ಮೆಕ್ಸಿಕೊ: ಡಬ್ಲ್ಯುಟಿಎ ಫೈನಲ್ಸ್ ಟೆನಿಸ್ ಟೂರ್ನಿಯಲ್ಲಿ ಸ್ಪರ್ಧಿಸುತ್ತಿರುವ ಟ್ಯುನೀಷಿಯಾದ ಒನ್ಸ್ ಜಬೇರ್, ಬಹುಮಾನ ಮೊತ್ತದ ಒಂದು ಪಾಲನ್ನು ಸಂಘರ್ಷ ಪೀಡಿತ ಪ್ಯಾಲೆಸ್ಟೀನ್ ಜನತೆಗೆ ನೀಡುವುದಾಗಿ ಘೋಷಿಸಿದ್ದಾರೆ.
ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿದ ಬಳಿಕ ಭಾವುಕರಾದ ಅವರು ಯುದ್ಧ ನಡೆಯುತ್ತಿರುವುದರ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದರು.
ಈ ಗೆಲುವು ನನಗೆ ಖುಷಿ ತಂದಿದೆ. ಆದರೆ ನಿಜಕ್ಕೂ ಸಂತಸಗೊಂಡಿಲ್ಲ. ವಿಶ್ವದ ಈಗಿನ ಪರಿಸ್ಥಿತಿಯು ಸಮಾಧಾನಪಟ್ಟುಕೊಳ್ಳುವಂತೆ ಮಾಡುತ್ತಿಲ್ಲ. ದೈನಂದಿನ ಮಕ್ಕಳು, ಮಹಿಳೆಯರು ಸಾಯುತ್ತಿದ್ದಾರೆ. ಇದು ನಿಜಕ್ಕೂ ಆಘಾತ ಮೂಡಿಸಿದೆ. ನನ್ನ ಬಹುಮಾನ ಮೊತ್ತದ ಒಂದು ಪಾಲನ್ನು ಪ್ಯಾಲೆಸ್ಟೀನ್ ಸಂತ್ರಸ್ತರಿಗೆ ನೀಡುತ್ತೇನೆ ಎಂದು ಹೇಳಿದ್ದಾರೆ.
ನನ್ನನ್ನು ಕ್ಷಮಿಸಿ, ದಯವಿಟ್ಟು ಇದನ್ನು ರಾಜಕೀಯಗೊಳಿಸಬಾರದು. ಮಾನವೀಯತೆಯ ದೃಷ್ಟಿಕೋನದಲ್ಲಿ ಇದನ್ನು ತೆಗೆದುಕೊಳ್ಳಬೇಕು. ವಿಶ್ವದಲ್ಲಿ ಶಾಂತಿ ನೆಲೆಸಬೇಕು ಎಂದು ಅವರು ಹೇಳಿದ್ದಾರೆ.
ಜೆಕ್ ಗಣರಾಜ್ಯದ ಮಾರ್ಕೆತ ದ್ರೊಸೋವಾ ವಿರುದ್ಧ 6-4, 6-3ರ ಅಂತರದಲ್ಲಿ ಗೆಲುವು ದಾಖಲಿಸಿದ ಜಬೇರ್, ಪ್ರಸಕ್ತ ಸಾಲಿನಲ್ಲಿ ನಡೆದ ವಿಂಬಲ್ಡನ್ ಟೂರ್ನಿಯ ಫೈನಲ್‌ನಲ್ಲಿ ಎದುರಾದ ಸೋಲಿಗೆ ಸೇಡು ತೀರಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.