ಮ್ಯಾಡ್ರಿಡ್: ಹರ್ಲಿಂಗಮ್‌ನ ಅಸ್ಪಾಲ್ ಟೆನಿಸ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಮೂಲಕ ರಫೆಲ್ ನಡಾಲ್ ವಿಂಬಲ್ಡನ್ ಓಪನ್ ಟೂರ್ನಿಗೆ ಸಿದ್ಧತೆ ನಡೆಸಲಿದ್ದಾರೆ. ಮುಂದಿನ ವಾರದಿಂದ ಅಸ್ಪಾಲ್ ಟೂರ್ನಿ ಆರಂಭವಾಗಲಿದೆ.
ಈ ತಿಂಗಳ ಆರಂಭದಲ್ಲಿ 12ನೇ ಫ್ರೆಂಚ್ ಓಪನ್ ಚಾಂಪಿಯನ್ ಕಿರೀಟ ಧರಿಸಿದ ಬಳಿಕ ಸ್ಪೇನ್ ಆಟಗಾರ, ವಿಂಬಲ್ಡನ್ ಆರಂಭವಾಗುವವರೆಗೆ ಯಾವುದೇ ಟೂರ್ನಿಯಲ್ಲಿ ಆಡದಿರಲು ನಿರ್ಧರಿಸಿದ್ದರು.
‘ಹರ್ಲಿಂಗಂ ಕ್ಲಬ್‌ನಲ್ಲಿ ಆಡುವುದನ್ನು ಯಾವಾಗಲೂ ಇಷ್ಟಪಡುತ್ತೇನೆ. ಹಾಗೆಯೇ ಇಂಗ್ಲೆಂಡ್ ಟೆನಿಸ್ ಅಭಿಮಾನಿಗಳಿಗೆ ಹತ್ತಿರವಾಗುತ್ತೇನೆ. ಇಂಗ್ಲೆಂಡ್‌ನ ಪ್ರತಿಷ್ಠಿತ ಕ್ರೀಡಾಂಗಣಗಳಲ್ಲಿ ಇದೂ ಒಂದು. ವಿಂಬಲ್ಡನ್ ಟೂರ್ನಿಗೆ ಸಿದ್ಧವಾಗಲು ಒಂದು ಪರಿಪೂರ್ಣ ಮಾರ್ಗ’ ಎಂದು 23 ವರ್ಷದ ನಡಾಲ್ ಹೇಳಿದರು.
ಹೋದ ವರ್ಷದ ವಿಂಬಲ್ಡನ್ ರನ್ನರ್‌ಅಪ್ ಕೆವಿನ್ ಆ್ಯಂಡರ್ಸನ್, ನಿಕ್ ಕಿರ್ಗಿಯೊಸ್, ಮರಿನ್ ಸಿಲಿಕ್, ಲೂಕಾಸ್ ಪೌಲ್ಲಿ, ಫೆಲಿಕ್ಸ್ ಅಗರ್ ಅಲೈಸ್ಸಿಮ್ ಕೂಡ ಅಸ್ಪಾಲ್ ಟೂರ್ನಿಯಲ್ಲಿ ಮೋಡಿ ಮಾಡಲಿದ್ದಾರೆ.
18 ಬಾರಿಯ ಗ್ರ್ಯಾನ್‌ಸ್ಲಾಮ್ ವಿಜೇತ ನಡಾಲ್, ವಿಂಬಲ್ಡನ್‌ನಲ್ಲಿ ತಮ್ಮ ಮೂರನೇ ಪ್ರಶಸ್ತಿಗಾಗಿ ಸೆಣಸಲಿರುವರು. 2008 ಹಾಗೂ 2010ರಲ್ಲಿ ಅವರು ಇಲ್ಲಿ ಕಿರೀಟ ಧರಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.