ADVERTISEMENT

ವಿಂಬಲ್ಡನ್‌ ಟೆನಿಸ್‌ ಟೂರ್ನಿ: ಮೊದಲ ಸಲ ಕ್ವಾರ್ಟರ್‌ಗೆ ಮಿನೋರ್‌

ಏಜೆನ್ಸೀಸ್
Published 8 ಜುಲೈ 2024, 18:06 IST
Last Updated 8 ಜುಲೈ 2024, 18:06 IST
<div class="paragraphs"><p>ಅಲೆಕ್ಸ್‌ ಡಿ ಮಿನೋರ್‌</p></div>

ಅಲೆಕ್ಸ್‌ ಡಿ ಮಿನೋರ್‌

   

ಲಂಡನ್‌: ಆಸ್ಟ್ರೇಲಿಯಾದ ಅಲೆಕ್ಸ್‌ ಡಿ ಮಿನೋರ್ ನಾಲ್ಕು ಸೆಟ್‌ಗಳ ಸೆಣಸಾಟದಲ್ಲಿ ಫ್ರಾನ್ಸ್‌ನ ಆರ್ಥರ್ ಫಿಲ್ಸ್ ಅವರನ್ನು ಸೋಲಿಸಿ ಮೊದಲ ಬಾರಿ ವಿಂಬಲ್ಡನ್‌ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದರು. ಗೆದ್ದ ಸಂದರ್ಭದಲ್ಲೇ ಪಾದದ ನೋವಿನಿಂದ ನರಳಿದರು.

ವಿಶ್ವ ಕ್ರಮಾಂಕದಲ್ಲಿ ಒಂಬತ್ತನೇ ಸ್ಥಾನದ ಲ್ಲಿರುವ ಡಿ ಮಿನೋರ್‌ ಸೋಮವಾರ ನಡೆದ ಪ್ರಿಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ 6–2, 6–4, 4–6, 6–3 ರಿಂದ ಜಯಗಳಿಸಿದರು. ಅವರು ಏಳು ಬಾರಿಯ ಚಾಂಪಿಯನ್ ನೊವಾಕ್ ಜೊಕೊವಿಚ್‌ (ಸರ್ಬಿಯಾ) ಮತ್ತು ಹೋಲ್ಗರ್‌ ರೂನ್ (ಡೆನ್ಮಾರ್ಕ್‌) ನಡುವಣ ಪಂದ್ಯದ ವಿಜೇತರನ್ನು ಸೆಮಿಫೈನಲ್‌ನಲ್ಲಿ ಎದುರಿಸಲಿದ್ದಾರೆ.

ADVERTISEMENT

ಗೆಲುವಿನ ಹೊಡೆತದ ನಂತರ ಅವರು ಪಾದದ ನೋವು ತಡೆಯಲಾಗದೇ ಮುಖ ಕಿವುಚಿಕೊಂಡು, ಅಂಕಣ ಬದಿಯ ಆಸನದತ್ತ ನಡೆದರು. ತರ ಗ್ಯಾಲರಿಯ ತಮ್ಮ ಬಾಕ್ಸ್‌ನಲ್ಲಿ ಕುಳಿತಿದ್ದ 2002ರ ಚಾಂಪಿಯನ್‌ ಲೀಟನ್ ಹೆವಿಟ್‌ ಮತ್ತು ಸ್ನೇಹಿತೆ ಹಾಗೂ ಬ್ರಿಟನ್‌ನ ಅಗ್ರ ಆಟಗಾರ್ತಿ ಕೇಟಿ ಬೌಲ್ಟರ್ ಅವರತ್ತ ಕಣ್ಣುಹಾಯಿಸಿದರು. ‘ನಾನೀಗ ಚೆನ್ನಾಗಿದ್ದೇನೆ’ ಎದು ಅವರು ಕೋರ್ಟ್‌ನಲ್ಲೇ ನಡೆದ ಸಂದರ್ಶನದಲ್ಲಿ ತಿಳಿಸಿದರು.

