ADVERTISEMENT

ವಿಂಬಲ್ಡನ್‌ ಟೆನಿಸ್‌: ಸೆಮಿಫೈನಲ್‌ಗೆ ರಿಬಾಕಿನಾ ಲಗ್ಗೆ

ಏಜೆನ್ಸೀಸ್
Published 11 ಜುಲೈ 2024, 0:37 IST
Last Updated 11 ಜುಲೈ 2024, 0:37 IST
<div class="paragraphs"><p>ಎಲಿನಾ ಸ್ವಿಟೊಲಿನಾ ಅವರನ್ನು ಸೋಲಿಸಿ ಸೆಮಿಫೈನಲ್ ತಲುಪಿದ ಎಲೆನಾ ರಿಬಾಕಿನಾ ಪಂದ್ಯ ಮುಗಿದ ನಂತರ ಪ್ರೇಕ್ಷಕರತ್ತ ಕೈಬೀಸಿದರು </p><p>ಪಿಟಿಐ ಚಿತ್ರ</p></div>

ಎಲಿನಾ ಸ್ವಿಟೊಲಿನಾ ಅವರನ್ನು ಸೋಲಿಸಿ ಸೆಮಿಫೈನಲ್ ತಲುಪಿದ ಎಲೆನಾ ರಿಬಾಕಿನಾ ಪಂದ್ಯ ಮುಗಿದ ನಂತರ ಪ್ರೇಕ್ಷಕರತ್ತ ಕೈಬೀಸಿದರು

ಪಿಟಿಐ ಚಿತ್ರ

   

ಲಂಡನ್‌: ಪ್ರಮುಖ ಆಟಗಾರ್ತಿಯರು ಹೊರಬಿದ್ದಿರುವ ಕಾರಣ ಎಲೆನಾ ರಿಬಾಕಿನಾ ಈಗ ಮಹಿಳಾ ಸಿಂಗಲ್ಸ್‌ ಪ್ರಶಸ್ತಿಗೆ ಫೆವರೀಟ್ ಎನಿಸಿದ್ದಾರೆ. ಅದನ್ನು ಸಮರ್ಥಿಸುವಂತೆ ಆಡಿದ ರಿಬಾಕಿನಾ 6–3 6–2 ರಲ್ಲಿ ನೇರ ಸೆಟ್‌ಗಳಿಂದ ಉಕ್ರೇನ್‌ನ ಎಲೆನಾ ಸ್ವಿಟೊಲಿನಾ ಅವರನ್ನು ಬುಧವಾರ ಸೋಲಿಸಿ ವಿಂಬಲ್ಡನ್ ಚಾಂಪಿಯನ್‌ ಷಿಪ್ಸ್‌ನಲ್ಲಿ ಸೆಮಿಫೈನಲ್ ತಲುಪಿದರು.

ADVERTISEMENT

‘ನನ್ನ ಬಳಿ ಆಕ್ರಮಣಕಾರಿ ಶೈಲಿಯ ಆಟವಿದೆ. ಭರ್ಜರಿ ಸರ್ವ್‌ಗಳಿವೆ. ಇದು ನನ್ನ ಪಾಲಿಗೆ ಅನುಕೂಲಕರ ಅಂಶ’ ಎಂದು 25 ವರ್ಷ ವಯಸ್ಸಿನ ಕಜಕಸ್ತಾನದ ಆಟಗಾರ್ತಿ ಅಂಕಣದಲ್ಲೇ ನಡೆದ ಸಂದರ್ಶನದಲ್ಲಿ ಹೇಳಿದರು.

‘ನಿಜ, ನಾನು ಕೊನೆಯವರೆಗೆ ತಲುಪಲು ಬಯಸುವೆ. ಈಗ ಆಡುತ್ತಿರುವ ರೀತಿಯಿಂದ ಸಂತಸವಿದೆ’ ಎಂದೂ ಹೇಳಿದರು.

ನಾಲ್ಕನೇ ಶ್ರೇಯಾಂಕದ ರಿಬಾಕಿನಾ, ಕಣದಲ್ಲಿ ಉಳಿದಿರುವ ಅತಿ ಹೆಚ್ಚಿನ ಶ್ರೇಯಾಂಕದ ಆಟಗಾರ್ತಿಯಾಗಿದ್ದಾರೆ. ಆಲ್‌ ಇಂಗ್ಲೆಂಡ್ ಕ್ಲಬ್‌ನಲ್ಲಿ ಅವರ ಗೆಲುವಿನ ದಾಖಲೆ 19–2.

ರಿಬಾಕಿನಾ ಅವರ ಮುಂದಿನ ಎದುರಾಳಿ, 31ನೇ ಶ್ರೇಯಾಂಕದ ಬಾರ್ಬೊರಾ ಕ್ರೇಜಿಕೋವಾ. ಇನ್ನೊಂದು ಕ್ವಾರ್ಟರ್‌ ಫೈನಲ್‌ನಲ್ಲಿ ಕ್ರೇಜಿಕೋವಾ 6–4, 7–6 (4) ರಿಂದ 13ನೇ ಶ್ರೇಯಾಂಕದ ಯೆಲೆನಾ ಒಸ್ಟಪೆಂಕೊ ಅವರ ಸವಾಲನ್ನು ಬದಿಗೊತ್ತಿದರು.

