ADVERTISEMENT

60 ವರ್ಷ ಬಳಿಕ ಪಾಕ್ ಪ್ರವಾಸ: ಭಾರತ ಡೇವಿಸ್ ಕಪ್ ತಂಡಕ್ಕೆ ಬಿಗಿ ಭದ್ರತೆ

ವಿಶ್ವ ಗುಂಪಿನ ಪಂದ್ಯ

ಪಿಟಿಐ
Published 29 ಜನವರಿ 2024, 23:30 IST
Last Updated 29 ಜನವರಿ 2024, 23:30 IST
<div class="paragraphs"><p>ರಾಮಕುಮಾರ್ ರಾಮನಾಥನ್</p></div>

ರಾಮಕುಮಾರ್ ರಾಮನಾಥನ್

   

ಇಸ್ಲಾಮಾಬಾದ್: ‍‍‍ಡೇವಿಸ್‌  ಕಪ್‌ ವಿಶ್ವಗುಂಪಿನ ಪಂದ್ಯವಾಡಲು ಪಾಕಿಸ್ತಾನ ‍ಪ್ರವಾಸ ಕೈಗೊಂಡಿರುವ ಭಾರತ ಡೇವಿಸ್ ಕಪ್ ತಂಡಕ್ಕೆ ದೇಶದ ಗಣ್ಯರಿಗೆ ಒದಗಿಸುವ ರೀತಿಯ ಭದ್ರತೆಯನ್ನೇ ಒದಗಿಸಲಾಗಿದೆ. 

60 ವರ್ಷಗಳಲ್ಲಿ ಮೊದಲ ಬಾರಿ  ಭಾರತ  ಟೆನಿಸ್‌  ತಂಡ  ಪಾಕಿಸ್ತಾನಕ್ಕೆ ಭೇಟಿ ನೀಡಿದೆ.

ADVERTISEMENT

ಐವರು ಆಟಗಾರರು, ಇಬ್ಬರು ಫಿಸಿಯೋಗಳು ಮತ್ತು ಇಬ್ಬರು ಎಐಟಿಎ ಅಧಿಕಾರಿಗಳನ್ನು ಒಳಗೊಂಡ ಭಾರತ ತಂಡ ಭಾನುವಾರ ರಾತ್ರಿ ಇಸ್ಲಾಮಾಬಾದ್ ತಲುಪಿದೆ. 

ಫೆ.3 ಮತ್ತು 4ರಂದು ಪಂದ್ಯಗಳು ನಡೆಯಲಿದೆ. ಪಂದ್ಯಗಳು ನಡೆಯುವ ಇಸ್ಲಾಮಾಬಾದ್ ಸ್ಪೋರ್ಟ್‌ ಕ್ಲಾಂಪೆಕ್ಸ್‌ನಲ್ಲಿ ಬಾಂಬ್‌ ನಿಷ್ಕ್ರಿಯ ದಳ ನಿತ್ಯ ಬೆಳಿಗ್ಗೆ ತಪಾಸಣೆ ಕೈಗೊಳ್ಳಲಿದೆ. ಆಟಗಾರರ ಸುರಕ್ಷತೆ ಮತ್ತು ಭದ್ರತೆ ಖಚಿತಪಡಿಸಿಕೊಳ್ಳಲು ಅತಿ ಗಣ್ಯರಿಗೆ ನೀಡುವ ಬಹುಸ್ತರ ಭದ್ರತಾ ವ್ಯವಸ್ಥೆ ಜತೆಗೆ ತಂಡ ಪ್ರಯಾಣಿಸುವ ವೇಳೆ ಎರಡು ಬೆಂಗಾವಲು ವಾಹನ ಒದಗಿಸಲಾಗಿದೆ.  

ಭಾರತ ಡೇವಿಸ್‌ ಕಪ್ ತಂಡ 1964 ರಲ್ಲಿ ಕೊನೆಯ ಬಾರಿ ಪಾಕಿಸ್ತಾನಕ್ಕೆ ತೆರಳಿತ್ತು. ಆಗ  ಭಾರತ 4–0 ಅಂತರದಿಂದ ಜಯಗಳಿಸಿತ್ತು. 

‘60 ವರ್ಷಗಳ ನಂತರ ಭಾರತ ತಂಡ ಪಾಕಿಸ್ತಾನಕ್ಕೆ ಬಂದಿರುವ ಕಾರಣ ಹೆಚ್ಚುವರಿ ಮುನ್ನೆಚ್ಚರಿಕೆ ತೆಗೆದುಕೊಳ್ಳುತ್ತಿದ್ದೇವೆ. ಭಾರತ ತಂಡಕ್ಕೆ ನಾಲ್ಕರಿಂದ ಐದು ಹಂತಗಳ ಭದ್ರತೆ ಕಲ್ಪಿಸಲಾಗಿದೆ. ಈವೆಂಟ್ ಸೆಕ್ಯುರಿಟಿ ಮ್ಯಾನೇಜರ್ ಆಗಿ ನಾನು ಪ್ರಯಾಣದ ಸಮಯದಲ್ಲಿ ಅವರೊಂದಿಗೆ ಇದ್ದೇನೆ’ ಎಂದು ಪಿಟಿಎಫ್ ಪ್ರಧಾನ ಕಾರ್ಯದರ್ಶಿ ಕರ್ನಲ್ ಗುಲ್ ರೆಹಮಾನ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.  

‘ಇಸ್ಲಾಮಾಬಾದ್ ಏಷ್ಯಾದ ಸುರಕ್ಷಿತ ನಗರಗಳಲ್ಲಿ ಒಂದಾಗಿದೆ. ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿರುವುದರಿಂದ ಭದ್ರತೆ ಈಗಾಗಲೇ ಬಿಗಿಯಾಗಿದೆ. ನಗರದಲ್ಲಿ ಸುಮಾರು 10,000 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಭಾರತೀಯ ಆಟಗಾರರ ಸುರಕ್ಷತೆ ಮತ್ತು ಭದ್ರತೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ’ ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.