ವಿಶ್ವ ಕ್ರಮಾಂಕದಲ್ಲಿ 34ನೆ ಸ್ಥಾನದಲ್ಲಿರುವ ಫಿಲ್ಸ್‌ ಮೊದಲ ಬಾರಿ ಗ್ರ್ಯಾನ್‌ಸ್ಲಾಮ್ ಟೂರ್ನಿಯೊಂದರ ನಾಲ್ಕನೇ ಸುತ್ತಿನಲ್ಲಿ ಆಡಿದ್ದರು. ಆದರೆ ಅವರು 66 ತಪ್ಪುಗಳನ್ನೆಸಗಿದ್ದು ದುಬಾರಿಯಾಯಿತು.

ಈ ಹಿಂದೆ ಡಿ ಮಿನೋರ್ ಅವರು ತಮ್ಮ ವೃತ್ತಿಜೀವನದಲ್ಲಿ ಇಬ್ಬರನ್ನೂ– ಜೊಕೊವಿಚ್‌ ಮತ್ತು ರೂನ್‌– ಸೋಲಿಸಿದ್ದಾರೆ. ಈ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಯುನೈಟೆಡ್‌ ಕಪ್ ಟೂರ್ನಿಯಲ್ಲಿ 24 ಬಾರಿಯ ಗ್ರ್ಯಾನ್‌ಸ್ಲಾಮ್ ವಿಜೇತ ಜೊಕೊ ಅವರನ್ನು ಸೋಲಿಸಿದ್ದರು. ಕ್ವೀನ್ಸ್‌ ಕ್ಲಬ್‌ನ ಹುಲ್ಲಿನಂಕಣದಲ್ಲಿ ಸೇರಿದಂತೆ 2023ರಲ್ಲಿ ಎರಡು ಬಾರಿ ರೂನ್ ಅವರನ್ನೂ ಮಣಿಸಿದ್ದರು.

ಮುಸೆಟ್ಟಿ ಮುನ್ನಡೆ: ವಿಶ್ವ ಕ್ರಮಾಂಕದಲ್ಲಿ 25ನೇ ಸ್ಥಾನದಲ್ಲಿರುವ ಇಟಲಿಯ ಲೊರೆಂಝೊ ಮುಸೆಟ್ಟಿ ಪುರುಷರ ಸಿಂಗಲ್ಸ್‌ ಪ್ರಿಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ 4–6, 6–3, 6–3, 6–2 ರಿಂದ ಫ್ರಾನ್ಸ್‌ನ ಗಿಯೊವನ್ನಿ ಪೆಟ್ಶಿ ಪೆರಿಕಾರ್ಡ್ ಅವರನ್ನು ಸೋಲಿಸಿದರು.

ಆ ಮೂಲಕ ಈ ಬಾರಿ ಇಟಲಿಯ ಮೂವರು ಸಿಂಗಲ್ಸ್‌ನಲ್ಲಿ ಎಂಟರ ಘಟ್ಟ ತಲುಪಿದಂತಾಗಿದೆ. ಪುರುಷರ ಸಿಂಗಲ್ಸ್‌ನಲ್ಲಿ ಮುಸೆಟ್ಟಿ ಜೊತೆ ಅಗ್ರ ಕ್ರಮಾಂಕದ ಯಾನಿಕ್ ಸಿನ್ನರ್ ಅವರೂ ಕ್ವಾರ್ಟರ್ಸ್‌ ತಲುಪಿದ್ದಾರೆ. ಮಹಿಳೆಯ ಸಿಂಗಲ್ಸ್‌ನಲ್ಲಿ ವಿಶ್ವ ಕ್ರಮಾಂಕದಲ್ಲಿ ಏಳನೇ ಸ್ಥಾನದಲ್ಲಿರುವ ಜಾಸ್ಮಿನ್‌ ಪಾವೊಲಿನಿ ಕೂಡ ಎಂಟರ ಘಟ್ಟ ಪ್ರವೇಶಿಸಿದ್ದಾರೆ.

