ಮೆಲ್ಬರ್ನ್: ಉದಯೋನ್ಮುಖ ತಾರೆ ಅಮೆರಿಕದ ಕೊಕೊ ಗಫ್ ಅನುಭವಿ ಆಟಗಾರ್ತಿ ತಮ್ಮದೇ ದೇಶದ ವೀನಸ್ ವಿಲಿಯಮ್ಸ್ ಅವರಿಗೆ ಮತ್ತೊಮ್ಮೆ ಆಘಾತ ನೀಡಿದರು. ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯಲ್ಲಿ ಸೋಮವಾರ ನಡೆದ ಮೊದಲ ಸುತ್ತಿನ ಹಣಾಹಣಿಯಲ್ಲಿ ತನಗಿಂತ 24 ವರ್ಷ ಹಿರಿಯ ವೀನಸ್ ಎದುರು 7–6, 6–3 ಸೆಟ್‌ಗಳಿಂದ ಜಯದ ನಗೆ ಬೀರಿದರು.
ವಿಶ್ವ ರ‍್ಯಾಂಕಿಂಗ್‌ನಲ್ಲಿ 67ನೇ ಸ್ಥಾನದಲ್ಲಿರುವ ಗಫ್, ಏಳು ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ವಿಜೇತೆ ವೀನಸ್ ವಿರುದ್ಧ 2019ರ ವಿಂಬಲ್ಡನ್ ಟೂರ್ನಿಯ ಮೊದಲ ಸುತ್ತಿನಲ್ಲಿ ಜಯ ಕಂಡಿದ್ದರು.
‘ಸಾಧ್ಯವಾದಷ್ಟು ಹೆಚ್ಚು ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ಟೆನಿಸ್‌ನ ಶ್ರೇಷ್ಠ ಆಟಗಾರ್ತಿಯಾಗುವುದು ನನ್ನ ಗುರಿಯಾಗಿದೆ’ ಎಂದು ಪಂದ್ಯದ ಬಳಿಕ ಗಫ್ ಪ್ರತಿಕ್ರಿಯಿಸಿದ್ದಾರೆ.
ಫೆಡರರ್, ಸೆರೆನಾ ಶುಭಾರಂಭ: ವಿಶ್ವದ ಮೂರನೇ ರ‍್ಯಾಂಕಿನ ಆಟಗಾರ ರೋಜರ್ ಫೆಡರರ್ ಹಾಗೂ ಅಮೆರಿಕದ ಸೆರೆನಾ ವಿಲಿಯಮ್ಸ್ ಟೂರ್ನಿಯಲ್ಲಿ ಶುಭಾರಂಭ ಮಾಡಿದರು.
ಸ್ವಿಟ್ಜರ್ಲೆಂಡ್‌ನ ಫೆಡರರ್ ಅವರು ಅಮೆರಿಕದ ಸ್ಟೀವ್ ಜಾನ್ಸನ್ ಎದುರು 6–3, 6–2, 6–2 ಸೆಟ್‌ಗಳಿಂಗ ಗೆದ್ದು ಮುನ್ನಡೆದರು. ಮಹಿಳಾ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಅಮೆರಿಕದ ಸೆರೆನಾ ವಿಲಿಯಮ್ಸ್, ಅನಸ್ತಾಸಿಯಾ ಪೊಟಪೊವಾ ವಿರುದ್ಧ 6–0, 6–3ರಿಂದ ಜಯಭೇರಿ ಮೊಳಗಿಸಿದರು.
ಜೊಕೊಗೆ ಪ್ರಯಾಸದ ಜಯ: ಪುರುಷರ ಸಿಂಗಲ್ಸ್ ಹಾಲಿ ಚಾಂಪಿಯನ್ ನೊವಾಕ್ ಜೊಕೊವಿಚ್ ಟೂರ್ನಿಯ ಮೊದಲ ಸುತ್ತಿನಲ್ಲಿ ಜಯಿಸಲು ಪ್ರಯಾಸಪಡಬೇಕಾಯಿತು. ಜರ್ಮನಿಯ ಜಾನ್ ಲೆನ್ನಾರ್ಡ್ ಸ್ಟ್ರಫ್ ಎದುರು 7–6, 6–2, 2–6, 6–1ರಿಂದ ಅವರು ಗೆದ್ದರು. ಪ್ರಬಲ ಪೈಪೋಟಿ ನೀಡಿದ ಜಾನ್ ಜನರ ಮೆಚ್ಚುಗೆ ಗಳಿಸಿದರು.
ಹಾಲಿ ಚಾಂಪಿಯನ್ ಜಪಾನ್‌ನ ನವೊಮಿ ಒಸಾಕಾ ಅವರು ಜೆಕ್ ಗಣರಾಜ್ಯದ ಮಾರಿ ಬೌಜ್‌ಕೊವಾ ವಿರುದ್ಧ 6–2, 6–4ರಿಂದ ಗೆದ್ದರು. ಒಸಾಕಾ ಸಿಡಿಸಿದ ಬಲಿಷ್ಠ ಸರ್ವ್ ಒಂದರಿಂದ ನೆಟ್ ಹರಿದುಬಿತ್ತು. ಮಹಿಳಾ ಸಿಂಗಲ್ಸ್ ಮೊದಲ ಸುತ್ತಿನ ಇತರ ಪಂದ್ಯಗಳ ಪೈಕಿ ಸ್ಥಳೀಯ ಆಟಗಾರ್ತಿ ಆ್ಯಶ್ಲೆ ಬಾರ್ಟಿ ಅವರು ಲೆಸಿಯಾ ಸುರೆಂಕೊ ಎದುರು 5–7, 6–1, 6–1ರಿಂದ, ಪೆಟ್ರಾ ಕ್ವಿಟೊವಾ ಅವರು ಕ್ಯಾತರಿನಾ ಸಿನಿಯಾಕೊವಾ ಎದುರು 6–1, 6–0ಯಿಂದ ಗೆದ್ದರು.
