ಹೈದರಾಬಾದ್: ತವರಿನ ಅಭಿಮಾನಿಗಳ ಮುಂದೆ ಪ್ರದರ್ಶನ ಪಂದ್ಯವನ್ನಾಡುವ ಮೂಲಕ ಭಾರತದ ಮಹಿಳಾ ಟೆನಿಸ್‌ನ ದಿಗ್ಗಜ ಆಟಗಾರ್ತಿ ಸಾನಿಯಾ ಮಿರ್ಜಾ ಅವರು ವೃತ್ತಿಜೀವನಕ್ಕೆ ತೆರೆ ಎಳೆದರು.
ಸಾನಿಯಾ ಅವರು ಈಚೆಗೆ ನಡೆದ ದುಬೈ ಡ್ಯೂಟಿ ಫ್ರೀ ಟೂರ್ನಿಯೊಂದಿಗೆ ಟೆನಿಸ್‌ಗೆ ಗುಡ್‌ಬೈ ಹೇಳಿದ್ದರು. ಹುಟ್ಟೂರಿನ ಅಭಿಮಾನಿಗಳ ಎದುರು ವಿದಾಯ ಹೇಳುವ ಉದ್ದೇಶದಿಂದ ಪ್ರದರ್ಶನ ಪಂದ್ಯ ಏರ್ಪಡಿಸಲಾಗಿತ್ತು.
ಲಾಲ್ ಬಹದೂರ್ ಟೆನಿಸ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ರೋಹನ್ ಬೋಪಣ್ಣ, ಕ್ರೊವೇಷ್ಯದ ಆಟಗಾರ ಇವಾನ್ ದೊಡಿಗ್ ಮತ್ತು ಅಮೆರಿಕದ ಬೆಥನಿ ಮ್ಯಾಟೆಕ್ ಸ್ಯಾಂಡ್ಸ್ ಅವರು ಸಾನಿಯಾಗೆ ಸಾಥ್ ನೀಡಿದರು.
ಎರಡು ದಶಕಗಳ ಹಿಂದೆ ಇದೇ ಕ್ರೀಡಾಂಗಣದಲ್ಲಿ ಡಬ್ಲ್ಯುಟಿಎ ಸಿಂಗಲ್ಸ್ ಪ್ರಶಸ್ತಿ ಗೆಲ್ಲುವ ಮೂಲಕ ಸಾನಿಯಾ ಅವರು ಅಂತರರಾಷ್ಟ್ರೀಯ
ಟೆನಿಸ್‌ನಲ್ಲಿ ಆರಂಭಿಕ ಹೆಜ್ಜೆಗಳನ್ನಿಟ್ಟಿದ್ದರು. ಅದೇ ತಾಣದಲ್ಲಿ ಕೊನೆಯ ಪಂದ್ಯ ಆಡಿದರು.
ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್, ಯುವರಾಜ್ ಸಿಂಗ್, ತೆಲಂಗಾಣ ಸಚಿವ ಕೆ.ಟಿ.ರಾಮ ರಾವ್ ಅವರು ಪ್ರದರ್ಶನ ಪಂದ್ಯ ವೀಕ್ಷಿಸಿದರು.
‘ದೇಶಕ್ಕಾಗಿ 20 ವರ್ಷ ಆಡಲು ಸಾಧ್ಯವಾದದ್ದು ದೊರೆತ ಬಲುದೊಡ್ಡ ಗೌರವ. ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಬೇಕು ಎಂಬುದು ಪ್ರತಿಯೊಬ್ಬ ಕ್ರೀಡಾಪಟುವಿನ ಕನಸಾಗಿದೆ. ಆ ಕನಸು ಈಡೇರಿಸಲು ನಾನು ಯಶಸ್ವಿಯಾಗಿದ್ದೇನೆ’ ಎಂದು ಹೇಳಿದರು.
ಅಭಿಮಾನಿಗಳು ಚಪ್ಪಾಳೆ ಮೂಲಕ ಅಭಿನಂದನೆ ಸಲ್ಲಿಸಿದಾಗ ಸಾನಿಯಾ ಭಾವುಕರಾದರು. ‘ಇದು ಆನಂದಭಾಷ್ಪ. ಇದಕ್ಕಿಂತ ಹೆಚ್ಚಿನ ವಿದಾಯವನ್ನು ನಾನು ಬಯಸಿರಲಿಲ್ಲ’ ಎಂದು ನುಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.