ADVERTISEMENT

ಟೆನಿಸ್‌: ನಗಾಲ್‌ ಫೈನಲ್‌ಗೆ

ಪಿಟಿಐ
Published 16 ಜೂನ್ 2024, 5:00 IST
Last Updated 16 ಜೂನ್ 2024, 5:00 IST
<div class="paragraphs"><p>ಸಾಂದರ್ಭಿಕ ಚಿತ್ರ&nbsp;</p></div>

ಸಾಂದರ್ಭಿಕ ಚಿತ್ರ 

   

ಪೆರುಜಿಯಾ, ಇಟಲಿ: ಭಾರತದ ಅಗ್ರಮಾನ್ಯ ಸಿಂಗಲ್ಸ್‌ ಆಟಗಾರ ಸುಮಿತ್‌ ನಗಾಲ್ ಅವರು ಇಲ್ಲಿ ನಡೆಯುತ್ತಿರುವ ಪೆರುಗಿಯಾ ಚಾಲೆಂಜರ್‌ ಟೆನಿಸ್‌ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಿದರು. ಈ ಮೂಲಕ ಎಟಿಪಿ ರ‍್ಯಾಂಕಿಂಗ್‌ನಲ್ಲಿ ಅಗ್ರ 50ರಲ್ಲಿ ಸ್ಥಾನ ಪಡೆಯುತ್ತ ದಾಪುಗಾಲು ಹಾಕಿದರು.

ಶನಿವಾರ ನಡೆದ ಸೆಮಿಫೈನಲ್‌ ನಲ್ಲಿ ವಿಶ್ವದ 77ನೇ ಕ್ರಮಾಂಕದ ನಗಾಲ್‌ 7-6 (7-2), 1-6, 6-2 ರಿಂದ ಸ್ಪೇನ್‌ನ ಬರ್ನಾಬೆ ಜಪಾಟಾ ಮಿರಾಲ್ಲೆಸ್ ಅವರನ್ನು ಮೂರು ಸೆಟ್‌ಗಳ ಹೋರಾಟದಲ್ಲಿ ಹಿಮ್ಮೆಟ್ಟಿಸಿದರು.

ADVERTISEMENT

ಮತ್ತೊಂದು ಸೆಮಿಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ಇಟಲಿಯ ಲೂಸಿಯಾನೊ ದರ್ಡೆರಿ ಮತ್ತು ನಾಲ್ಕನೇ ಶ್ರೇಯಾಂಕದ ಜರ್ಮನಿಯ ಡೇನಿಯಲ್ ಆಲ್ಟ್‌ಮೇಯರ್‌ ಸೆಣಸಲಿದ್ದು, ಅದರ ವಿಜೇತರನ್ನು ಆರನೇ ಶ್ರೇಯಾಂಕದ ನಗಾಲ್ ಭಾನುವಾರ ಫೈನಲ್‌ನಲ್ಲಿ ಎದುರಿಸಲಿದ್ದಾರೆ.

ಮೊದಲ ಸೆಟ್‌ ಅನ್ನು ಟೈಬ್ರೇಕರ್‌ ನಲ್ಲಿ ಗೆದ್ದುಕೊಂಡ ನಗಾಲ್‌, ಎರಡನೇ ಸೆಟ್‌ನಲ್ಲಿ ಹಿನ್ನಡೆ ಅನುಭವಿಸಿದರು. ಆದರೆ, ಮೂರನೇ ಸೆಟ್‌ನಲ್ಲಿ ಮತ್ತೆ ಹಿಡಿತ ಸಾಧಿಸಿದ ಭಾರತದ 26 ವರ್ಷದ ಆಟಗಾರ ಗೆಲುವು ಸಾಧಿಸಿ ಮುನ್ನಡೆದರು.

ಈ ವರ್ಷ ಚೆನ್ನೈ ಓಪನ್‌ ಗೆದ್ದಿದ್ದ ನಗಾಲ್‌, ಕಳೆದ ವಾರ ಹೀಲ್‌ ಬ್ರಾನ್‌ ನೆಕರ್‌ಕಪ್‌ ಎಟಿಪಿ ಚಾಲೆಂಜರ್ ಟೂರ್ನಿಯಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದರು. ಇದೀಗ ವರ್ಷದ ಮೂರನೇ ಪ್ರಶಸ್ತಿಯ ಹೊಸ್ತಿಲಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.