ಸ್ಲೋವಾನೆ ಸ್ಟೀಫನ್ಸ್ ಪರಾಭವ: ಅಮೆರಿಕ ಓಪನ್ ಮಾಜಿ ಚಾಂಪಿಯನ್ ಸ್ಲೋವಾನೆ ಸ್ಟೀಫನ್ಸ್ ಟೂರ್ನಿಯ ಮೊದಲ ದಿನ ಪರಾಭವಗೊಂಡ ಹೆಚ್ಚಿನ ಶ್ರೇಯಾಂಕದ ಆಟಗಾರ್ತಿ ಎನಿಸಿಕೊಂಡರು. 24ನೇ ಶ್ರೇಯಾಂಕ ಪಡೆದಿದ್ದ ಅಮೆರಿಕದ ಆಟಗಾರ್ತಿ ಚೀನಾದ ಜಾಂಗ್ ಶುಯಿ ಎದುರು 6–2, 5–7, 2–6ರಿಂದ ಶರಣಾದರು.
ಪುರುಷರ ಸಿಂಗಲ್ಸ್ ವಿಭಾಗಗಳಲ್ಲಿ ಪ್ರಮುಖ ಆಟಗಾರರಾದ ಸ್ಟೆಫಾನೋಸ್ ಸಿಸಿಪಸ್ ಅವರು ಸಲ್ವತೊರ್ ಕ್ಯಾರುಸೊ ವಿರುದ್ಧ 6–0, 6–2, 6–3ರಿಂದ, ಅಮೆರಿಕದ ಸ್ಯಾಮ್ ಕ್ವೆರಿ ಅವರು ಕ್ರೊವೇಷ್ಯಾದ ಬಾರ್ನಾ ಕೊರಿಕ್ ವಿರುದ್ಧ 6–3, 6–4, 6–4ರಿಂದ ಗೆದ್ದರು. ಹಂಗರಿಯ ಮಾರ್ಟನ್ ಫಸೊವಿಕ್ಸ್ ಅವರು 6–3, 6–7, 6–1, 7–6ರಿಂದ13ನೇ ಶ್ರೇಯಾಂಕದ ಆಟಗಾರ ಕೆನಡಾದ ಡೆನಿಸ್ ಶಪವಲೊವ್ ವಿರುದ್ಧ ಗೆದ್ದರು.
ಮಳೆ: ಪಂದ್ಯಗಳು ಮುಂದಕ್ಕೆ
ಸೋಮವಾರ ನಡೆಯಬೇಕಿದ್ದ ಮೊದಲ ಸುತ್ತಿನ 64 ಪಂದ್ಯಗಳ ಪೈಕಿಭಾರೀ ಮಳೆಯ ಕಾರಣ 17 ಪಂದ್ಯಗಳನ್ನು ಮಂಗಳವಾರಕ್ಕೆ ಮುಂದೂಡಲಾಯಿತು. ಭಾರತದ ಪ್ರಜ್ಞೇಶ್ ಗುಣೇಶ್ವರನ್ ಆಡುವ ಪಂದ್ಯವೂ ಇದರಲ್ಲಿ ಸೇರಿದೆ.
ವಿಶ್ವ ರ‍್ಯಾಂಕಿಂಗ್‌ನಲ್ಲಿ 22ನೇ ಸ್ಥಾನದಲ್ಲಿರುವ ಪ್ರಜ್ಞೇಶ್ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಸೋತಿದ್ದರು. ಆದರೆ ಪ್ರಧಾನ ಸುತ್ತಿಗೆ ಅವಕಾಶ ಪಡೆದಿದ್ದ ಆಟಗಾರನೊಬ್ಬ ಹಿಂದೆ ಸರಿದ ಕಾರಣ ಭಾರತದ ಆಟಗಾರನಿಗೆ ಅದೃಷ್ಟದ ಅವಕಾಶ ಲಭಿಸಿದೆ. ಮೊದಲ ಪಂದ್ಯದಲ್ಲಿ ಅವರು ಜಪಾನ್‌ನ ತತ್ಸುಮಾ ಇಟೊ ಎದುರು ಆಡಲಿದ್ದಾರೆ. ಈ ಪಂದ್ಯದಲ್ಲಿ ಜಯಿಸಿದರೆ ವಿಶ್ವದ ಎರಡನೇ ರ‍್ಯಾಂಕಿನ ಆಟಗಾರ ನೊವಾಕ್ ಜೊಕೊವಿಚ್ ಸವಾಲನ್ನು ಅವರು ಎದುರಿಸುವ ಸಾಧ್ಯತೆಯಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.