್‌ ಫೆಡರರ್‌ ಅವರು ವೃತ್ತಿಜೀವನದ ಕೊನೆಯ ಟೂರ್ನಿಯಲ್ಲಿ ತಮ್ಮ ‘ಬದ್ಧ ವೈರಿ’ ಸ್ಪೇನ್‌ನ ರಫೆಲ್‌ ನಡಾಲ್‌ ಜತೆಗೂಡಿ ಆಡಲಿದ್ದು, ಅಭಿಮಾನಿಗಳಲ್ಲಿ ರೋಮಾಂಚನ ಮೂಡಿಸಿದೆ.

ಲೆವರ್‌ ಕಪ್‌ ಬಳಿಕ ಟೆನಿಸ್‌ನಿಂದ ವಿರಮಿಸುವುದಾಗಿ 41 ವರ್ಷದ ಫೆಡರರ್‌ ಕಳೆದ ವಾರ ಪ್ರಕಟಿಸಿದ್ದರು. ಮೂರು ದಿನಗಳ ಲೆವರ್ ಕಪ್‌ ಟೂರ್ನಿ ಶುಕ್ರವಾರ ಆರಂಭವಾಗಲಿದ್ದು, ‘ಟೀ‌ಮ್‌ ಯುರೋಪ್‌’ ಮತ್ತು ‘ಟೀಮ್‌ ವರ್ಲ್ಡ್‌’ ಪರಸ್ಪರ ಎದುರಾಗಲಿವೆ.

ಬಲ ಮಂಡಿನೋವಿನಿಂದ ಬಳಲುತ್ತಿರುವ ಫೆಡರರ್‌ ಅವರು ಇಲ್ಲಿ ಸಿಂಗಲ್ಸ್‌ನಲ್ಲಿ ಆಡದಿರಲು ನಿರ್ಧರಿಸಿದ್ದು, ಡಬಲ್ಸ್‌ನಲ್ಲಿ ಮಾತ್ರ ಕಣಕ್ಕಿಳಿಯಲಿದ್ದಾರೆ.

ADVERTISEMENT

ಲಂಡನ್‌ನ ಒ2 ಅರೆನಾದಲ್ಲಿ ನಡೆಯಲಿರುವ ಪಂದ್ಯದಲ್ಲಿ ಫೆಡರರ್‌– ನಡಾಲ್‌ ಜೋಡಿ, ‘ಟೀಮ್‌ ವರ್ಲ್ಡ್‌’ ತಂಡದ ಅಮೆರಿಕದ ಜಾಕ್‌ ಸಾಕ್‌ ಮತ್ತು ಫ್ರಾನ್ಸೆಸ್‌ ಟೈಫೊ ಅವರನ್ನು ಎದುರಿಸಲಿದೆ.

‘ಮಂಡಿನೋವನ್ನು ನಿಭಾಯಿಸಬಹುದೇ ಎಂಬುದು ತಿಳಿದಿಲ್ಲ. ಆದರೂ ಪ್ರಯತ್ನಿಸುತ್ತೇನೆ’ ಎಂದು ಫೆಡರರ್‌ ಪಂದ್ಯದ ಮುನ್ನಾದಿನ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ರಫಾ ಜತೆಗೂಡಿ ಆಡಲಿರುವುದು ಭಿನ್ನ ಅನುಭವ ನೀಡಲಿದೆ. ನಾವಿಬ್ಬರು ಒಂದೇ ತಂಡದಲ್ಲಿರುವುದು ಸಂತಸದ ಸಂಗತಿ. ಗೆಲುವು ಪಡೆಯಲು ನನ್ನ ಅತ್ಯುತ್ತಮ ಪ್ರಯತ್ನ ಮಾಡುತ್ತೇನೆ’ ಎಂದರು.

‘ಈ ಪಂದ್ಯ ನನಗೆ ಅದ್ಭುತ ಮತ್ತು ಮರೆಯಲಾಗದ ಅನುಭವ ನೀಡಲಿದೆ. ಆ ಕ್ಷಣವನ್ನು ಉತ್ಸುಕತೆಯಿಂದ ಎದುರುನೋಡುತ್ತಿದ್ದೇನೆ’ ಎಂದು ನಡಾಲ್‌ ಪ್ರತಿಕ್ರಿಯಿಸಿದ್ದಾರೆ.

ಇವನ್ನೂ ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.