ರಿಬಾಕಿನಾ ಮುನ್ನಡೆ: ಮಹಿಳೆಯರ ಸಿಂಗಲ್ಸ್‌ನಲ್ಲಿ ಕಣದಲ್ಲುಳಿದಿರುವ ಅತಿ ಹೆಚ್ಚಿನ ಶ್ರೇಯಾಂಕದ ಆಟಗಾರ್ತಿಯಾದ ಎಲೆನಾ ರಿಬಾಕಿನಾ ಎಂಟರ ಘಟ್ಟ ತಲುಪಿದರು. ಭರ್ಜರಿ ಸರ್ವ್‌ಗಳಿಗೆ ಹೆಸರಾದ ನಾಲ್ಕನೇ ಶ್ರೇಯಾಂಕದ ರಿಬಾಕಿನಾ 6–3, 3–0 ಯಿಂದ ಮುನ್ನಡೆಯಲ್ಲಿದ್ದಾಗ ಅವರ ಎದುರಾಳಿ, 17ನೇ ಶ್ರೇಯಾಂಕದ ಅನ್ನಾ ಕಲಿನ್‌ಸ್ಕಾಯಾ (ರಷ್ಯಾ) ಮಣಿಕಟ್ಟಿನ ನೋವಿನಿಂದ ಪಂದ್ಯ
ಬಿಟ್ಟುಕೊಟ್ಟರು.

ಈ ಹಿಂದಿನ ಪಂದ್ಯದಲ್ಲಿ ಕರೊಲಿನ್‌ ವೊಜ್ನಿಯಾಕಿ ಅವರ ವಿರುದ್ಧ ಗಳಿಸಿದ ಗೆಲುವು ತಮ್ಮ ವಿಶ್ವಾಸ ವೃದ್ಧಿಸಲು ನೆರವಾಯಿತು ಎಂದು ಮಾಸ್ಕೊದಲ್ಲಿ ಜನಿಸಿದ ಕಜಕಸ್ತಾನದ ಆಟಗಾರ್ತಿ ಪ್ರತಿಕ್ರಿಯಿಸಿದರು. ಅವರು ಎಂಟರ ಘಟ್ಟದ ಪಂದ್ಯದಲ್ಲಿ 21ನೇ ಶ್ರೇಯಾಂಕದ ಎಲಿನಾ ಸ್ವಿಟೊಲಿನಾ ಅವರನ್ನು ಎದುರಿಸಲಿದ್ದಾರೆ.

ಉಕ್ರೇನ್‌ನ ಸ್ವಿಟೊಲಿನಾ ಇನ್ನೊಂದು ಪ್ರಿಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಚೀನಾದ ವಾಂಗ್‌ ಶಿನ್ಯು ಅವರನ್ನು 6–1, 6–2 ರಿಂದ ನಿರಾಯಾಸವಾಗಿ  ಹಿಮ್ಮೆಟ್ಟಿಸಿದರು.

ಕಣ್ಣೀರಿಟ್ಟ ಸ್ವಿಟೊಲಿನಾ: ಪಂದ್ಯ ಮುಗಿಸಿದ ತಕ್ಷಣ ಅವರು, ಉಕ್ರೇನ್‌ನ ರಾಜಧಾನಿ ಕೀವ್‌ನಲ್ಲಿ ಮಕ್ಕಳ ಆಸ್ಪತ್ರೆ ಮೇಲೆ ರಷ್ಯಾ ನಡೆಸಿದ ಕ್ಷಿಪಣಿ  ದಾಳಿಯ ವಿಷಯ ನೆನೆದು ಕಣ್ಣೀರಾದರು. ‘ಇಂಥ ಸ್ಥಿತಿಯಲ್ಲಿ ಪಂದ್ಯದ ಮೇಲೆ ಗಮನ ಕೇಂದ್ರೀಕರಿಸಿ ಆಡುವುದು ಕಷ್ಟದ ಕೆಲಸ’ ಎಂದರು.

ಗಾಫ್‌ ನಿರ್ಗಮನ

ಎರಡನೇ ಶ್ರೇಯಾಂಕದ ಕೊಕೊ ಗಾಫ್‌ ಮಹಿಳೆಯರ ಸಿಂಗಲ್ಸ್‌ನಿಂದ ಹೊರಬಿದ್ದರು. ಅಮೆರಿಕದ ಆಟಗಾರ್ತಿಯರ ವ್ಯವಹಾರವಾಗಿದ್ದ ಪ್ರಿಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ, ವಿಶ್ವ ಕ್ರಮಾಂಕದಲ್ಲಿ 19ನೇ ಸ್ಥಾನದಲ್ಲಿರುವ ಎಮ್ಮಾ ನವಾರೊ ಅವರು 6–4, 6–3 ರಿಂದ ಕೊಕೊ ಗಾಫ್‌ ಅವರನ್ನು ಸೋಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.