ಇಬ್ಬರೂ– ಕ್ರೇಜಿಕೋವಾ ಮತ್ತು ಒಸ್ಟಪೆಂಕೊ– ಫ್ರೆಂಚ್‌ ಓಪನ್‌ ಮಾಜಿ ಚಾಂಪಿಯನ್ನರಾಗಿದ್ದಾರೆ. ಝೆಕ್‌ ರಿಪಬ್ಲಿಕ್‌ನ ಕ್ರೇಜಿಕೋವಾ 2021ರಲ್ಲಿ ಮತ್ತು ಲಾತ್ವಿಯಾದ ಒಸ್ಟಪೆಂಕೊ 2017ರಲ್ಲಿ ರೋಲಂಡ್‌ ಗ್ಯಾರೋಸ್‌ನಲ್ಲಿ ಚಾಂಪಿಯನ್ನರಾಗಿದ್ದರು.

ಕ್ವಾರ್ಟರ್‌ ಫೈನಲ್‌ವರೆಗೆ ಒಂದೂ ಸೆಟ್‌ ಕಳೆದುಕೊಳ್ಳದ ಒಸ್ಟಪೆಂಕೊ, ಎರಡನೇ ಸೆಟ್‌ ವೇಳೆ ಸಹನೆ ಕಳೆದುಕೊಂಡು ಸ್ಥಳದಿಂದ ಹೊರಡುವಂತೆ ಕೋಚ್‌ಗೆ ಸೂಚಿಸಿದ್ದರು.

ಉಕ್ರೇನ್‌ನ ರಾಜಧಾನಿ ಕೀವ್‌ನ ಮಕ್ಕಳ ಆಸ್ಪತ್ರೆ ಮೇಲೆ ರಷ್ಯಾದ ಕ್ಷಿಪಣಿ ದಾಳಿಯಲ್ಲಿ ಸಂತ್ರಸ್ತರಿಗೆ ಸಂತಾಪ ಸೂಚಿಸಿ ಈ ಹಿಂದಿನ ಪಂದ್ಯದಲ್ಲಿ ಸ್ವಿಟೊಲಿನಾ ಕಪ್ಪು ರಿಬ್ಬನ್
ಧರಿಸಿದ್ದರು. ಆದರೆ ಬುಧವಾರ ಅದು ಕಾಣಲಿಲ್ಲ.

ಆಡದೇ ಸೆಮಿ ತಲುಪಿದ ಜೊಕೊವಿಚ್

ಲಂಡನ್ : ನೊವಾಕ್‌ ಜೊಕೊವಿಚ್‌ 13ನೇ ಸಲ ವಿಂಬಲ್ಡನ್‌ ಪುರುಷರ ಸಿಂಗಲ್ಸ್‌ ಸೆಮಿಫೈನಲ್ ತಲುಪಿ ರೋಜರ್‌ ಫೆಡರರ್ ಹೆಸರಿನಲ್ಲಿರುವ ದಾಖಲೆ ಸರಿಗಟ್ಟಿದರು. ಆದರೆ ಇದಕ್ಕಾಗಿ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಚೆಂಡನ್ನು ಒಮ್ಮೆಯೂ ಹೊಡೆಯಲಿಲ್ಲ.

ಅವರ ಎದುರಾಳಿ, 9ನೇ ಶ್ರೇಯಾಂಕದ ಅಲೆಕ್ಸ್‌ ಡಿ ಮಿನೋರ್ ಗಾಯದಿಂದ ಹಿಂದೆ ಸರಿದಿರುವುದಾಗಿ ಬುಧವಾರ ಪ್ರಕಟಿಸಿದರು. ಹೀಗಾಗಿ ಸರ್ಬಿಯಾದ ಆಟಗಾರ ಬೆವರು ಹರಿಸುವ ಪ್ರಮೇಯ ಬರಲಿಲ್ಲ.

ಪೃಷ್ಟದ ನೋವಿನಿಂದಾಗಿ ಟೂರ್ನಿಯಿಂದ ಹಿಂದೆ ಸರಿಯವುದಾಗಿ 25 ವರ್ಷ ವಯಸ್ಸಿನ ಡಿ ಮಿನೋರ್ ಮಧ್ಯಾಹ್ನದ ವೇಳೆಗೆ ತಿಳಿಸಿದರು.

37 ವರ್ಷ ವಯಸ್ಸಿನ ಜೊಕೊವಿಚ್‌ ಅವರು ಗ್ರ್ಯಾನ್‌ಸ್ಲಾಮ್‌ ಟೂರ್ನಿಗಳಲ್ಲಿ 49ನೇ ಸಲ ಸೆಮಿಫೈನಲ್ ತಲುಪಿದಂತಾಗಿದೆ. ಅವರು ಗ್ರ್ಯಾನ್‌ಸ್ಲಾಮ್‌ ಟೂರ್ನಿಗಳಲ್ಲಿ ದಾಖಲೆಯ 25ನೇ ಸಿಂಗಲ್ಸ್‌ ಪ್ರಶಸ್ತಿಯ ವಿಶ್ವಾಸದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.